
ಪರಿಷತ್ ಚುನಾವಣೆ | ನೈರುತ್ಯ ಪದವೀಧರ ಕ್ಷೇತ್ರ: ಬಿಜೆಪಿಗೆ ಭರ್ಜರಿ ಗೆಲುವು, ರಘುಪತಿ ಭಟ್‌ಗೆ ಮುಖಭಂಗ
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದಿಂದ ಸೋಲಿಸುವ ಮೂಲಕ ಸರ್ಜಿ ಮೇಲ್ಮನೆಗೆ ಪ್ರವೇಶ ಮಾಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಮುಖಭಂಗವಾಗಿದೆ.
ಬಿಜೆಪಿಯ ಧನಂಜಯ ಸರ್ಜಿ ಅವರು 37,627 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ನ ಆಯನೂರು ಮಂಜುನಾಥ್ ಅವರು 13,516 ಮತಗಳನ್ನಷ್ಟೇ ಗಳಿಸಲು ಶಕ್ತರಾದರು. ಇನ್ನು ಪಕ್ಷೇತರ ಅಭ್ಯರ್ಥಿಗಳಾದ ರಘುಪತಿ ಭಟ್ 7039 ಮತಗಳನ್ನು ಪಡೆದೆರ, ಎಸ್ ಪಿ ದಿನೇಶ್ 2518 ಮತಗಳನ್ನು ಪಡೆದಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಬಂಡಾಯವೆದ್ದು ಸ್ಪರ್ಧೆಗಿಳಿದು ಸೋತಿರುವ ರಘುಪತಿ ಭಟ್ ಅವರ ಮುಂದಿನ ಭವಿಷ್ಯ ಏನು ಎಂಬ ಪ್ರಶ್ನೆ ಎದುರಾಗಿದೆ. ಬಂಡಾಯ ಸ್ಪರ್ಧೆಯ ವೇಳೆ ಅವರು ಗೆದ್ದ ಬಳಿಕ ಬಿಜೆಪಿಗೆ ಮರಳುವುದಾಗಿ ತಿಳಿಸಿದ್ದರು. ಇದೀಗ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ತಳೆಯುತ್ತದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳಾಗುತ್ತಿವೆ.