ಪರಿಷತ್‌ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೆ ಬಿಗ್ ಶಾಕ್:‌ ಕಾಂಗ್ರೆಸ್‌ನಿಂದ ಐವರ ಉಚ್ಛಾಟನೆ
x

ಪರಿಷತ್‌ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೆ ಬಿಗ್ ಶಾಕ್:‌ ಕಾಂಗ್ರೆಸ್‌ನಿಂದ ಐವರ ಉಚ್ಛಾಟನೆ


ರಾಜ್ಯದಲ್ಲಿ ಜೂನ್‌ 3ರಂದು ನಡೆಯಲಿರುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿದಿರುವ ಮುಖಂಡರನ್ನು ಆರು ವರ್ಷ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ.

ಕಾಂಗ್ರೆಸ್‌ ರಾಜ್ಯ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌ ಅವರು ಈ ಉಚ್ಛಾಟನೆಯ ಆದೇಶ ಹೊರಡಿಸಿದ್ದಾರೆ. ನೈಋತ್ಯ ಪದವೀಧರರ ಕ್ಷೇತ್ರದ ಬಂಡಾಯ ಅಭ್ಯರ್ಥಿ ಎಸ್‌.ಪಿ.ದಿನೇಶ್‌, ಬೆಂಗಳೂರು ಪದವೀಧರರ ಕ್ಷೇತ್ರದ ಫರ್ನಾಂಡಿಸ್‌ ಲಾರೆನ್ಸ್‌, ನೈಋತ್ಯ ಶಿಕ್ಷಕರ ಕ್ಷೇತ್ರದ ಚಿಕ್ಕಮಗಳೂರಿನ ಬಿ.ಆರ್.ನಂಜೇಶ್‌, ಆಗ್ನೇಯ ಶಿಕ್ಷಕರ ಕ್ಷೇತ್ರದ ಚಿತ್ರದುರ್ಗದ ಲೋಕೇಶ್‌ ತಾಳಿಕಟ್ಟೆ, ಬೆಂಗಳೂರಿನ ವಿನೋದ್‌ ಶಿವರಾಜ್‌ ಅವರನ್ನು ಉಚ್ಛಾಟಿಸಲಾಗಿದೆ.

ಆದೇಶ ಪತ್ರದಲ್ಲಿ ಏನಿದೆ?

ʻʻಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಲಾಗಿದೆ. ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ತಕ್ಷಣದಿಂದ ಐವರನ್ನು ಉಚ್ಛಾಟಿಸಲಾಗಿದೆʼʼ ಎಂದು ತಿಳಿಸಲಾಗಿದೆ.


ರಘುಪತಿ ಭಟ್‌ಗೆ ಬಿಜೆಪಿ ನೋಟಿಸ್

ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ವಂಚಿತ ಮಾಜಿ ಶಾಸಕ ರಘುಪತಿ ಭಟ್‌, ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ 2 ದಿನದೊಳಗೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ರಘುಪತಿ ಭಟ್‌ಗೆ ನೋಟಿಸ್​ ನೀಡಲಾಗಿದೆ. ಪಕ್ಷದಿಂದ ಉಚ್ಛಾಟನೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನೋಟಿಸ್‌ನಲ್ಲಿ ಏನಿದೆ?

ʻʻಸೋಮವಾರ (ಜೂನ್ 3) ನಡೆಯುವ ವಿಧಾನಪರಿಷತ್​ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೀರಿ. ಇದು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದಂತಾಗಿದೆ. ಆದುದರಿಂದ ಈ ಪತ್ರ ತಲಪಿದ ಎರಡು ದಿನದ ಒಳಗಾಗಿ ಬಿಜಿಪಿ ಶಿಸ್ತು ಸಮಿತಿಯ ಮುಂದೆ ಸ್ಪಷ್ಠೀಕರಣ ನೀಡಬೇಕುʼʼ ಎಂದು ನೋಟಿಸ್​ ನೀಡಲಾಗಿದೆ.

ರಘುಪತಿ ಭಟ್ ಅವರು ನೈರುತ್ಯ ಪದವೀಧರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಈ‌ ಕ್ಷೇತ್ರದಿಂದ ಶಿವಮೊಗ್ಗದ ಡಾ.ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಲ್ಲದೆ, ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿದೆ. ಇದು ರಘುಪತಿ ಭಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿರುವ ರಘುಪತಿ ಭಟ್‌ ಗೆ ಬಿಜೆಪಿಯ ಉಚ್ಛಾಟಿತ ನಾಯಕ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ ಎಸ್‌ ಈಶ್ವರಪ್ಪ ಬೆಂಬಲ ಸೂಚಿಸಿ ಅವರ ಪರ ಪ್ರಚಾರ ಕೈಗೊಂಡಿದ್ದಾರೆ.

Read More
Next Story