
Pahalgam Terror Attack | ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ಸಾವಿಗೆ ಕಂಬನಿ ಮಿಡಿದ ಮಲೆನಾಡು; ಸ್ವಯಂಪ್ರೇರಿತ ಬಂದ್
ಮಂಜುನಾಥ್ ರಾವ್ ಅವರ ಪಾರ್ಥಿವ ಶರೀರ ಹೊತ್ತ ಆಂಬ್ಯುಲೆನ್ಸ್ ಶಿವಮೊಗ್ಗ ನಗರಕ್ಕೆ ಪ್ರವೇಶ ಮಾಡುತ್ತಿದ್ದಂತೆ ನೂರಾರು ವಾಹನಗಳ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ಹಾದಿಯುದ್ದಕ್ಕೂ ಮಂಜುನಾಥ್ ಅಮರ್ ರಹೇ , ಪಾಕಿಸ್ತಾನ ವಿರುದ್ಧದ ಘೋಷಣೆಗಳು ಮೊಳಗಿದವು.
ಅಲ್ಲಿದ್ದವರ ಕಣ್ಣಾಲಿಗಳು ತುಂಬಿದ್ದವು. ಅಮಾಯಕ ವ್ಯಕ್ತಿಯನ್ನು ಬಲಿ ಪಡೆದ ಭಯೋತ್ಪಾದಕರ ಅಟ್ಟಹಾಸಕ್ಕೆ ಆಕ್ರೋಶವೂ ಮಡುಗಟ್ಟಿತ್ತು. ಕಾಶ್ಮೀರದ ಸುಮಧುರ ನೆನಪುಗಳೊಂದಿಗೆ ಬರಬೇಕಾಗಿದ್ದ ಪತ್ನಿ ಪಲ್ಲವಿ ಮಾತ್ರ ಗಂಡನ ಕಳೇಬರದೊಂದಿಗೆ ಬಂದರಲ್ಲ ಎಂಬ ಅನುಕಂಪವು ಎಲ್ಲರ ಕಣ್ಣಾಲಿಯಿಂದ ಹನಿಗಳನ್ನು ಹೊರಹಾಕುತ್ತಿತ್ತು.
ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ಅವರ ಮನೆಯ ಬಳಿ ಬಂದಾಗ ಈ ದೃಶ್ಯಗಳು ಮರುಕ ಹುಟ್ಟಿಸಿದ್ದವು. ಕಾಶ್ಮೀರದಲ್ಲಿ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಪಾರ್ಥೀವ ಶರೀರದ ದರ್ಶನಕ್ಕೆ ಬಂದವರು ಘೋಷಣೆ ಮೊಳಗಿಸಿ, ಆಕ್ರೋಶ ಹೊರಹಾಕಿದರು. ಆದರೆ, ಮಂಜುನಾಥ ಪತ್ನಿ ಪಲ್ಲವಿ ಹಾಗೂ ಸಂಬಂಧಿಕರ ಗೋಳು ಹೇಳ ತೀರದಾಗಿತ್ತು.
ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ಹೊತ್ತ ಆಂಬ್ಯುಲೆನ್ಸ್ ಶಿವಮೊಗ್ಗ ನಗರಕ್ಕೆ ಪ್ರವೇಶ ಮಾಡುತ್ತಿದ್ದಂತೆ ನೂರಾರು ವಾಹನಗಳ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ಹಾದಿಯುದ್ದಕ್ಕೂ ಮಂಜುನಾಥ್ ಅಮರ್ ರಹೇ ಹೇ, ಪಾಕಿಸ್ತಾನ ವಿರುದ್ಧದ ಘೋಷಣೆಗಳು ಮೊಳಗಿದವು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕ ಚೆನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಡಿ.ಎಸ್.ಅರುಣ್, ಧನಂಜಯ ಸರ್ಜಿ, ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೂರ್ವವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ಮಿಥುನ್ ಕುಮಾರ್ , ಸಂಘಪರಿವಾರದ ಮುಖಂಡರು ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಆ ಬಳಿಕ ಕುಟುಂಬ ಸದಸ್ಯರು ಬ್ರಾಹ್ಮಣ ಪದ್ದತಿಯಂತೆ ವಿಧಿವಿಧಾನ ಪೂರೈಸಿದರು. ಬಳಿಕ ಕೆಲ ಸಮಯದವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಸಾವಿರಾರು ಜನರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು.
