ಪರಿಷತ್ ಚುನಾವಣೆ | ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಜೂನ್ 13ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ (ಜೂ. 3) ಮೂರೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ 7, ಬಿಜೆಪಿಯ 3, ಜೆಡಿಎಸ್‌ನ ಒಬ್ಬ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಡಾ ಯತೀಂದ್ರ ಸಿದ್ದರಾಮಯ್ಯ, ಸಚಿವ ಎನ್.ಎಸ್ ಬೋಸರಾಜು, ವಸಂತ್ ಕುಮಾರ್, ಗೋವಿಂದ ರಾಜು, ಐವಾನ್ ಡಿಸೋಜಾ, ಬಿಲ್ಕಿಸ್ ಬಾನು ಹಾಗೂ ಜಗದೇವ್ ಗುತ್ತೆದಾರ್ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಜೊತೆಗಿದ್ದರು.
ಬಿಜೆಪಿ ಅಭ್ಯರ್ಥಿಗಳಾದ ಸಿ.ಟಿ ರವಿ, ಎನ್ ರವಿಕುಮಾರ್ ಹಾಗೂ ಎಂ.ಜಿ ಮುಳೆ ಕೂಡ ವಿಧಾನಸಭಾ ಸಚಿವಾಲಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಸುನೀಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಜೆಡಿಎಸ್ ಅಭ್ಯರ್ಥಿಯಾದ ಜವರಾಯಿ ಗೌಡ ಕೂಡ ಇಂದೇ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಜೊತೆಗಿದ್ದರು.
ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಸೋಮವಾರ (ಜೂ. 3) ಕೊನೆಯ ದಿನವಾಗಿತ್ತು. ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 13ಕ್ಕೆ ಮತದಾನ ನಿಗದಿಯಾಗಿದ್ದು, ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಹನ್ನೊಂದು ಸ್ಥಾನಗಳ ಪೈಕಿ ಕಾಂಗ್ರೆಸ್ 7, ಬಿಜೆಪಿ 3 ಮತ್ತು ಜೆಡಿಎಸ್ 1 ಸ್ಥಾನವನ್ನು ಗೆಲ್ಲುವ ಅವಕಾಶವಿದೆ. ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಹಿನ್ನೆಲೆಯಲ್ಲಿ, ಚುನಾವಣೆ ಇಲ್ಲದೆ ಅಭ್ಯರ್ಥಿಗಳ ಅವಿರೋಧ ಆಯ್ಕೆ ಆಗುವ ಸಂಭವ ಹೆಚ್ಚಿದೆ.