
ನಮ್ಮ ಮೆಟ್ರೋ
ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ 'ಶೋಷಣೆ': ಕನಿಷ್ಠ ಬ್ಯಾಲೆನ್ಸ್ ಕಡ್ಡಾಯಕ್ಕೆ ಮತ್ತೆ ವಿರೋಧ
90 ರೂ.ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ನಿಯಮದ ವಿರುದ್ಧ ಬೆಂಗಳೂರು ಮೆಟ್ರೋ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಮ್ಮ ಮೆಟ್ರೊ' ಸ್ಮಾರ್ಟ್ ಕಾರ್ಡ್‌ಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಿಧಿಸಿರುವ ₹90 ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ನಿಯಮದ ವಿರುದ್ಧ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಈ ನಿಯಮವನ್ನು ಜಾರಿಗೊಳಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು "ಶೋಷಣೆ" ಮತ್ತು "ಅಸಮಂಜಸ" ಎಂದು ಕರೆದಿದ್ದಾರೆ.
ಅನೇಕ ಮೆಟ್ರೋ ಬಳಕೆದಾರರು ತಮ್ಮ ಪ್ರಯಾಣಕ್ಕೆ ಬೇಕಾದಷ್ಟು ಹಣವಿದ್ದರೂ, ಕಾರ್ಡ್‌ನಲ್ಲಿ 90 ರೂ.ಗಿಂತ ಕಡಿಮೆ ಬಾಲೆನ್ಸ್ ಇದ್ದರೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. "ನನ್ನ ಮೆಟ್ರೋ ಸ್ಮಾರ್ಟ್ ಕಾರ್ಡ್‌ನಲ್ಲಿ 89 ರೂ. ಬಾಕಿ ಇದ್ದರೂ, ನಿರ್ಗಮನ ದ್ವಾರದಲ್ಲಿ 10 ರೂ. ಪ್ರಯಾಣ ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳಿಗೆ ಕನಿಷ್ಠ ಬ್ಯಾಲೆನ್ಸ್ 90 ರೂ. ಕಡ್ಡಾಯ. ರೀಚಾರ್ಜ್ ಮಾಡುವುದನ್ನು ಬಿಟ್ಟು ಬೇರೆ ಪರಿಹಾರವಿದೆಯೇ?" ಎಂದು ಒಬ್ಬ ಪ್ರಯಾಣಿಕರು 'ಎಕ್ಸ್' (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ಈ ನಿಯಮವನ್ನು "ಗಂಭೀರ ವಂಚನೆ" ಎಂದು ಕರೆದಿದ್ದು, "ದರ ಹೆಚ್ಚಳದ ನಂತರ, ಕನಿಷ್ಠ ಬ್ಯಾಲೆನ್ಸ್ ಅನ್ನು 90 ರೂ.ಗೆ ಏರಿಸಿದ್ದಾರೆ. ಇದು ಬಹುತೇಕ ದ್ವಿಮುಖ ಪ್ರಯಾಣದ ಹಣದಷ್ಟಿದೆ. ಈ ನಿಯಮವನ್ನು ತೆಗೆದುಹಾಕಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಯಮದ ಮೂಲಕ ಮೆಟ್ರೋ ಸಂಸ್ಥೆಯು ಪ್ರಯಾಣಿಕರ ಹಣವನ್ನು ಅನಗತ್ಯವಾಗಿ ಸಂಗ್ರಹಿಸುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
"ನಾಗಸಂದ್ರದಿಂದ ಸ್ಯಾಂಡಲ್ ಸೋಪ್ ಫ್ಯಾಕ್ಟರಿಗೆ ಪ್ರಯಾಣಿಸಲು ನನ್ನ ಕಾರ್ಡ್‌ನಲ್ಲಿ 85 ರೂ. ಇತ್ತು, ಪ್ರಯಾಣ ದರ 40 ರೂ. ಆಗಿದ್ದರೂ ಗೇಟ್‌ನಲ್ಲಿ ಸ್ವೀಕರಿಸಲಿಲ್ಲ. ನಾನು ಬಲವಂತವಾಗಿ 100 ರೂ. ರೀಚಾರ್ಜ್ ಮಾಡಬೇಕಾಯಿತು. ಒಟ್ಟು 180 ರೂ. ಹೋಯಿತು" ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕಾರ್ಡ್‌ನಲ್ಲಿ ಯಾವುದೇ ಕನಿಷ್ಠ ಬ್ಯಾಲೆನ್ಸ್ ಇರಬಾರದು, ಈ ನಿಯಮವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.
