
ಪಕ್ಷಗಳಿಂದ ಜಿಬಿಎ ಚುನಾವಣೆಗೆ ಸಿದ್ಧತೆ : ಬಿಜೆಪಿಯಲ್ಲಿ ಪ್ರಾರಂಭವಾದ ಭಿನ್ನಮತ
ಐದು ಪಾಲಿಕೆಗಳ ಹೊಣೆಗಾರಿಕೆ ನೀಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಮೂಡಿದೆ. ಪಾಲಿಕೆಯ ಮಾಜಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ನಗರ ರಾಜಕೀಯದಲ್ಲಿ ಹೊಸ ಹುರುಪು ಮೂಡಿದ್ದು, ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಚುನಾವಣೆಗೆ ತೆರೆಮರೆಯಲ್ಲಿ ಸಿದ್ದತೆ ಕೈಗೊಂಡಿವೆ. ಅಸ್ತಿತ್ವಕ್ಕೆ ಬಂದ ಐದು ಪಾಲಿಕೆಗಳ ಹೊಣೆಗಾರಿಕೆ ನೀಡಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಾಲಿಕೆಯ ಮಾಜಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ಮುಖಂಡರು ಹೊಣೆಗಾರಿಕೆಯನ್ನು ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಜಿಬಿಎನಲ್ಲಿ ಅಧಿಕ ಸ್ಥಾನಗಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಸಜ್ಜಾದ ಬೆನ್ನಲ್ಲೇ ಬಿಜೆಪಿ ಸಹ ಸಿದ್ಧತೆ ಕೈಗೊಂಡಿದೆ. 11 ಮಂದಿ ಸಂಯೋಜಕರನ್ನು ನೇಮಕ ಮಾಡಿ ಸಂಘಟನಾ ಜಿಲ್ಲೆಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಸಂಯೋಜಕರ ಪಟ್ಟಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣ ಸ್ವಾಮಿ,ಮಾಜಿ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಎಸ್.ಸುರೇಶ್‌ಕುಮಾರ್, ಸಂಸದರಾದ ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಡಾ.ಕೆ.ಸುಧಾಕರ್ ಮತ್ತು ಬಿಜೆಪಿ ನಾಯಕ ಎನ್.ಎಸ್.ನಂದೀಶ್ ರೆಡ್ಡಿ ಇದ್ದಾರೆ.
ಜಿಬಿಎಯ ವ್ಯಾಪ್ತಿಯಲ್ಲಿ ಸಂಘಟನಾತ್ಮಕ ಜಿಲ್ಲೆಗೆ ಹೊಣೆಗಾರಿಕೆಯನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ದಕ್ಷಿಣಕ್ಕೆ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರಕ್ಕೆ ಎಸ್.ಹರೀಶ್, ಬೆಂಗಳೂರು ಕೇಂದ್ರಕ್ಕೆ ಎ.ಆರ್.ಸಪ್ತಗಿರಿಗೌಡ. ಬೆಂಗಳೂರು ಪೂರ್ವಕ್ಕೆ ಎಂ.ಟಿ.ಬಿ.ನಾಗರಾಜ್, ಕೆ.ಎಸ್.ನವೀನ್, ಬೆಂಗಳೂರು ಉತ್ತರಕ್ಕೆ ಮುನಿರತ್ನ, ಭಾರತಿಶೆಟ್ಟಿ, ಬೆಂಗಳೂರು ದಕ್ಷಿಣಕ್ಕೆ ಬಿ.ಎ.ಬಸವರಾಜ್, ಎನ್.ರವಿಕುಮಾರ್, ಬೆಂಗಳೂರು ಕೇಂದ್ರಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಿ.ಎಸ್.ಅರುಣ್ ಮತ್ತು ಬೆಂಗಳೂರು ಪಶ್ಚಿಮಕ್ಕೆ ಕೆ.ಗೋಪಾಲಯ್ಯ, ಎ.ನಾರಾಯಣ ಸ್ವಾಮಿ, ಅಶ್ವತ್ಥನಾರಾಯಣ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ.
