Panchamasali Fight | ಮೀಸಲಾತಿ ಹೋರಾಟ: ಅಚ್ಚರಿಯ ಹೇಳಿಕೆ ಕೊಟ್ಟ ಶಾಸಕ ಯತ್ನಾಳ್‌
x

Panchamasali Fight | ಮೀಸಲಾತಿ ಹೋರಾಟ: ಅಚ್ಚರಿಯ ಹೇಳಿಕೆ ಕೊಟ್ಟ ಶಾಸಕ ಯತ್ನಾಳ್‌

2ಎ ಪ್ರವರ್ಗ ಮೀಸಲಾತಿಗಾಗಿ ಸಂಘರ್ಷ ತಲೆ ಎತ್ತಿರುವ ನಡುವೆಯೇ, ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಪ್ರಮುಖರಲ್ಲಿ ಒಬ್ಬರಾಗಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.


ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಮತ್ತೆ ಭುಗಿಲೇಳುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಮೀಸಲಾತಿಯ ಸಂಘರ್ಷ ತಲೆ ಎತ್ತಿದೆ.

ಒಂದು ಕಡೆ 2ಎ ಮೀಸಲಾತಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯ ಬೀದಿಗಿಳಿದಿದೆ. ಬೆಳಗಾವಿಯ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಯತ್ನದಲ್ಲಿ ಹೋರಾಟ ಹಿಂಸೆಗೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಲಾಠಿ ಪ್ರಹಾರ ರಾಜಕೀಯ ಆಯಾಮ ಪಡೆದುಕೊಂಡಿದ್ದು, ಪ್ರತಿಪಕ್ಷಗಳು ಆಡಳಿತರೂಢ ಕಾಂಗ್ರೆಸ್ ವಿರುದ್ಧ ಲಿಂಗಾಯತ ಸಮುದಾಯದ ಮೇಲಿನ ದಬ್ಬಾಳಿಕೆಯ ಆರೋಪ ಮಾಡುತ್ತಿವೆ.

ಮತ್ತೊಂದು ಕಡೆ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಮೀಸಲಾತಿ ಕಲ್ಪಿಸಿದರೆ ತಮ್ಮ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಇತರೆ ಹಿಂದುಳಿದ ಸಮುದಾಯಗಳು ದನಿ ಎತ್ತಿವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದಿರುವ ಸಮುದಾಯಕ್ಕೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಕೋಟಾದಲ್ಲಿ ಅವಕಾಶ ನೀಡಿದರೆ ಈಗಾಗಲೇ 2ಎ ಕೋಟಾದಲ್ಲಿ ಇರುವ 104 ಜಾತಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಸರ್ಕಾರ ಯಾವುದೇ ಕಾರಣಕ್ಕೂ ಅವರಿಗೆ 2ಎ ಮೀಸಲಾತಿ ನೀಡಬಾರದು ಎಂದು ಪಟ್ಟು ಹಿಡಿದಿವೆ.

2ಎ ಪ್ರವರ್ಗ ಮೀಸಲಾತಿಗಾಗಿ ಸಂಘರ್ಷ ತಲೆ ಎತ್ತಿರುವ ನಡುವೆಯೇ, ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಪ್ರಮುಖರಲ್ಲಿ ಒಬ್ಬರಾಗಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದನ್ನು ವಿರೋಧಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಹಿಂದುಳಿದ ಸಮುದಾಯಗಳ ಮೀಸಲಾತಿಗೆ ಕೈಹಾಕಿದವರ ಕೈ ಕತ್ತರಿಸುತ್ತೇವೆ. ನಮ್ಮ ತಟ್ಟೆಗೆ ಕೈ ಹಾಕಬೇಡಿ. ಸರ್ಕಾರ ಕೂಡ ಅಂತಹ ನಿರ್ಧಾರ ಕೈಗೊಂಡರೆ ಹಿಂದುಳಿದ ಸಮುದಾಯಗಳು ಬೀದಿಗಿಳಿಯಲಿವೆ ಎಂದು ಎಚ್ಚರಿಕೆ ನೀಡಿತ್ತು. ಆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯತ್ನಾಳ್, ನಾವು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಕೇಳಿಯೇ ಇಲ್ಲ ಎಂದಿದ್ದಾರೆ.

