ʻಪಕ್ಷದ ಮೊದಲ ಗೆಲುವು ನಮ್ಮ ಪಕ್ಷದ ಒಗ್ಗಟ್ಟು’: ಡಿ.ಕೆ ಶಿವಕುಮಾರ್
ಪಕ್ಷದ ಮೊದಲ ಗೆಲುವು ಎಂದರೆ ಅದು ನಮ್ಮ ಪಕ್ಷದ ಒಗ್ಗಟ್ಟು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ( ಏಪ್ರಿಲ್ 10) ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತಯಾರಿ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ತಲೆಕೆಡಿಸಿಕೊಂಡಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ʻʻನಮ್ಮ ಪಕ್ಷದ ಮೊದಲ ಗೆಲುವು ನಮ್ಮ ಪಕ್ಷದ ಒಗ್ಗಟ್ಟು, ಅವರ ಮೊದಲ ಸೋಲು ಅವರ ಪಕ್ಷದಲ್ಲಿನ ಭಿನ್ನಮತ. ಇನ್ನು ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದ್ದು ಸೋಲುವ ಕಾರಣಕ್ಕೆ 15 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಇದು ಕಮಲ ಬಾಡುತ್ತಿರುವುದಕ್ಕೆ ಸಾಕ್ಷಿ” ಎಂದರು.
ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಬಿಜೆಪಿಗಿಂತ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾರ್ಯಕರ್ತರ ಮಧ್ಯೆ ಭಿನ್ನಾಭಿಪ್ರಾಯವಿದೆ. ಕುಮಾರಸ್ವಾಮಿ ತಮ್ಮ ಸರ್ಕಾರ ಬೀಳಿಸಿದವರ ಜತೆ ಕೈಜೋಡಿಸಿ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ” ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರ ಭೇಟಿ ಬಗ್ಗೆ ಡಿಕೆಶಿ ಮಾತನಾಡಿದ್ದು, ʻʻಎಐಸಿಸಿ ಅಧ್ಯಕ್ಷರ ರಾಜ್ಯ ಪ್ರವಾಸದ ಬಗ್ಗೆ ನಿರ್ಧಾರ ಚರ್ಚೆ ಮಾಡಿ ರಾಜ್ಯದಲ್ಲಿನ ಚುನಾವಣಾ ತಯಾರಿ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದೇನೆ. ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಕೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ. ನಾನು ಕೂಡ ಅಂದು ಕಲಬುರ್ಗಿಗೆ ತೆರಳುತ್ತಿದ್ದೇನೆ. ಕೋಲಾರ ಸೇರಿದಂತೆ ಕೆಲವು ಭಾಗಗಳಿಗೆ ಭೇಟಿ ನೀಡಲು ದಿನಾಂಕಗಳನ್ನು ನೀಡಿದ್ದಾರೆ. ನಾವು ಅದರ ಆಧಾರದ ಮೇಲೆ ಅಂತಿಮ ತೀರ್ಮಾನ ಮಾಡುತ್ತೇವೆʼʼ ಎಂದರು.
ಪರೋಕ್ಷವಾಗಿ ಯಾಕೆ ಬೆಂಬಲಿಸೋಣ
ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷ ದಿಂಗಾಲೇಶ್ವರ ಸ್ವಾಮೀಜಿಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತೀರಾ ಎಂದು ಕೇಳಿದಾಗ, “ನಾವು ಬೆಂಬಲಿಸುವುದಾದರೇ ನೇರವಾಗಿಯೇ ಬೆಂಬಲ ನೀಡುತ್ತೇವೆ. ಪರೋಕ್ಷವಾಗಿ ಯಾಕೆ ಬೆಂಬಲಿಸೋಣ. ನಾವು ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿ ಬಿ ಫಾರಂ ನೀಡಿದ್ದೇವೆ. ಸ್ವಾಮೀಜಿಗಳು ಮುಂಚಿತವಾಗಿ ಈ ನಿರ್ಧಾರ ಮಾಡಿದ್ದರೆ ವಿಚಾರ ಬೇರೆ ಆಗುತ್ತಿತ್ತು. ನಮ್ಮ ಅಭ್ಯರ್ಥಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ನಮಗೆ ಶ್ರೀಗಳ ಬಗ್ಗೆ ಗೌರವವಿದೆ. ಅವರು ಸದಾ ಜಾತ್ಯಾತೀತ ತತ್ವದ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಮ್ಮ ಅಭ್ಯರ್ಥಿ ಕೂಡ ಸೌಮ್ಯ ಸ್ವಭಾವದವರಾಗಿದ್ದಾರೆ” ಎಂದರು.
