
ಸಚಿವರ ಆಪ್ತರ ಸೋಲು | ಕಾರಣ ಕೇಳಿದ ಹೈಕಮಾಂಡ್: ಮಂತ್ರಿಗಿರಿಗೆ ಸಂಚಕಾರ?
ತಮ್ಮ ಸೋಲಿನ ಮೂಲಕ ಪಕ್ಷದ ಹಿನ್ನೆಡೆಗೂ ಕಾರಣವಾಗಿರುವ ಐವರ ಪೈಕಿ, ಕೆಲವರು ತಮ್ಮ ರಕ್ತಸಂಬಂಧಿ ಸಚಿವರ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಸ್ಪರ್ಧಿಗಿಂತ ಕಡಿಮೆ ಮತ ಪಡೆದಿದ್ದಾರೆ. ಈ ವಿಷಯ ಪಕ್ಷದ ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಅಧಿಕಾರರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಉಂಟಾಗಿದೆ. ಎರಡಂಕಿಯನ್ನೂ ದಾಟಲಾಗದ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಮುಖಂಡರು ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಸಚಿವರಾಗಿ ಅಧಿಕಾರ ಅನುಭವಿಸುತ್ತಿರುವ ಕೆಲವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲೇ ಪಕ್ಷದ ಲೋಕಸಭಾ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿರುವುದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.
ನ್ಯಾಯಾಲಯದ ಪ್ರಕರಣವೊಂದರ ಸಂಬಂಧ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಧ್ಯಾಹ್ನ ನಡೆಸಿದ ಪಕ್ಷದ ನಾಯಕರ ಸಭೆಯಲ್ಲಿ ಈ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಚಿವರು ಸಂಬಂಧಿಕರು ಸೋಲು ಕಂಡಿರುವ ಕ್ಷೇತ್ರಗಳ ಸಂಪೂರ್ಣ ಮಾಹಿತಿಯೊಂದಿಗೆ 28 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ವರದಿ ಸಲ್ಲಿಸುವಂತೆ ಪಕ್ಷದ ರಾಜ್ಯ ಅಧ್ಯಕ್ಷರಿಗೆ ತಾಕೀತು ಮಾಡಿದ್ದಾರೆ.
ಈ ಬಾರಿ ಕುಟುಂಬ ರಾಜಕಾರಣದ ಕುರಿತ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಯ ನಡುವೆಯೂ ಕಾಂಗ್ರೆಸ್, ರಾಜ್ಯದ 28 ಕ್ಷೇತ್ರಗಳ ಪೈಕಿ ಬರೋಬ್ಬರಿ 13 ಕಡೆ ಪಕ್ಷದ ಮುಖಂಡರ ರಕ್ತ ಸಂಬಂಧಿಗಳನ್ನೇ ಕಣಕ್ಕಿಳಿಸಿತ್ತು. ಅದರಲ್ಲೂ ಒಂಭತ್ತು ಮಂದಿ ಸಚಿವರ ಮಕ್ಕಳು, ಅಕ್ಕ, ತಮ್ಮ, ಪತ್ನಿ ಸೇರಿದಂತೆ ಬಂಧುಬಳಗದವರೇ ಕಣಕ್ಕಿಳಿದಿದ್ದರು. ಬಹುತೇಕ ಕಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಪ್ರಾಬಲ್ಯದ ವಿರುದ್ಧ ಸೆಣೆಸುವ ಹಣಬಲ, ಜನಬಲದ ಅಭ್ಯರ್ಥಿಗಳ ಬರದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖರು ಟಿಕೆಟ್ ಕೊಡಿಸಿದ್ದರೆ, ಇನ್ನೂ ಕೆಲವು ಕಡೆ ಪ್ರಬಲ ಅಭ್ಯರ್ಥಿಗಳಿದ್ದರೂ ಸಚಿವರುಗಳೇ ಪಟ್ಟು ಹಿಡಿದು ಟಿಕೆಟ್ ಗಿಟ್ಟಿಸಿಕೊಂಡಿದ್ದರು.
