31 ಸಾವಿರ ಕೋಟಿ ಬಾಕಿ ಪಾವತಿಸಿ: ಸರ್ಕಾರಕ್ಕೆ ಗುತ್ತಿಗೆದಾರರ ಗಡುವು
ʼಕೆಲ ಇಲಾಖೆಗಳಲ್ಲಿ ತಮಗೆ ಬೇಕಾದ ಪ್ರಭಾವಿ ಗುತ್ತಿಗೆದಾರರಿಗೆ ಮಾತ್ರ ಬಾಕಿ ಮೊತ್ತ ಪಾವತಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇಲಾಖೆ ಉಸ್ತುವಾರಿ ಹೊಂದಿರುವ ಸಚಿವರೊಂದಿಗೆ ಮಾತನಾಡಿ ಎಂಬ ಹೇಳಿಕೆ ನೀಡುತ್ತಿದ್ದಾರೆ' ಎಂದು ದೂರಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬಾಕಿ ಇರುವ ಗುತ್ತಿಗೆದಾರರ 31 ಸಾವಿರ ಕೋಟಿ ಮೊತ್ತದ ಬಿಲ್ ಮೊತ್ತವನ್ನು ಒಂದು ತಿಂಗಳೊಳಗೆ ಬಿಡುಗಡೆಗೊಳಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದೆ.
ಈ ಬಗ್ಗೆ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಬಿ. ಶೇಗಜಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಚಿವರಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಬಾಕಿ ಇರುವ 31 ಸಾವಿರ ರೂ ಬಿಲ್ ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆಮಾಡಬೇಕಿತ್ತು. ಕೆಲ ಇಲಾಖೆಗಳಲ್ಲಿ ಶೇಕಡ 7ರಿಂದ 15ರಷ್ಟು ಬಿಲ್ ಮೊತ್ತವನ್ನು ಪಾವತಿಸುತ್ತಿವೆ. ಕೆಲ ಇಲಾಖೆಗಳಲ್ಲಿ ತಮಗೆ ಬೇಕಾದ ಪ್ರಭಾವಿ ಗುತ್ತಿಗೆದಾರರಿಗೆ ಮಾತ್ರ ಬಾಕಿ ಮೊತ್ತ ಪಾವತಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇಲಾಖೆ ಉಸ್ತುವಾರಿ ಹೊಂದಿರುವ ಸಚಿವರೊಂದಿಗೆ ಮಾತನಾಡಿ ಎಂಬ ಹೇಳಿಕೆ ನೀಡುತ್ತಿದ್ದಾರೆ' ಎಂದು ದೂರಿದ್ದಾರೆ.
'ಯಾವುದೇ ಇಲಾಖೆಯಲ್ಲಿ ಜೇಷ್ಠತೆಯನ್ನು ಪಾಲಿಸುತ್ತಿಲ್ಲ. ಸಣ್ಣ ನೀರಾವರಿ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಬಿಬಿಎಂಪಿ ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿ, ಆಯಾ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಕೂಡಲೇ ಸಭೆ ಕರೆದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
'ಮೂರು ಮತ್ತು ನಾಲ್ಕನೇ ದರ್ಜೆಯ ಗುತ್ತಿಗೆದಾರರು ಹಣವನ್ನು ಬ್ಯಾಂಕ್, ಖಾಸಗಿ ಲೇವಾದೇವಿಗಾರರು ಮತ್ತು ಆಸ್ತಿ ಅಡವಿಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಬಿಲ್ ಮೊತ್ತ ಪಾವತಿಯಾಗದ ಕಾರಣ ಗುತ್ತಿಗೆದಾರರು ಊರು ಬಿಟ್ಟು ಹೋಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾರೆ' ಎಂದು ಹೇಳಿದರು.
'ಯಾವುದೇ ಸರ್ಕಾರಗಳು ಅಧಿಕಾರದಲ್ಲಿದ್ದಾಗ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆಗೊಳಿಸಲಾಗುತ್ತಿತ್ತು. ಆದರೆ, ಈಗಿನ ಸರ್ಕಾರ ಇದುವರೆಗೂ ಯಾವುದೇ ಬಾಕಿ ಬಿಲ್ ಬಿಡುಗಡೆ ಮಾಡಿಲ್ಲ' ಎಂದು ಅವರು ಆರೋಪಿಸಿದರು. ಒಂದು ತಿಂಗಳ ಒಳಗಾಗಿ ಕನಿಷ್ಟ ಶೇ.50 ರಷ್ಟು ಬಾಕಿ ಹಣವನ್ನು ಬಿಡುಗಡೆ ಮಾಡದೇ ಹೋದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.