ಅವರ ಹಕ್ಕು ಕಸಿದುಕೊಳ್ಳುವುದಿಲ್ಲ

ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಬೇಕಿಲ್ಲ. ಆ ಪ್ರವರ್ಗದಲ್ಲಿ ಈಗಾಗಲೇ 104 ಜಾತಿಗಳಿವೆ. ಅವರ ಹಕ್ಕನ್ನು ಕಸಿದುಕೊಳ್ಳಲು ನಾವು ತಯಾರಿಲ್ಲ. ಮೊದಲಿನಿಂದಲೂ ನಾವು ಆ ವಿಷಯದಲ್ಲಿ ಸ್ಪಷ್ಟವಾಗಿದ್ದೇವೆ. 2ಎ ಮೀಸಲಾತಿ ಬೇಕು ಎಂಬ ಪ್ರಸ್ತಾವನೆ ಇಟ್ಟಿದ್ದು ಕಾಂಗ್ರೆಸ್ನ ಹಿಂದಿನ ಮಾಜಿ ಹಾಗೂ ಈಗಿನ ಹಾಲಿ ಶಾಸಕರೇ. ನಾವು ಅದನ್ನು ಕೇಳಿಯೇ ಇಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ನಾವು ನರೇಂದ್ರ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ, ಶೋಭಾ ಕರಂದ್ಲಾಜೆ ಮತ್ತು ಬೊಮ್ಮಾಯಿ ಅವರೊಂದಿಗೆ ಸೇರಿ ಒಂದು ಸೂತ್ರ ಕಂಡುಕೊಂಡಿದ್ದೇವೆ. ಅದರಂತೆ ನಮಗೆ ಮೀಸಲಾತಿ ಕೊಟ್ಟರೆ ಸಾಕು ಎನ್ನುವ ಮೂಲಕ ಶೇ.4ರ ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸಿ ಆ ಕೋಟಾದಡಿ ತಮಗೆ ಅವಕಾಶ ನೀಡಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ.

ಮುಸ್ಲಿಮರಿಗೆ ಕೊಟ್ಟಿರುವುದು ಸಂವಿಧಾನ ವಿರೋಧಿ ಅಲ್ಲವಾ?

ಇದೇ ಸಂದರ್ಭದಲ್ಲಿ ಶೇ.4ರ ಮುಸ್ಲಿಂ ಮೀಸಲಾತಿಯ ವಿಷಯ ಪ್ರಸ್ತಾಪಿಸಿರುವ ಯತ್ನಾಳ್, ನಮಗೆ(ಪಂಚಮಸಾಲಿ ಸಮುದಾಯಕ್ಕೆ) ಮೀಸಲಾತಿ ಕೊಡುವುದು ಸಂವಿಧಾನ ವಿರೋಧಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಆ ಪುಣ್ಯಾತ್ಮ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿದ್ದಾರಲ್ಲ ಅದು ಸಂವಿಧಾನ ವಿರೋಧಿ ಅಲ್ಲವಾ? ಎಂದು ಪ್ರಶ್ನಿಸಿದ್ದಾರೆ.

ನೀವು ಒಬ್ಬ ವಕೀಲರೂ ಆಗಿದ್ದಿರಿ, ನಿಮಗೆ ಸಂವಿಧಾನದ ಅಡಿಯಲ್ಲಿ ಮೀಸಲಾತಿ ಯಾವುದು ಸರಿ, ಯಾವುದು ತಪ್ಪು ಎಂಬುದು ಗೊತ್ತಿಲ್ಲವಾ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿರುವ ಯತ್ನಾಳ್, ಆಂಧ್ರ , ಪಶ್ಚಿಮ ಬಂಗಾಳ ಹೈಕೋರ್ಟ್ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಅಸಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಜಸ್ಟಿಸ್ ಗವಾಯಿ ಪೀಠ ಅದನ್ನು ಸ್ಪಷ್ಟಪಡಿಸಿದೆ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಬರಲ್ಲ; ನೀವು ಹೇಗೆ ಕೊಟ್ಟಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಮ್ಮದೇ ಬಕೆಟ್ ಬೇರೆ ಇದೆ