ಸಚಿವ ಮಧುಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮೃತರ ಕುಟುಂಬಕ್ಕೆ ಭೇಟಿ ನೀಡಿ, ಮಂಜುನಾಥ್ ಪತ್ನಿ ಮತ್ತು ಪುತ್ರನಿಗೆ ಸಾಂತ್ವನ ಹೇಳಿದರು.
ಸ್ವಯಂ ಪ್ರೇರಿತ ಬಂದ್
ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನದವರೆಗೆ ಬಂದ್ ಮಾಡಲಾಗಿತ್ತು. ಮಂಜುನಾಥ್‌ರಾವ್ ಶವಯಾತ್ರೆ ಹೋಗುವ ತನಕ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಬುಧವಾರ ರಾತ್ರಿಯಿಂದಲೇ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೂರ್ವವಲಯ ಐಜಿ ರವಿಕಾಂತೇಗೌಡ ಅವರ ನೇತೃತ್ವದಲ್ಲಿ ಎಸ್‌ಪಿ ಮಿಥುನ್ ಕುಮಾರ್ ಅವರು, ಮಂಜುನಾಥ್ ಅವರ ಅಂತಿಮ ಯಾತ್ರೆ ಸರಾಗವಾಗಿ ನಡೆಯಲು ವ್ಯವಸ್ಥೆ ಮಾಡಿದ್ದರು.
ಪ್ರಮುಖ ರಸ್ತೆಗಳಲ್ಲಿ ಅಂತಿಮಯಾತ್ರೆ
ಗುಂಡಾಭಟ್ ಅವರ ಮಾರ್ಗದರ್ಶನದಲ್ಲಿ ಮೃತದೇಹಕ್ಕೆ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಅಲಂಕೃತ ವಾಹನದಲ್ಲಿ ಮಂಜುನಾಥರಾವ್ ಅಂತಿಮ ಯಾತ್ರೆ ನಡೆಸಲಾಯಿತು. ಯಾತ್ರೆಯುದ್ದಕ್ಕೂ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ, ಮಾಜಿ ಶಾಸಕ ಪ್ರಸನ್ನಕುಮಾರ್, ಎಸ್.ದತ್ತಾತ್ರಿ ,ಬ್ರಾಹ್ಮಣ ಸಮುದಾಯದ ಮುಖಂಡರು, ಸಂಘಪರಿವಾರದ ಪ್ರಮುಖರು ಭಾಗವಹಿಸಿದ್ದರು.
ಯಾತ್ರೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ನೆರೆದ ಜನರು ಭಯೋತ್ಪಾದಕರ ದುಷ್ಕೃತ್ಯ ಖಂಡಿಸಿ ಮಂಜುನಾಥ್ ರಾವ್ ಆತ್ಮಕ್ಕೆ ಶಾಂತಿ ಕೋರಿದರು. ಶವಯಾತ್ರೆಯು ಪ್ರವಾಸಿಮಂದಿರದ ರಸ್ತೆ, ಕುವೆಂಪು ರಸ್ತೆ, ಜೈಲ್ ಸರ್ಕಲ್, ಶೀನಪ್ಪ ಶೆಟ್ಟಿ ವೃತ್ತ, ಅಮೀರ್ ಅಹಮದ್ ವೃತ್ತ , ಶಿವಪ್ಪನಾಯಕ ಸರ್ಕಲ್ ಮೂಲಕ ಬಿ.ಹೆಚ್.ರಸ್ತೆ ಮೂಲಕ ರೋಟರಿ ಚಿತಾಗಾರಕ್ಕೆ ತೆರಳಿತು. ಮಂಜುನಾಥ್ ರಾವ್ ಪುತ್ರ ಅಭಿಜೈ ತಂದೆಯ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.
