
ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
Operation Sindoor | ಕದನ ವಿರಾಮ ಉಲ್ಲಂಘಿಸಿದರೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ; ಸೇನಾ ಮುಖ್ಯಸ್ಥರ ಖಡಕ್ ವಾರ್ನಿಂಗ್
ಮೇ 11ರಂದು (ಭಾನುವಾರ) ಕದನ ವಿರಾಮ ಉಲ್ಲಂಘನೆಯಾದರೆ ಪಾಕಿಸ್ತಾನ ವಿರುದ್ಧ ಪ್ರತಿದಾಳಿ ತೀವ್ರವಾಗಿರಲಿದೆ ಎಂದು ಸೇನಾ ಮುಖ್ಯಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಸೇನೆಗಳ ಮಧ್ಯೆ ನಡೆದಿರುವ ಕದನ ವಿರಾಮದಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾದರೂ ಪ್ರತಿದಾಳಿ ನಡೆಸಲು ಸೇನಾ ಕಮಾಂಡರ್ ಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಭಾನುವಾರ ನವದೆಹಲಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ಶನಿವಾರ ಸಂಜೆಯಿಂದಲೇ ಭೂಮಿ, ವಾಯು ಮತ್ತು ಸಮುದ್ರದ ಮೇಲಿನ ಎಲ್ಲಾ ರೀತಿಯ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವ ಒಪ್ಪಂದಕ್ಕೆ ಬಂದಿರುವ ಕುರಿತು ಪರಸ್ಪರ ಘೋಷಣೆ ಮಾಡಿವೆ.
ಉಭಯ ರಾಷ್ಟ್ರಗಳ ಮಧ್ಯೆ ಆಗಿರುವ ಕದನ ವಿರಾಮವನ್ನು ಭಾರತ ಚಾಚೂ ತಪ್ಪದೇ ಪಾಲಿಸಲಿದೆ. ಆದರೆ, ಮೇ 10-11ರ ರಾತ್ರಿ ಪಾಕಿಸ್ತಾನ ಸೇನೆ ಕದನ ವಿರಾಮ ಮತ್ತು ವಾಯುಪ್ರದೇಶ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಗಡಿ ಪ್ರದೇಶಗಳಿಗೆ ಭೇಟಿ
ಶನಿವಾರ ರಾತ್ರಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಶ್ಚಿಮ ಗಡಿಗಳ ಸೇನಾ ಕಮಾಂಡರ್‌ಗಳೊಂದಿಗೆ ಭದ್ರತಾ ಪರಿಸ್ಥಿತಿ ಪರಿಶೀಲಿಸಿದರು.
ಮೇ 11ರಂದು (ಭಾನುವಾರ) ಕದನ ವಿರಾಮ ಉಲ್ಲಂಘನೆಯಾದರೆ ಪಾಕಿಸ್ತಾನ ವಿರುದ್ಧ ಪ್ರತಿದಾಳಿ ತೀವ್ರವಾಗಿರಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೇ 10 ರ ಡಿಜಿಎಂಒ ಮಟ್ಟದ ಮಾತುಕತೆ ಪ್ರಕಾರ ಯಾವುದೇ ರೀತಿಯ ಉಲ್ಲಂಘನೆಗೆ ಸೂಕ್ತತಿರುಗೇಟು ನೀಡಲು ಸೇನಾ ಕಮಾಂಡರ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ ಎಂದು ಸೇನೆ ಹೇಳಿದೆ.