![Namma Metro Fare Hike | ದರ ಏರಿಕೆ ವಿರುದ್ಧ ಪ್ರಯಾಣಿಕರ ಆಕ್ರೋಶ, ಸಿಬ್ಬಂದಿಯೊಂದಿಗೆ ವಾಗ್ವಾದ Namma Metro Fare Hike | ದರ ಏರಿಕೆ ವಿರುದ್ಧ ಪ್ರಯಾಣಿಕರ ಆಕ್ರೋಶ, ಸಿಬ್ಬಂದಿಯೊಂದಿಗೆ ವಾಗ್ವಾದ](https://karnataka.thefederal.com/h-upload/2025/02/10/511886-metrostatio.webp)
Namma Metro Fare Hike | ದರ ಏರಿಕೆ ವಿರುದ್ಧ ಪ್ರಯಾಣಿಕರ ಆಕ್ರೋಶ, ಸಿಬ್ಬಂದಿಯೊಂದಿಗೆ ವಾಗ್ವಾದ
ಮೆಟ್ರೋ ಪ್ರಯಾಣ ದರ ಏರಿಕೆಯಾಗಿರುವುದನ್ನು ಕಂಡ ಪ್ರಯಾಣಿಕರು ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆಗಳು ಸೋಮವಾರ ಬಹುತೇಕ ಮೆಟ್ರೋ ನಿಲ್ದಾಣಗಳಲ್ಲಿ ನಡೆದಿದೆ.
ಭಾನುವಾರ ರಜೆಯ ಗುಂಗಿನಲ್ಲಿದ್ದ ಪ್ರಯಾಣಿಕರು ಸೋಮವಾರ ಕೆಲಸ ಕಾರ್ಯಗಳಿಗೆ ತೆರಳಲು ಮೆಟ್ರೋ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣ ದರ ದುಪ್ಪಟ್ಟಾಗಿರುವ ಸುದ್ದಿ ಕೇಳಿ ಆಘಾತಕ್ಕೆ ಒಳಗಾದರು.
ನಗರದ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಎಂದಿನಂತೆ ಟೋಕನ್ ಖರೀದಿ, ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಲು ಹೋದಾಗ ಒಮ್ಮೆಲೆ ಪ್ರಯಾಣ ದರ ಏರಿಕೆಯಾಗಿರುವುದನ್ನು ಕಂಡು ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆಗಳು ಬಹುತೇಕ ಮೆಟ್ರೋ ನಿಲ್ದಾಣಗಳಲ್ಲಿ ನಡೆದಿದೆ.
ಗರಿಷ್ಠ 90 ರೂ. ವರೆಗೂ ಪ್ರಯಾಣ ದರ ಏರಿಕೆಯಾಗಿರುವುದು ಶ್ರೀಸಾಮಾನ್ಯರು ಹಾಗೂ ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸೋಮವಾರ ಬೆಳಿಗ್ಗೆ ದಾಸರಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದ ಹುಬ್ಬಳ್ಳಿ ಮೂಲದ ಜಾಲಹಳ್ಳಿಯಲ್ಲಿ ವಾಸವಾಗಿರುವ ರಾಘವೇಂದ್ರ ಎಂಬುವರು ಪ್ರಯಾಣ ದರ ಏರಿಕೆಗೆ ಸಿಟ್ಟು ಹೊರಹಾಕಿದರು. ಮೆಟ್ರೋ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು.
ಈ ವೇಳೆ ʼದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿದ ಅವರು, “ಪ್ರತಿ ದಿನ ಜಯನಗರಕ್ಕೆ 50 ರೂ. ಪಾವತಿಸಿ ಪ್ರಯಾಣಿಸುತ್ತಿದ್ದೆ. ಈಗ ದಿಢೀರ್ 80ರೂ.ಗೆ ಏರಿಕೆಯಾಗಿದೆ. ಯಾವುದೇ ಸೂಚನೆ ನೀಡದೇ ಪ್ರಯಾಣ ದರ ಏರಿಕೆ ಮಾಡಿದ್ದಾರೆ. ಇದಕ್ಕಿಂತ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವುದೇ ಲೇಸು. ನಮ್ಮಂಥವರಿಗೆ ಮೆಟ್ರೋ ಪ್ರಯಾಣ ಸಾಧ್ಯವಿಲ್ಲ” ಎಂದು ಅಲವತ್ತುಕೊಂಡರು.
ಪ್ರಯಾಣ ದರ ಏರಿಕೆ ಕುರಿತಂತೆ ಟೋಕನ್ ನೀಡುವ ಸಿಬ್ಬಂದಿಯನ್ನು ವಿಚಾರಿಸಿದಾಗ "ಭಾನುವಾರದಿಂದ ಪ್ರಯಾಣ ದರ ಪರಿಷ್ಕರಣೆ ಆಗಿದೆ. ಬೆಳಿಗ್ಗೆಯಿಂದ ಪ್ರಯಾಣಿಕರು ನಮ್ಮ ಮೇಲೆ ಜಗಳ ಮಾಡುತ್ತಿದ್ದಾರೆ. ನಾವು ನಮ್ಮ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ" ಎಂದು ಅಸಹಾಯಕರಾಗಿ ಹೇಳಿದರು.
ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ದೃಶ್ಯ
ನಾಳೆಯಿಂದ ಜನ ಕಡಿಮೆ ಆಗಬಹುದು
"ಇನ್ನು ಮೆಟ್ರೋದಲ್ಲಿ ಬೇಗ ಕಚೇರಿ, ಇನ್ನಿತರೆ ಕೆಲಸಗಳಿಗೆ ಹೋಗಬಹುದು ಎಂದು ಪ್ರಯಾಣಿಕರು ಬಂದಿದ್ದಾರೆ. ಪ್ರಯಾಣ ದರ ಹೆಚ್ಚಿಸಿರುವ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ನಾಳೆಯಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖ ಆಗಬಹುದು" ಎಂದು ಮೆಟ್ರೋ ಪಾರ್ಕಿಂಗ್ ಸಿಬ್ಬಂದಿಯೊಬ್ಬರು ಹೇಳಿದರು.
ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೂ ಕೂಡ ಇದೇ ವಿಚಾರ ಚರ್ಚಿಸುತ್ತಿದ್ದರು. ಏಕಾಏಕಿ ಶೇ 50 ರಷ್ಟು ಪ್ರಯಾಣ ದರ ಏರಿಕೆ ಮಾಡಿರುವ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದರು.
ಬಿಎಂಟಿಸಿಯತ್ತ ಹೊರಳಿದ ಪ್ರಯಾಣಿಕರು
ಮೆಟ್ರೋ ಪ್ರಯಾಣ ದರ ದುಪ್ಪಟ್ಟಾಗಿರುವುದರಿಂದ ಕಂಗಾಲಾದ ಕೆಲವು ಪ್ರಯಾಣಿಕರು, ಮೆಟ್ರೋ ನಿಲ್ದಾಣಗಳಿಂದ ವಾಪಸ್ ಹೋಗಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದರು. ಮಾದಾವರದಿಂದ ಮೆಜೆಸ್ಟಿಕ್ಗೆ ತೆರಳುವ ಹಸಿರು ಮಾರ್ಗದ ಮೆಟ್ರೋ ಹಾದಿಯಲ್ಲಿ ಬಿಎಂಟಿಸಿ ಬಸ್‌ಗಳು ಸೋಮವಾರ ಬೆಳಿಗ್ಗೆಯಿಂದಲೇ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ದೃಶ್ಯಗಳೇ ಇದಕ್ಕೆ ಸಾಕ್ಷಿಯಾಗಿತ್ತು.