
Namma Metro Fare Hike | 5 ಲಕ್ಷಕ್ಕೆ ಕುಸಿದ ಪ್ರಯಾಣಿಕರ ಸಂಖ್ಯೆ: ಬಿಎಂಆರ್‌ಸಿಎಲ್ ಆದಾಯ ಖೋತಾ
ಫೆ. 26 ರಂದು ಶಿವರಾತ್ರಿ ದಿನ ಕೇವಲ 5.2 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದರ ಏರಿಕೆಗೂ ಮೊದಲು ಸಾಮಾನ್ಯ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ 8.5 ರಿಂದ 9 ಲಕ್ಷ ಇರುತ್ತಿತ್ತು.
ಮೆಟ್ರೋ ಪ್ರಯಾಣ ದರ ಏರಿಕೆ ನಂತರ ಪ್ರಯಾಣಿಕರ ಸಂಖ್ಯೆ ದಿನೇದಿನೆ ಕುಸಿಯುತ್ತಿದೆ. ಮಹಾಶಿವರಾತ್ರಿಯಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುವ ಮೂಲಕ ಬಿಎಂಆರ್‌ಸಿಎಲ್ ಆದಾಯಕ್ಕೆ ಪೆಟ್ಟು ಬಿದ್ದಿದೆ.
ಫೆ. 26 ರಂದು ಶಿವರಾತ್ರಿ ದಿನ ಕೇವಲ 5.2 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದರ ಏರಿಕೆಗೂ ಮೊದಲು ಸಾಮಾನ್ಯ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ 8.5 ರಿಂದ 9 ಲಕ್ಷ ಇರುತ್ತಿತ್ತು. ಆದರೆ, ಈಗ 7.5 ಲಕ್ಷದಿಂದ 8 ಲಕ್ಷಕ್ಕೆ ಕುಸಿದಿದೆ.
ಭಾನುವಾರ ಹಾಗೂ ಸಾರ್ವಜನಿಕ ರಜೆ ದಿನಗಳಲ್ಲಿ ಸರಾಸರಿ 7 ಲಕ್ಷಕ್ಕೆ ಇಳಿಕೆಯಾಗಿದೆ. ಮೆಟ್ರೋ ಪ್ರಯಾಣ ದರ ಏರಿಕೆ ವಿರೋಧಿಸಿ ಸಾರ್ವಜನಿಕರು ಮೆಟ್ರೋದಿಂದ ವಿಮುಖರಾಗುತ್ತಿದ್ದು, ಪರ್ಯಾಯ ಸಾರಿಗೆಯನ್ನು ಅವಲಂಬಿಸಿದ್ದಾರೆ. ಮೊದಲಿಗಿಂತ ಈಗ ಸರಾಸರಿ 1.20 ಲಕ್ಷದಷ್ಟು ಪ್ರಯಾಣಿಕರು ಕಡಿಮೆಯಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಪಂದ್ಯ ವೀಕ್ಷಿಸಲು ಜನರು ಭಾರಿ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸ್ವಲ್ಪ ಮಟ್ಟಿನ ಚೇತರಿಸಿಕೆ ಕಂಡಿತ್ತು. ಮಂಗಳವಾರ 7.82 ಲಕ್ಷ ಜನರು ಪ್ರಯಾಣಿಸಿದ್ದರು. ಆದರೆ, ಶಿವರಾತ್ರಿ ದಿನವಾದ ಬುಧವಾರ 5.20 ಲಕ್ಷಕ್ಕೆ ಕುಸಿದಿತ್ತು. ಗುರುವಾರ ಮತ್ತೆ 7.64 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ʼನಮ್ಮ ಮೆಟ್ರೊʼ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್ ಫೆ.9ರಂದು ಹೆಚ್ಚಿಸಿತ್ತು. ಏಕಾಏಕಿ ಶೇ.100ರಷ್ಟು ದರ ಏರಿಕೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ದರ ಪರಿಷ್ಕರಣೆ ಮಾಡಿತ್ತು. ಶೇ.100 ರಷ್ಟು ಹೆಚ್ಚಳ ಇರುವ ಕೆಲವು ಸ್ಟೇಜ್‌ಗಳಲ್ಲಿ ದರ ಇಳಿಸಿತ್ತು. ಆದರೂ ಬಹುತೇಕ ಸ್ಟೇಜ್‌ಗಳಲ್ಲಿ ದರ ಹೆಚ್ಚಳ ಹಾಗೆಯೇ ಉಳಿದಿರುವುದರಿಂದ ಪ್ರಯಾಣಿಕರು ಮೆಟ್ರೋ ಅವಲಂಬನೆಯನ್ನು ತಗ್ಗಿಸುತ್ತಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಕೂಡ ಮೆಟ್ರೋ ದರ ಏರಿಕೆ ವಿರುದ್ಧ ಅಭಿಯಾನ ನಡೆಸುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.