"ಆ ಹಿನ್ನೆಲೆಯಲ್ಲಿ ಟಿಕೆಟ್ ನೀಡುವಾಗಲೇ, ಕೆಲವು ಸಚಿವರಿಗೆ ತಮ್ಮ ಆಪ್ತರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ವಹಿಸಲಾಗಿತ್ತು. ಜೊತೆಗೆ ಒಂದು ವೇಳೆ ವಿಫಲರಾದಲ್ಲಿ ಸಚಿವ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಇದೀಗ ರಾಜ್ಯದಿಂದ ನಿರೀಕ್ಷಿತ ಸ್ಥಾನಗಳ ಪೈಕಿ ಅರ್ಧದಷ್ಟೂ ಸ್ಥಾನಗಳು ಬರದೇ ಇರುವ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದೆ. ಕ್ಷೇತ್ರವಾರು ಮತ ಗಳಿಕೆಯ ವಿವರ, ಸೋಲಿನ ಕಾರಣಗಳ ವಿಶ್ಲೇಷಣೆಯೊಂದಿಗೆ ವರದಿ ತೆಗೆದುಕೊಂಡು ದೆಹಲಿಗೆ ಬರುವಂತೆ ಪಕ್ಷದ ಅಧ್ಯಕ್ಷರಿಗೆ ಹೈಕಮಾಂಡ್ ತಾಕೀತು ಮಾಡಿದೆ" ಎಂದು ಕಾಂಗ್ರೆಸ್ ಉನ್ನತ ಮೂಲಗಳು ʼದ ಫೆಡರಲ್ ಕರ್ನಾಟಕʼಕ್ಕೆ ಖಚಿತಪಡಿಸಿವೆ.
ಈ ನಡುವೆ, "ರಾಹುಲ್ ಗಾಂಧಿಯವರು ಶುಕ್ರವಾರದ ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿರುವ ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಸೋಲಿನ ಕಾರಣಗಳನ್ನೂ ಕೇಳಿದ್ದಾರೆ. ಜೊತೆಗೆ ಕ್ಷೇತ್ರವಾರು ವಿವರ ಮಾಹಿತಿಯನ್ನು ಕೊಡುವಂತೆ ಕೇಳಿದ್ದಾರೆ" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಖಚಿತಪಡಿಸಿದ್ದಾರೆ.
ಯಾವೆಲ್ಲಾ ಸಚಿವರಿಗೆ ಸಂಕಷ್ಟ?
ಪ್ರಮುಖವಾಗಿ ಪಕ್ಷದ ಹಾಲಿ ಸಚಿವರ ರಕ್ತ ಸಂಬಂಧಿಗಳು ಕಣಕ್ಕಿಳಿದಿದ್ದ 9 ಲೋಕಸಭಾ ಕ್ಷೇತ್ರಗಳ ಫಲಿತಾಂಶವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಆ ಪೈಕಿ ಮೂರು ಕ್ಷೇತ್ರಗಳಲ್ಲಿ ಮಾತ್ರ ಸಚಿವರ ಆಪ್ತರು ಗೆಲುವು ಪಡೆದಿದ್ದಾರೆ. ಇನ್ನು ಉಳಿದ ಐದು ಕಡೆ ಪಕ್ಷಕ್ಕೆ ಸೋಲಾಗಿದೆ.
ಬೀದರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಚಿಕ್ಕೋಡಿ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಚಿವ ಎಚ್ ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಮತ್ತು ದಾವಣಗೆರೆ ಕ್ಷೇತ್ರದಿಂದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು ಪಡೆದಿದ್ದಾರೆ.
ಆದರೆ, ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿದಿದ್ದ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ ಕೆ ಸುರೇಶ್ ಸೋಲು ಕಂಡಿದ್ದಾರೆ. ಹಾಗೇ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಬೆಳಗಾವಿ ಕ್ಷೇತ್ರದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಬಾಗಲಕೋಟೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಚಿವ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದಾರೆ.
ಸಚಿವರ ಸ್ವಕ್ಷೇತ್ರದಲ್ಲೂ ಎದುರಾಳಿಗೆ ಲೀಡ್!
