ಪರಿಷತ್‌ ಚುನಾವಣೆ | ಬಿಜೆಪಿ ವಿರುದ್ಧ ಬಂಡಾಯ : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಘೋಷಿಸಿದ ರಘುಪತಿ ಭಟ್
x

ಪರಿಷತ್‌ ಚುನಾವಣೆ | ಬಿಜೆಪಿ ವಿರುದ್ಧ ಬಂಡಾಯ : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಘೋಷಿಸಿದ ರಘುಪತಿ ಭಟ್

ವಿಧಾನ ಪರಿಷತ್‌ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯ ಸಾರಿರುವ ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸೋಮವಾರ ಘೋಷಿಸಿದ್ದಾರೆ.


ವಿಧಾನ ಪರಿಷತ್‌ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯ ಸಾರಿರುವ ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸೋಮವಾರ ಘೋಷಿಸಿದ್ದಾರೆ.

ಶನಿವಾರ ರಾತ್ರಿ ಬಿಜೆಪಿ ವಿಧಾನ ಪರಿಷತ್‌ ಟಿಕೆಟ್‌ ಘೋಷಿಸಿದ ಬೆನ್ನಲ್ಲೇ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ರಘುಪತಿ ಭಟ್‌, ತಮಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ʻʻನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇ ನೆ. ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಸೋತರೂ ಬಿಜೆಪಿಯಲ್ಲೇ ಇರುತ್ತೇನೆ, ಗೆದ್ದರೂ ಬಿಜೆಪಿಯಲ್ಲೇ ಇರುತ್ತೇನೆ. ಇದು ಯಾವುದೇ ಬಂಡಾಯ ಅಥವಾ ಪಕ್ಷ, ವ್ಯಕ್ತಿ ವಿರುದ್ಧವಲ್ಲ. ನನಗಾಗಿ, ಜನರ ಸೇವೆಗಾಗಿ ಕೆಲಸ ಮಾಡಲು ಈ ನಿರ್ಧಾರ ಮಾಡಿದ್ದೇನೆʼʼ ಎಂದು ಹೇಳಿದ್ದಾರೆ.

ʻʻಕರಾವಳಿಗೆ ಪಕ್ಷದಿಂದ ಅನ್ಯಾಯವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದೇನೆ. ಅಂದಿನ ಸಿಎಂ ಬೊಮ್ಮಾಯಿ, ಬಿಜೆಪಿ ಮುಖಂಡರಾದ ಆರ್ ಅಶೋಕ್ ಹಾಗೂ ಇತರರು ನನಗೆ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಶಿಕ್ಷಕರ ಸಮುದಾಯ ಮತ್ತು ಪದವೀಧರ ಸಮುದಾಯ ನನಗೆ ಬೆಂಬಲ ನೀಡಿದೆ.‌ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಲ್ಲುತ್ತಿರಲಿಲ್ಲ. ಆದರೆ ಹಣ ಬಲ, ಜಾತಿ ಬಲಕ್ಕೆ ಟಿಕೆಟ್ ಸಿಕ್ಕಿದೆ. ಹೀಗಾಗಿ ಜನರೊಂದಿಗೆ ಇದ್ದು ಕೆಲಸ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯಲು ನಿರ್ಧಾರ ಮಾಡಿದ್ದೇನೆʼʼ ಎಂದು ರಘುಪತಿ ಭಟ್ ಹೇಳಿದರು.

ʻʻಚಿಹ್ನೆ ಇಲ್ಲದ ಚುನಾವಣೆ ಇದು. ಬಿಜೆಪಿ ಪಕ್ಷ ಉಚ್ಛಾಟನೆ ಮಾಡಿದರೂ ನಾನು ಬಿಜೆಪಿ ಕಾರ್ಯಕರ್ತ, ನನಗೆ ಬಿ ಫಾರಂ ಕೊಡಿ, ಭೌಗೋಳಿಕವಾಗಿ ಕರಾವಳಿಗೆ ಮಾನ್ಯತೆ ಕೊಡಿ, ಕರಾವಳಿಯನ್ನು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಬಿಡಿ, ಟಿಕೆಟ್ ಬದಲಾವಣೆ ಮಾಡಿ, ನನಗೆ ಅವಕಾಶ ಕೊಡಿ. ನಾನು ಮೇ16 ನಾಮಪತ್ರ ಸಲ್ಲಿಕೆ ಮಾಡುತ್ತೇನೆʼʼ ಎಂದು ಬಿಜೆಪಿ ವಿರುದ್ಧ ಅವರು ಹೇಳಿದ್ದಾರೆ.

Read More
Next Story