ರಾಜಕೀಯ ತಿರುವು ಮತ್ತು ದರ ಏರಿಕೆ ವಿವಾದ
ಈ ದೂರುಗಳು, ಇತ್ತೀಚೆಗೆ ಮೆಟ್ರೋ ದರ ಏರಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ವ್ಯಾಪಕ ಆಕ್ರೋಶದ ನಡುವೆಯೇ ಬಂದಿವೆ. ಈ ದರ ಏರಿಕೆಯು ಈಗಾಗಲೇ ರಾಜಕೀಯ ಗಮನ ಸೆಳೆದಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, "ನಿರ್ವಹಣೆ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಲೆಕ್ಕಾಚಾರ ಮಾಡುವಲ್ಲಿ ಬಿಎಂಆರ್‌ಸಿಎಲ್ ಮಾಡಿದ ಪ್ರಮುಖ ಲೆಕ್ಕಾಚಾರ ದೋಷದಿಂದಾಗಿ ಪ್ರಯಾಣಿಕರ ಮೇಲೆ ₹150 ಕೋಟಿ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ" ಎಂದು ಇತ್ತೀಚೆಗೆ ಆರೋಪಿಸಿದ್ದರು.
ಈ ವಾರ ನಡೆದ ಪರಿಶೀಲನಾ ಸಭೆಯಲ್ಲಿ, ಶುಲ್ಕ ನಿಗದಿ ಸಮಿತಿಗೆ (FFC) ಪ್ರಸ್ತಾವನೆ ಸಿದ್ಧಪಡಿಸುವಾಗ, ಬಿಎಂಆರ್‌ಸಿಎಲ್ 2017-18ರ ಡೇಟಾದ ಬದಲು 2016-17ರ ಡೇಟಾವನ್ನು ಬಳಸಿದೆ ಎಂದು ಅವರು ತಿಳಿಸಿದ್ದರು. "ಈ ತಪ್ಪಾದ ಲೆಕ್ಕಾಚಾರದಿಂದಾಗಿ ದರಗಳಲ್ಲಿ ಅನ್ಯಾಯದ ಹೆಚ್ಚಳವಾಗಿದೆ. ಇದನ್ನು ತಕ್ಷಣವೇ ತಿದ್ದುಪಡಿ ಮಾಡಬೇಕು" ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದರು.
ಫೆಬ್ರವರಿಯಲ್ಲಿ ಜಾರಿಗೆ ಬಂದ ಹೊಸ ದರ ನೀತಿಯ ಪ್ರಕಾರ, ಗರಿಷ್ಠ ದರವನ್ನು 60 ರಿಂದ 90 ರೂ.ಗೆ ಏರಿಸಲಾಗಿತ್ತು. ಇದರೊಂದಿಗೆ, ಸ್ಮಾರ್ಟ್ ಕಾರ್ಡ್‌ನಲ್ಲಿನ ಕನಿಷ್ಠ ಬ್ಯಾಲೆನ್ಸ್ ಅನ್ನು 50 ರಿಂದ 90 ರೂ. ಗೆ ಹೆಚ್ಚಿಸಲಾಗಿತ್ತು. ಇದು ಪ್ರಯಾಣಿಕರ ಜೇಬಿಗೆ ಮತ್ತಷ್ಟು ಹೊರೆಯಾಗಿದ್ದು, ಈ ನಿಯಮವನ್ನು ಹಿಂಪಡೆಯುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವೇ ಆರಂಭವಾಗಿದೆ.

