ಪೆನ್‌ಡ್ರೈವ್‌ ಪ್ರಕರಣ | ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
x

ಪೆನ್‌ಡ್ರೈವ್‌ ಪ್ರಕರಣ | ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ದೇಶಾದ್ಯಂತ ಸದ್ದು ಮಾಡುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಆರೋಪಿ ವಿರುದ್ಧ ಹೊಸದಾಗಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.


ದೇಶಾದ್ಯಂತ ಸದ್ದು ಮಾಡುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಆರೋಪಿ ವಿರುದ್ಧ ಹೊಸದಾಗಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ಸಂತ್ರಸ್ತೆಯೊಬ್ಬರು ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಆರೋಪಿಗಳ ವಿರುದ್ಧ ಐಪಿಸಿ ಕಲಂ 376 ಸೇರ್ಪಡೆ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಜೊತೆಗೆ ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ 164 ಅಡಿಯಲ್ಲಿ ಕೊಟ್ಟ ಹೇಳಿಕೆ ಆಧರಿಸಿ ಎಫ್‍ಐಆರ್ ದಾಖಲಿಸಲಾಗಿದೆ.

ವಿದೇಶಕ್ಕೆ ಪರಾರಿಯಾಗಿರುವ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ 'ಲುಕ್ ಔಟ್' ನೋಟಿಸ್ ಜಾರಿ ಮಾಡಿದೆ. ದೇಶದ ಎಲ್ಲಾನಗರಗಳ ಪೊಲೀಸ್ ವಿಭಾಗಗಳು, ತನಿಖಾ ಸಂಸ್ಥೆಗಳು, ಗುಪ್ತಚರ ದಳಗಳಿಗೂ ಈ ಮಾಹಿತಿ ರವಾನಿಸಲಾಗಿದೆ. ಜತೆಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಇಮ್ಮಿಗ್ರೇಶನ್ ಅಧಿಕಾರಿಗಳಿಗೂ ಲುಕ್‌ಔಟ್ ನೋಟಿಸ್ ಕಳುಹಿಸಿ ಆರೋಪಿ ಸುಳಿವು ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ. ಪ್ರಜ್ವಲ್ ರೇವಣ್ಣ ಎಲ್ಲೇ ಕಾಣಿಸಿಕೊಂಡರೂ ಅರೆಸ್ಟ್ ಆಗುವುದು ಖಚಿತವಾಗಿದೆ. ಜೊತೆಗೆ ಇದೀಗ ಎಸ್‌ಐಟಿ ಅಧಿಕಾರಿಗಳು ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಇಂದು ಮತ್ತೆ ನೋಟಿಸ್ ನೀಡಿದ್ದಾರೆ.

ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಕೋರಿದ್ದ ಪ್ರಜ್ವಲ್ ಪರ ವಕೀಲರ ಮನವಿಯನ್ನು ಕಾನೂನು ಮಾನ್ಯತೆ ಇಲ್ಲದ ಕಾರಣಕ್ಕೆ ಎಸ್‌ಐಟಿ ತಿರಸ್ಕರಿಸಿದೆ ಎನ್ನಲಾಗಿದೆ. ಹೀಗಾಗಿ, ವಿದೇಶದಲ್ಲಿರುವ ಪ್ರಜ್ವಲ್ ದೇಶಕ್ಕೆ ವಾಪಸಾಗುವ ಸಿದ್ಧತೆ ನಡೆಸಿದ್ದು, ದೇಶದ ಯಾವುದೇ ನಗರದಲ್ಲಿ ಲ್ಯಾಂಡ್ ಆದರೂ, ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ತೀರ್ಮಾನಿಸಿದೆ.

ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಪೆನ್‌ಡ್ರೈವ್ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ವಿಚಾರಣೆ ನಡೆಸಲು ಎಸ್‌ಐಟಿ ನಿರ್ಧರಿಸಿದೆ. ತನಿಖಾ ತಂಡದ ಮುಂದೆ ಹಾಜರಾಗಿ ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರ ನೀಡಿ, ದಾಖಲೆಗಳನ್ನು ಒದಗಿಸುವುದಾಗಿ ಹೇಳಿದ್ದ ಕಾರ್ತಿಕ್, ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.

ಕಾರ್ತೀಕ್‌ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ, ಅದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದೆ. ವಿಚಾರಣೆಗೆ ಹಾಜರಾಗಿ ಕೇಸ್‌ಗೆ ಸಂಬಂಧಿಸಿದ ದಾಖಲೆ, ವಿವರ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಪೆನ್‌ಡ್ರೈವ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ನವೀನ್‌ಗೌಡ ಎಂಬುವವರಿಗೂ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.

ಸಂಸದ ಪ್ರಜ್ವಲ್ ಭಾಗಿಯಾಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಮೊದಲು ಯಾರು ಬಿಡುಗಡೆ ಮಾಡಿದರು ಎಂಬುದರ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದೆ. ಕಾರ್ತಿಕ್, ಸ್ವತಃ ಮೊದಲ ಬಾರಿಗೆ ವಾಟ್ಸ್ಯಾಪ್ ಮುಖಾಂತರ ಹರಿಬಿಟ್ಟಿದ್ದರು ಎನ್ನುವುದರ ಸುಳಿವು ತನಿಖಾ ತಂಡಕ್ಕೆ ಸಿಕ್ಕಿದ್ದು, ಈ ಬಗ್ಗೆ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ ಎಂದು ಮೂಲಗಳು ಹೇಳಿವೆ.

Read More
Next Story