Pass if you score 30% marks, governments new bill will lead to decline in quality of education
x

ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. 

ಶಿಕ್ಷಣದ ಗುಣಮಟ್ಟ ಬಲಿ ಕೊಟ್ಟು ಪರೀಕ್ಷೆಯಲ್ಲಷ್ಟೇ ಉತ್ತೀರ್ಣ: ಶಿಕ್ಷಣ ತಜ್ಞ ನಿರಂಜನಾರಾಧ್ಯ ತೀವ್ರ ಆಕ್ರೋಶ

ಸುಮಾರು ಎಂಟು ಸಾವಿರ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.‌ ಶಿಕ್ಷಕರ ಕೊರತೆಯಿಂದ ಎಲ್ಲಾ ವಿಷಯಗಳನ್ನು ಕಲಿಸುವುದು ಅಸಾಧ್ಯವಾಗಿದೆ ಎಂದು ನಿರಂಜನಾರಾಧ್ಯ ತಿಳಿಸಿದರು.


"ರಾಜ್ಯ ಸರ್ಕಾರವು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಬದಲು, ಕೇವಲ ಪರೀಕ್ಷೆ ಮತ್ತು ಅಂಕಗಳನ್ನೇ ಕೇಂದ್ರವಾಗಿಟ್ಟುಕೊಂಡು ಮಕ್ಕಳನ್ನು ಉತ್ತೀರ್ಣಗೊಳಿಸುವ ಗುರಿಯೊಂದಿಗೆ ಇಡೀ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಪಾತಾಳಕ್ಕೆ ತಳ್ಳಿದೆ," ಎಂದು ಖ್ಯಾತ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆಗೆ ತಂದಿರುವ ವಿವಾದಾತ್ಮಕ ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಅವರು ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

10ನೇ ತರಗತಿ ಪರೀಕ್ಷೆಯಲ್ಲಿ, ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡನ್ನೂ ಸೇರಿಸಿ ಶೇ.33ರಷ್ಟು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ ಶೇ.30ರಷ್ಟು ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸುವ ಸರ್ಕಾರದ ಹೊಸ ನಿಯಮವು, ಮಕ್ಕಳ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ. "ಈ ನೀತಿಯು ಈಗಾಗಲೇ ದುರ್ಬಲವಾಗಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಅದೋಗತಿಗೆ ಕೊಂಡೊಯ್ಯಲಿದೆ," ಎಂದು ಅವರು ಎಚ್ಚರಿಸಿದ್ದಾರೆ.

ಸಮಸ್ಯೆ ಪರೀಕ್ಷೆಯಲ್ಲ, ವ್ಯವಸ್ಥೆಯಲ್ಲಿದೆ

ನಿರಂಜನಾರಾಧ್ಯ ಅವರ ಪ್ರಕಾರ, ಫಲಿತಾಂಶ ಕುಸಿತಕ್ಕೆ ಮಕ್ಕಳು ಕಾರಣರಲ್ಲ, ಬದಲಿಗೆ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳೇ ಮೂಲ ಕಾರಣ. "ರಾಜ್ಯದ ಸುಮಾರು ಎಂಟು ಸಾವಿರ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಕಲ್ಯಾಣ ಕರ್ನಾಟಕ ಭಾಗವೊಂದರಲ್ಲೇ ರಾಜ್ಯದಲ್ಲಿರುವ ಒಟ್ಟು ಖಾಲಿ ಹುದ್ದೆಗಳ ಅರ್ಧದಷ್ಟು ಇವೆ. ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಎಲ್ಲಾ ವಿಷಯಗಳನ್ನು ಕಲಿಸಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ತರಗತಿಗೊಬ್ಬರು ಶಿಕ್ಷಕರನ್ನು ನೇಮಿಸದೆ, ಮೂಲಭೂತ ಸೌಕರ್ಯಗಳನ್ನು ಒದಗಿಸದೆ, ಶಿಕ್ಷಕರನ್ನು ಕಲಿಕೇತರ ಚಟುವಟಿಕೆಗಳಿಂದ ಮುಕ್ತಗೊಳಿಸದೆ ಗುಣಮಟ್ಟದ ಸುಧಾರಣೆ ಅಸಾಧ್ಯ," ಎಂದು ಅವರು ವಿವರಿಸಿದರು.

ಪರಿಹಾರವೇನು?

"ಸರ್ಕಾರವು ಈ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು, ಕೇವಲ ಫಲಿತಾಂಶ ಹೆಚ್ಚಿಸಲು ಅಂಕಗಳ ಮಟ್ಟವನ್ನು ಇಳಿಸುವುದು ಆತ್ಮವಂಚನೆಯಾಗುತ್ತದೆ. ಇದಕ್ಕೆ ಬದಲಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ.30ರಷ್ಟು ಅಂಕಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಆ ಗುರಿ ಸಾಧಿಸಲು ಮಕ್ಕಳಿಗೆ ಬೇಕಾದ ಪೂರಕ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ," ಎಂದು ಅವರು ಒತ್ತಾಯಿಸಿದ್ದಾರೆ.

ಕನ್ನಡ ಶಾಲೆಗಳನ್ನು ಮತ್ತಷ್ಟು ದುರ್ಬಲಗೊಳಿಸುವ ಈ ತಿದ್ದುಪಡಿಯನ್ನು ವಿರೋಧಿಸಿ, ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಹೋರಾಟಕ್ಕಿಳಿದು, ನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಹಕ್ಕನ್ನು ಖಾತರಿಪಡಿಸಲು ಮುಂದಾಗಬೇಕು ಎಂದು ನಿರಂಜನಾರಾಧ್ಯ ಅವರು ಕರೆ ನೀಡಿದ್ದಾರೆ.

Read More
Next Story