
ಮೆಟ್ರೋ ಆವರಣದಲ್ಲಿ ಗುಟ್ಕಾ ತಿಂದು ಉಗುಳಿದ ಪ್ರಯಾಣಿಕನಿಗೆ 500 ರೂಪಾಯಿ ದಂಡ
ಮೆಟ್ರೊ ಪ್ರಕಟಣೆಯ ಪ್ರಕಾರ, ಮೇ 2ರಂದು ಸಂಜೆ 6.30ಕ್ಕೆ, ಗ್ರೀನ್ ಲೈನ್‌ನ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಲಿಫ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ತಪ್ಪೆಸಗಿದ ಪ್ರಯಾಣಿಕನಿಗೆ ದಂಡ ವಿಧಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಸೀಮಿತ (BMRCL) ತನ್ನ ನಿಲ್ದಾಣಗಳು ಮತ್ತು ರೈಲುಗಳ ಸ್ವಚ್ಛತೆಯನ್ನು ಕಾಪಾಡಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಭಾಗವಾಗಿ, ಕನಕಪುರ ರಸ್ತೆಯ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಉಗುಳಿದ ಪ್ರಯಾಣಿಕನೊಬ್ಬನಿಗೆ ದಂಡ ವಿಧಿಸಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಈ ಘಟನೆಯು ಮೇ 2ರಂದು ಸಂಜೆ 6:30ಕ್ಕೆ ನಡೆದಿದ್ದು, ಪ್ರಯಾಣಿಕನಿಗೆ ಸ್ವಚ್ಛತಾ ನಿಯಮಗಳ ಜಾಗೃತಿಯನ್ನೂ ಮೂಡಿಸಲಾಗಿದೆ.
ಮೆಟ್ರೊ ಪ್ರಕಟಣೆಯ ಪ್ರಕಾರ, ಮೇ 2ರಂದು ಸಂಜೆ 6.30ಕ್ಕೆ, ಗ್ರೀನ್ ಲೈನ್‌ನ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಲಿಫ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕನೊಬ್ಬ ಪಾನ್ ಮಸಾಲಾ ಉಗುಳಿದ್ದಾನೆ. ಈ ಘಟನೆಯನ್ನು ಸ್ಥಳದಲ್ಲಿದ್ದ ಸಿಬ್ಬಂದಿ ಗಮನಿಸಿದ್ದು, ಕೂಡಲೇ ಆ ಪ್ರಯಾಣಿಕನಿಗೆ ದಂಡ ವಿಧಿಸಲಾಗಿದೆ. ಈ ಕೃತ್ಯಗಳು ಮೆಟ್ರೋ ಸ್ಥಳದ ಸ್ವಚ್ಛತೆ ಹಾಳು ಮಾಡುವ ಜತೆಗೆ ಪ್ರಯಾಣಿಕರ ಆರೋಗ್ಯದ ತೊಂದರೆ ಉಂಟುಮಾಡುತ್ತದೆ ಎಂದು ತಿಳಿಸಿದೆ.
ಬಿಎಂಆರ್ಸಿಎಲ್ ಕಠಿಣ ಕ್ರಮಗಳು
ಬೆಂಗಳೂರು ಮೆಟ್ರೋ ರೈಲು ನಿಗಮವು ತನ್ನ ಸ್ವಚ್ಛತಾ ನೀತಿ ಜಾರಿಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ, ಮೆಟ್ರೋ ನಿಲ್ದಾಣಗಳಲ್ಲಿ ಉಗುಳುವುದು , ತಂಬಾಕು ಸೇವನೆ, ಮತ್ತು ಕಸ ಹಾಕುವುದನ್ನು ನಿಷೇಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಮೆಟ್ರೊ ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದೆ. ಜೊತೆಗೆ, ಸೆಂಟ್ರಲ್ ಸಿಸಿಟಿವಿ ಮಾನಿಟರಿಂಗ್ ತಂಡವು ಕ್ಯಾಮೆರಾ ಫೂಟೇಜ್‌ಗಳ ಮೂಲಕ ಸತತವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಯಾವುದೇ ಉಲ್ಲಂಘನೆ ಕಂಡುಬಂದರೆ, ತಕ್ಷಣವೇ ಗ್ರೌಂಡ್ ಸಿಬ್ಬಂದಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ.
ಏಪ್ರಿಲ್ 28ರಂದು ಮಾದವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸುವಾಗ ರೈಲಿನಲ್ಲಿ ಆಹಾರ ಸೇವಿಸಿದ ಮಹಿಳಾ ಪ್ರಯಾಣಿಕರೊಬ್ಬರಿಗೆ 500 ರೂ ದಂಡ ವಿಧಿಸಲಾಗಿತ್ತು. ಕಳೆದ ಆರು ತಿಂಗಳಲ್ಲಿ ಹಲವಾರು ಪ್ರಯಾಣಿಕರಿಗೆ ವಿವಿಧ ಉಲ್ಲಂಘನೆಗಳಿಗಾಗಿ ದಂಡ ವಿಧಿಸಲಾಗಿದೆ. .
ಸಾರ್ವಜನಿಕರಿಗೆ ಮನವಿ
ಬಿಎಂಆರ್ಸಿಎಲ್ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಸಾರ್ವಜನಿಕರು ಮತ್ತು ಮೆಟ್ರೋ ಪ್ರಯಾಣಿಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದೆ. ಉಗುಳುವುದು, ಕಸ ಹಾಕುವುದು, ತಂಬಾಕು ಸೇವನೆ, ಮತ್ತು ರೈಲಿನಲ್ಲಿ ಆಹಾರ ಸೇವನೆಯಂತಹ ಕೃತ್ಯಗಳು ಮೆಟ್ರೋ ವ್ಯವಸ್ಥೆಯ ಸ್ವಚ್ಛತೆಯನ್ನು ಕೆಡಿಸುವುದಷ್ಟೇ ಅಲ್ಲ, ಇತರ ಪ್ರಯಾಣಿಕರ ಆರೋಗ್ಯಕ್ಕೂ ಹಾನಿಯನ್ನುಂಟು ಮಾಡುತ್ತವೆ. ಈ ರೀತಿಯ ಉಲ್ಲಂಘನೆಗಳನ್ನು ತಡೆಗಟ್ಟಲು ಪ್ರಯಾಣಿಕರು ಸ್ವಯಂಪ್ರೇರಿತರಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಬಿಎಂಆರ್ಸಿಎಲ್ ಹೇಳಿದೆ.