ತಮ್ಮ ಸೋಲಿನ ಮೂಲಕ ಪಕ್ಷದ ಹಿನ್ನೆಡೆಗೂ ಕಾರಣವಾಗಿರುವ ಈ ಐವರ ಪೈಕಿ, ಗೀತಾ ಶಿವರಾಜ್ ಕುಮಾರ್ ಸೇರಿದಂತೆ ಕೆಲವರು ತಮ್ಮ ರಕ್ತಸಂಬಂಧಿ ಸಚಿವರ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಸ್ಪರ್ಧಿಗಿಂತ ಕಡಿಮೆ ಮತ ಪಡೆದಿದ್ದಾರೆ.
ಗೀತಾ ಅವರ ವಿರುದ್ಧ ಗೆಲುವು ಪಡೆದಿರುವ ಬಿಜೆಪಿಯ ಬಿ ವೈ ರಾಘವೇಂದ್ರ ಅವರು, ತಮ್ಮ ಸ್ವಂತ ಊರು ಮತ್ತು ತಮ್ಮ ತಂದೆ ಬಿ ಎಸ್ ಯಡಿಯೂರಪ್ಪ ನಾಲ್ಕು ದಶಕಗಳಿಂದ ಪ್ರತಿನಿಧಿಸಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪಡೆದ ಮತಕ್ಕಿಂತ ಗೀತಾ ಅವರ ಸಹೋದರ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸ್ವಕ್ಷೇತ್ರ ಸೊರಬದಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸದ್ಯ ಪ್ರತಿನಿಧಿಸುತ್ತಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರ ಸಹೋದರ ರಾಘವೇಂದ್ರ ಅವರಿಗೆ ಪಕ್ಕದ ಸೊರಬ ವಿಧಾನಸಭಾ ಕ್ಷೇತ್ರಕ್ಕಿಂತ ಕಡಿಮೆ ಮತ ಬಿದ್ದಿವೆ.
ಇನ್ನೂ ಕೆಲವು ಸಚಿವರ ಉಸ್ತುವಾರಿ ಜಿಲ್ಲೆಗಳ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳಲ್ಲಿ ಸ್ವತಃ ಸಚಿವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲೂ ಎದುರಾಳಿಗಳಿಗೆ ಲೀಡ್ ಸಿಕ್ಕಿರುವ ಉದಾಹರಣೆಗಳಿವೆ. ಮುಖ್ಯವಾಗಿ ಈ ವಿಷಯವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ ಅಂತಹ ಸಚಿವರ ಮಂತ್ರಿಗಿರಿಗೆ ಕುತ್ತು ಬರುವ ಸಾಧ್ಯತೆ ಇದ್ದು, ಕನಿಷ್ಟ ನಾಲ್ಕು ಮಂದಿ ಸಚಿವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಕೆಪಿಸಿಸಿಯ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಜೊತೆಗೆ ಸಚಿವ ಬಿ ನಾಗೇಂದ್ರ ಅವರ ಖಾತೆಗೆ ಸಂಬಂಧಿಸಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿನ ಪರೀಕ್ಷೆ ಮತ್ತಿರರ ಗೊಂದಲಗಳು, ಡಾ ಜಿ ಪರಮೇಶ್ವರ್ ಅವರ ಗೃಹ ಇಲಾಖೆ ಕೆಲವು ಸೂಕ್ಷ್ಮ ಪ್ರಕರಣಗಳ ನಿರ್ವಹಣೆಯಲ್ಲಿ ತೋರಿದ ಅಸೂಕ್ಷ್ಮತೆ ಸೇರಿದಂತೆ ಇನ್ನೂ ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆಯೂ ಹೈಕಮಾಂಡ್ ಅಸಮಾಧಾನಗೊಂಡಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಸದ್ಯದಲ್ಲೇ ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಸಾಧ್ಯತೆ ಇದ್ದು, ಕೆಲವು ಸಚಿವರು ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ಹೇಳಿವೆ.