ಬರ ಪರಿಹಾರದ ಬಗ್ಗೆ ದನಿ ಎತ್ತಿದ್ದಾರಾ?
ಮೈತ್ರಿ ಸರ್ಕಾರ ಪತನ ವಿಚಾರದಲ್ಲಿ ನಿಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಗ್ಗೆ ಮಾತನಾಡಿದ ಡಿಸಿಎಂ, “ಈ ವಿಚಾರವಾಗಿ ನನ್ನ ವಿರುದ್ದ ಆರೋಪ ಮಾಡಿದರೆ ಅದನ್ನು ಜನ ಒಪ್ಪುವುದಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ, ಉಪಮುಖ್ಯಮಂತ್ರಿ. ನಮ್ಮ ಸಮಾಜ ಹಾಗೂ ರಾಜ್ಯದ ಜನರಿಗೆ ಅಧಿಕಾರದಲ್ಲಿದ್ದಾಗ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಮ್ಮ ಜನಕ್ಕೆ, ಸಮಾಜಕ್ಕೆ ಸಹಾಯ ಮಾಡಬೇಕು. ಮಠಕ್ಕೆ ಸೇರಿದಂತೆ ಇನ್ನು ಏನೇನು ಸಹಾಯ ಮಾಡಬಹುದು ಎಂದು ಯೋಚನೆ ಮಾಡುತ್ತೇವೆ. ಕುಮಾರಸ್ವಾಮಿ ಅವರು ದೂರದ ಬೆಟ್ಟ ಬಗ್ಗೆ ಅಂದರೆ ಇನ್ನು ನಾಲ್ಕು ವರ್ಷ ಎರಡು ತಿಂಗಳು ಆದ ನಂತರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಏನು ಮಾಡಿತು. ಬರ ಪರಿಹಾರದ ಬಗ್ಗೆ ಇವರು ದನಿ ಎತ್ತಿದ್ದಾರಾ? ಶೋಭಕ್ಕ ಏನು ಮಾಡಿದರು? ಯಾರಾದರೂ ಒಬ್ಬರು ಬರ ಪರಿಹಾರ, ಮೇಕೆದಾಟು, ಮಹದಾಯಿ ವಿಚಾರವಾಗಿ ಮಾತನಾಡಿದ್ದಾರಾ?" ಎಂದು ಪ್ರಶ್ನಿಸಿದರು.
ರಾಮನಗರದಲ್ಲಿ ನೀವು ಗಿಫ್ಟ್ ಕೂಪನ್ ಹಂಚುತ್ತಿದ್ದೀರಾ ಎನ್ನುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, "ನಾನು ಗಿಫ್ಟ್, ಚಾಕೊಲೆಟ್ ಹಂಚಿದ್ದೇನೆಯೇ, ಬಿಟ್ಟಿದ್ದೇನೆಯೆ ಬೇರೆ ವಿಚಾರ. ಅವರುಗಳು ಏನೂ ಮಾಡಿಲ್ಲವೇ?” ಎಂದರು.
ಫೋನ್ ಕದ್ದಾಲಿಕೆ ಬಗ್ಗೆ ಕೇಳಿದಾಗ "ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ" ಎಂದರು.