ಸ್ಥಳೀಯ ಮುಸ್ಲಿಮರೇ ನಮಗೆ ನೆರವಾದರು
"ಕಾಶ್ಮೀರ ನೋಡುವ ಆಸೆಯಿಂದ ಹೋದೆವು. ಮಗ ಉತ್ತಮ ಅಂಕ ಪಡೆದಿದ್ದ ಖುಷಿಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದರಿಂದ ಆಘಾತಗೊಂಡಿದ್ದೇವೆ. ಅಲ್ಲಿನ ಸ್ಥಳೀಯರು ನಮಗೆ ಸಹಕರಿಸಿದರು. ಮಗನನ್ನು ಬೆನ್ನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಹಿಂದೂ ವಿರೋಧಿ ವಾತಾವರಣ ಇದೆ. ಆದರೆ ನಮಗೆ ನೆರವಾಗಿ ಸುರಕ್ಷಿತ ಸ್ಥಳಕ್ಕೆ ಮುಸ್ಲಿಮರೇ ಕರೆದೊಯ್ದರು ಎಂದು ಮೃತ ಮಂಜುನಾಥ ರಾವ್ ಪತ್ನಿ ಪಲ್ಲವಿ ಘಟನೆ ವಿವರಿಸಿದರು.
ನಮ್ಮನ್ನು ರಕ್ಷಿಸಿದ ಸ್ಥಳೀಯರಿಗೂ ಭಯೋತ್ಪಾದಕರು ಬೆದರಿಕೆ ಒಡ್ಡಿದ್ದರು. ಆದರೆ ಅವರು ಪರಿಪರಿ ವಿನಂತಿ ಮಾಡಿ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದರು ಎಂದು ಪಲ್ಲವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಉಗ್ರರ ದುಷ್ಕೃತ್ಯಕ್ಕೆ ಗಣ್ಯರ ಖಂಡನೆ
ಕಾಶ್ಮೀರದ ಜನತೆ ನೆಮ್ಮದಿಯಿಂದ ಬದುಕುವುದು ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಬೇಡವಾಗಿದೆ. ಆ ದೇಶವನ್ನು ವಿಶ್ವದ ಎದುರು ಒಂಟಿಯಾಗಿ ಮಾಡುತ್ತೇವೆ. ರಾಜತಾಂತ್ರಿಕ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ನಮ್ಮ ಸರಕಾರ ಭಯೋತ್ಪಾದನೆಯನ್ನು ಕಿತ್ತೊಗೆಯಲಿದೆ. ಮಂಜುನಾಥ್ ಕುಟುಂಬದ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಮಂಜುನಾಥ್ ಅವರ ಕುಟುಂಬದ ನೋವಿನಲ್ಲಿ ನಾವೂ ಭಾಗಿ. ಅವರ ಪತ್ನಿ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಕಾಶ್ಮೀರದಲ್ಲಿ ಆತಂಕಕ್ಕೊಳಗಾಗಿದ್ದ ರಾಜ್ಯದ ಪ್ರವಾಸಿಗರಿಗೆ ಸರಕಾರ ಅಗತ್ಯ ನೆರವು ನೀಡಿದೆ. ಸಚಿವ ಸಂತೋಷ್ ಲಾಡ್ ಅವರು ಎಲ್ಲರನ್ನು ಸಂಪರ್ಕಿಸಿದ್ದಾರೆ. ಮೃತರ ಕುಟುಂಬದೊಂದಿಗೆ ನಮ್ಮ ಸರಕಾರ ನಿಲ್ಲಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಭಯೋತ್ಪಾದಕರ ದಾಳಿಗೆ ಮಂಜುನಾಥ್ ಬಲಿಯಾಗಿರುವುದು ಸಹಿಸಲಾರದ ನೋವು ತಂದಿದೆ. ರಕ್ಕಸ ಕೃತ್ಯಕ್ಕೆ ಕುಮ್ಮಕ್ಕು ನೀಡುವ ನೆರೆ ರಾಷ್ಟ್ರಕ್ಕೆ ರಾಜತಾಂತ್ರಿಕವಾಗಿ ಏನು ಮಾಡಬೇಕೊ ಅದನ್ನು ಕೇಂದ್ರ ಸರ್ಕಾರ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಜನ ಶಾಂತಿಯಿಂದ ಬದುಕುತ್ತಾ ಪ್ರಗತಿ ಹೊಂದುವ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಇದಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮುಂದೆ ಆಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಷ್ಟ್ರಭಕ್ತರನ್ನು ಕಳೆದುಕೊಂಡ 2 ಗಂಟೆಗಳಲ್ಲಿ ಪ್ರಧಾನಿ ಮೋದಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಕೇಂದ್ರ ಸರ್ಕಾರದೊಂದಿಗೆ ಎಲ್ಲರೂ ನಿಲ್ಲಬೇಕಿದೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಬೇಕಿದೆ ಎಂದು ಆಗ್ರಹಿಸಿದರು.