ಮೆಟ್ರೋ ನಿಲ್ದಾಣದ ಹೊರಗಡೆ ಗುಟ್ಕಾ ಕಲೆ; ಕಿರಣ್ ಮಜುಮ್ದಾರ್‌ ಶಾ ಆಕ್ರೋಶ; ಭಾರಿ ದಂಡ ವಿಧಿಸಲು ಆಗ್ರಹ
x

ಮಲ್ಲೇಶ್ವರಂ ಮೆಟ್ರೋ ನಿಲ್ದಾಣದ ಹೊರಗೆ ಉಗುಳಿದ ಕಲೆಗಳು

ಮೆಟ್ರೋ ನಿಲ್ದಾಣದ ಹೊರಗಡೆ ಗುಟ್ಕಾ ಕಲೆ; ಕಿರಣ್ ಮಜುಮ್ದಾರ್‌ ಶಾ ಆಕ್ರೋಶ; ಭಾರಿ ದಂಡ ವಿಧಿಸಲು ಆಗ್ರಹ

ಮಲ್ಲೇಶ್ವರಂ ಮೆಟ್ರೋ ನಿಲ್ದಾಣದ ಹೊರಗೆ ನೆಲದ ಮೇಲೆ ಗುಟ್ಕಾ ಉಗಿದಿರುವ ಕಲೆಗಳನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಿರಣ್ ಮಜುಮ್ದಾರ್‌ ಷಾ, ಇಂತಹ ಅಸಹ್ಯಕರ ಅಭ್ಯಾಸಗಳಿಗೆ ಭಾರಿ ದಂಡ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.


Click the Play button to hear this message in audio format

ನಗರದ ನಾಗರಿಕ ಪ್ರಜ್ಞೆಯ ಕೊರತೆ ಮತ್ತು ಕಳಪೆ ಮೂಲಸೌಕರ್ಯದ ಬಗ್ಗೆ ಈಗಾಗಲೇ ಹಲವು ಬಾರಿ ಧ್ವನಿ ಎತ್ತಿರುವ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್‌ ಶಾ ಮೆಟ್ರೋ ನಿಲ್ದಾಣಗಳ ಹೊರಭಾಗದಲ್ಲಿ ಪಾನ್ ಮತ್ತು ಗುಟ್ಕಾ ಕಲೆಗಳು ಕಂಡುಬಂದಿರುವುದಕ್ಕೆ ಆಕ್ರೋಶಗೊಂಡಿದ್ದಾರೆ.

ಮಲ್ಲೇಶ್ವರಂ ಮೆಟ್ರೋ ನಿಲ್ದಾಣದ ಹೊರಗೆ ನೆಲದ ಮೇಲೆ ಗುಟ್ಕಾ ಉಗಿದಿರುವ ಕಲೆಗಳನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಿರಣ್ ಮಜುಮ್ದಾರ್‌ ಶಾ, ಇಂತಹ ಅಸಹ್ಯಕರ ಅಭ್ಯಾಸಗಳಿಗೆ ಭಾರಿ ದಂಡ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೆಟ್ರೋ ನಿಲ್ದಾಣಗಳ ಒಳಭಾಗವನ್ನು ನಮ್ಮ ಮೆಟ್ರೋ ಸ್ವಚ್ಛವಾಗಿ ನಿರ್ವಹಿಸುತ್ತಿದ್ದರೂ, ನಿಲ್ದಾಣದ ಆವರಣ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿನ ಕೊಳಕು, ಉಗುಳುವುದು ಮತ್ತು ಕಸದ ರಾಶಿಯು ನಗರದ ಸೌಂದರ್ಯವನ್ನು ಹಾಳುಮಾಡುತ್ತಿವೆ. ನಾಗರಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಭಾರಿ ದಂಡ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ನೆಟ್ಟಿಗರು ಕೂಡ ಪ್ರತಿಕ್ರಿಯಿಸಿದ್ದು, ಕಿರಣ್ ಮಜುಮ್ದಾರ್‌ ಷಾ ಅವರ ಕಾಳಜಿಯನ್ನು ಬೆಂಬಲಿಸಿದ್ದಾರೆ. ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಕಂಪನಿಗಳೇ ನಗರದ ಸ್ವಚ್ಛತೆ ಮತ್ತು ನಿರ್ವಹಣೆಯ ವೆಚ್ಚವನ್ನು ಭರಿಸಬೇಕು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ರಸ್ತೆ ಗುಂಡಿ, ಕಸದ ಬಗ್ಗೆ ಧ್ವನಿ ಎತ್ತಿದ್ದ ಶಾ

ಈ ಹಿಂದೆ ಅವರು ರಸ್ತೆ ಗುಂಡಿಗಳು ಮತ್ತು ಕಸದ ನಿರ್ವಹಣೆ ಕುರಿತು ವಿದೇಶಿ ಉದ್ಯಮಿಯೊಬ್ಬರು ಪ್ರಶ್ನಿಸಿದ ಪ್ರಸಂಗವನ್ನು ಉಲ್ಲೇಖಿಸಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಚೀನಾದಿಂದ ಬಂದಿದ್ದ ಉದ್ಯಮಿಯೊಬ್ಬರು, ಬೆಂಗಳೂರಿನ ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ ಮತ್ತು ಎಲ್ಲೆಲ್ಲೂ ಏಕೆ ಕಸ ಇದೆ? ಸರ್ಕಾರ ಹೂಡಿಕೆಗೆ ಸಹಕರಿಸಲು ಬಯಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಭಾರತವು ಎಲ್ಲ ಅನುಕೂಲಗಳಿದ್ದರೂ ಏಕೆ ಒಟ್ಟಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಮಾಡಿದ್ದರು.

ಕಿರಣ್ ಮಜುಮ್ದಾರ್‌ ಶಾ ಅವರ ಈ ಟೀಕೆಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು ಮತ್ತು ಯಶಸ್ಸನ್ನು ನೀಡಿದೆ. ಇದು ನಿರಂತರ ಟೀಕೆಗೆ ಅರ್ಹವಾಗಿಲ್ಲ, ಬದಲಿಗೆ ಸಾಮೂಹಿಕ ಪ್ರಯತ್ನಕ್ಕೆ ಅರ್ಹವಾಗಿದೆ. ಸಮಸ್ಯೆಗಳಿವೆ, ಆದರೆ ಅವುಗಳನ್ನು ಆದ್ಯತೆ ಮೇಲೆ ಪರಿಹರಿಸುತ್ತಿದ್ದೇವೆ ಎಂದು ಅವರು ತಿರುಗೇಟು ನೀಡಿದ್ದರು.

Read More
Next Story