ವಿಶ್ವಾಸಕ್ಕೆ ತೆಗೆದುಕೊಳ್ಳದೆ ನೇಮಕ:
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ಗೆ ತಿರುಗೇಟು ನೀಡಬೇಕಾದರೆ ಬಿಜೆಪಿಯಲ್ಲಿ ಸಂಘಟನಾತ್ಮಕ ಹೋರಾಟ ಅತ್ಯಗತ್ಯ. ಇಲ್ಲದಿದ್ದರೆ ಕಾಂಗ್ರೆಸ್‌ಗೆ ಸುಲಭ ಜಯ ಸಿಗಲಿದೆ. ಆದರೆ ಚುನಾವಣೆ ಸಿದ್ಧತೆಯ ಹಂತದಲ್ಲಿಯೇ ಭಿನ್ನಮತ ಪ್ರಾರಂಭವಾಗಿದೆ. ಪಾಲಿಕೆಯ ಮಾಜಿ ಸದಸ್ಯರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಂಯೋಜಕರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ, ಹೊಣೆಗಾರಿಕೆಯನ್ನು ಸಹ ಹಂಚಿಕೆ ಮಾಡಲಾಗಿದೆ. ಮಾಜಿ ಪಾಲಿಕೆ ಸದಸ್ಯರಿಗೆ ಕ್ಷೇತ್ರದ ಬಗ್ಗೆ ಸಂಪೂರ್ಣವಾದ ಮಾಹಿತಿ ಇರಲಿದೆ. ಅಲ್ಲದೇ, ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ಸಹ ಆಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷವು ಏಕಾಏಕಿ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕೆಲವು ಪಾಲಿಕೆಯ ಮಾಜಿ ಸದಸ್ಯರು, ಮುಂದಿನ ಚುನಾವಣೆಯಲ್ಲಿ ಶೇ.50ರಷ್ಟು ಮಹಿಳೆಯರು ಮೀಸಲಾತಿ ನೀಡಲಾಗುತ್ತಿದೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಮಾಜಿ ಸದಸ್ಯರು ಸಿದ್ಧತೆ ಕೈಗೊಂಡಿದ್ದಾರೆ. ಕ್ಷೇತ್ರಗಳು ಮಹಿಳಾ ಮೀಸಲಾತಿಯಾದರೆ ಮಾಜಿ ಸದಸ್ಯರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಲು ಸಿದ್ಧತೆ ಕೈಗೊಂಡಿದ್ದಾರೆ. ಅಂತೆಯೇ ಈ ಹಿಂದೆ ಮಹಿಳೆಯರು ಗೆಲುವು ಸಾಧಿಸಿದ ಕ್ಷೇತ್ರವು ಬದಲಾದರೆ ತಮ್ಮ ಪತಿಯರಿಗೆ ಟಿಕೆಟ್ ದೊರೆಕಿಸಿಕೊಳ್ಳುವ ಲಾಬಿಯಲ್ಲಿ ತೊಡಗಿದ್ದಾರೆ. ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದರೆ ಟಿಕೆಟ್ ನೀಡುವ ವೇಳೆ ಅವರು ಲಾಬಿ ಮಾಡುವ ಸಾಧ್ಯತೆ ಇದೆ. ಪಾಲಿಕೆಯ ಮಾಜಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅವರಿಗೆ ಟಿಕೆಟ್ ಲಭಿಸುವ ನಿರೀಕ್ಷೆ ಇದೆ. ಹೀಗಾಗಿ ಮಾಜಿ ಸದಸ್ಯರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆರ್.ಅಶೋಕ್, ಸಿ.ಎನ್.ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ತೇಜಸ್ವಿ ಸೂರ್ಯ ಸೇರಿದಂತೆ ಇತರರು ಸಭೆಗಳನ್ನು ನಡೆಸುತ್ತಿದ್ದಾರೆ. ಸಭೆಗಳಿಗೆ ಪಾಲಿಕೆಯ ಮಾಜಿ ಸದಸ್ಯರನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಇದು ಕಾಂಗ್ರೆಸ್‌ಗೆ ಅಸ್ತ್ರವಾಗುವ ಸಾಧ್ಯತೆ ಇದೆ. ಮಾಜಿ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶ ಲಭಿಸುತ್ತಿಲ್ಲ. ಶಾಸಕರು, ಸಂಸದರು ತಮ್ಮ ಬೆಂಬಲಿಗರಿಗೆ ಆದ್ಯತೆ ನೀಡುತ್ತಿದ್ದು, ಮುಂದಿನ ದಿನದಲ್ಲಿ ಇದು ಮತ್ತುಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಪಾಲಿಕೆಯ ಮಾಜಿ ಸದಸ್ಯರೊಂದಿಗೆ ಮಾತನಾಡಿ ಅಸಮಾಧಾನವನ್ನು ದೂರಮಾಡಬೇಕು ಎಂದು ಒತ್ತಾಯಿಸಿದ್ದಾರೆ.