ಲಿಂಗಾಯತರು, ವೀರಶೈವ ಲಿಂಗಾಯತರು, ಮರಾಠರು, ಜೈನರು, ಕುರುಬರು, ವೈಷ್ಣವರು ಸೇರಿ ಶೇ.7ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಆದರೆ, ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಕೊಟ್ಟಿಲ್ಲ. ಶೇ.7ರ ಆ ಮೀಸಲಾತಿ ಕೋಟಾದಲ್ಲಿ 40 ಜಾತಿಗಳಿವೆ. 2ಡಿಯಲ್ಲಿ ನಾಲ್ಕು ಜಾತಿ ಬರುತ್ತವೆ. 2ಸಿ ಯಲ್ಲಿ ಒಕ್ಕಲಿಗರು ಸೇರಿ 67ಜಾತಿಗೆ ಮೀಸಲಾತಿ ನೀಡಲಾಗಿದೆ ಎಂದು ವಿವರಿಸಿದ ಯತ್ನಾಳ್, ನಮಗೆ 2ಎ ಮೀಸಲಾತಿ ಅವಶ್ಯಕತೆಯೇ ಇಲ್ಲ. 2ಎ ಮೀಸಲಾತಿಯಲ್ಲಿರೋ 104 ಸಮಾಜಕ್ಕೆ ಅನ್ಯಾಯ ಮಾಡಲು ನಾವು ತಯಾರಿಲ್ಲ. ಅವರ ಕಿಸೆಯಲ್ಲಿ ಕೈ ಹಾಕುವುದಿಲ್ಲ. ನಮಗೆ ನಮ್ಮದೇ ಒಂದು ಬಕೆಟ್ ಇದೆ ಎಂದು ಹೇಳಿದ್ದಾರೆ.

ಇನ್ನು ಸಿದ್ದರಾಮಯ್ಯ ಬಳಿ ಹೋಗುವುದಿಲ್ಲ

ಕೈ ಕಾಲು ಕಡಿಯುವ ಹೇಳಿಕೆಗೆ ಸಿದ್ದರಾಮಯ್ಯ ಅವರು ಪ್ರಚೋದಿಸುವುದು ಸರಿಯಲ್ಲ ಎಂದು ಹಿಂದುಳಿದ ಸಮುದಾಯಗಳ ಜಾಗೃತ ವೇದಿಕೆಯ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ನಮಗೆ ಮೀಸಲಾತಿ ಕೊಡಲಿಲ್ಲ, ಇನ್ನು ಮುಂದೆ ಸಿದ್ದರಾಮಯ್ಯ ಬಳಿ ಮೀಸಲಾತಿ ಬೇಡಲು ನಾವು ಹೋಗುವುದೂ ಇಲ್ಲ ಎಂದರು.

ಶೇ.15 ಮೀಸಲಾತಿ ಕೊಡಸ್ತೀನಿ ಅಂದಿದ್ದ ಶಾಸಕ

ಸಮುದಾಯದ ಮೀಸಲಾತಿ ಹೋರಾಟದಲ್ಲಿ ಈ ಹಿಂದೆ ಮುಂಚೂಣಿಯಲ್ಲಿದ್ದು ಈಗ ತಮ್ಮದೇ ಸರ್ಕಾರದ ಅವಧಿಯಲ್ಲಿ ಹಿಂದೆ ಸರಿದಿರುವ ವಿಜಯಾನಂದ ಕಾಶಪ್ಪನವರ್ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಅವ ಪಂಚಮಸಾಲಿ ಸಮಾಜಕ್ಕೆ ಪೂರ್ತಿ ಶೇ.15 ಮೀಸಲಾತಿ ಕೊಡಿಸ್ತೀನಿ ಅಂದಿದ್ದ. ಮಾತನಾಡೋಕೆ ಏನರ ಬೇಕಲ್ಲ ಎಂದು ವಾಗ್ದಾಳಿ ನಡೆಸಿದರು.

Read More
Next Story