
ಮುಖ್ಯಮಂತ್ರಿ ಸಿದ್ದರಾಮಯ್ಯ ಉಗ್ರರ ದಾಳಿಯಲ್ಲಿ ಮೃತಪಟ್ಟ ರಾಜ್ಯದ ಇಬ್ಬರಿಗೆ ಪರಿಹಾರ ಘೋಷಿಸಿದರು.
Pahalgam Terror Attack | ಕರ್ನಾಟಕದಲ್ಲಿ ಅಕ್ರಮ ಪಾಕಿಸ್ತಾನ, ಬಾಂಗ್ಲಾ ಹಾಗೂ ರೋಹಿಂಗ್ಯಾ ಸಮುದಾಯದ ವಿದೇಶಿ ವಲಸಿಗರ ಮೇಲೆ ನಿಗಾ
ಬೆಂಗಳೂರು ನಗರದಲ್ಲಿ ಅವಧಿ ಮೀರಿಯೂ ನೆಲೆಸಿರುವ ವಿದೇಶಿಗರ ಸಂಖ್ಯೆ ಹೆಚ್ಚಿದೆ. 2022 ರಲ್ಲಿ 4 ಮಂದಿ ಇದ್ದರು. 2023 ರಲ್ಲಿ 24 ಹಾಗೂ 2024 ರಲ್ಲಿ 55 ಮಂದಿ ಅಕ್ರಮ ವಲಸಿಗರು ಇರುವುದನ್ನು ಪತ್ತೆ ಮಾಡಲಾಗಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬೆನ್ನಲ್ಲೇ ದೇಶಾದ್ಯಂತ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿಗರು ಸೇರಿದಂತೆ ವಿದೇಶಿ ಪ್ರಜೆಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಕೇಂದ್ರದ ಈ ಸೂಚನೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು, ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಮೇಲೆ ಹದ್ದಿನ ಕಣ್ಣು ಇರಿಸಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಗರ ವಿರುದ್ಧ ಗಡಿಪಾರು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಗೃಹ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ರೋಹಿಂಗ್ಯಾ ಸಮುದಾಯದ 137 ಮಂದಿ ಅಕ್ರಮವಾಗಿ ನೆಲೆಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಲಸಿಗರನ್ನು ಗುರುತಿಸಿದ್ದು, ಈ ಪೈಕಿ 66 ಮಂದಿಯನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. ಉಳಿದ 71 ವಲಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅವಧಿ ಮೀರಿ ನೆಲೆಸಿರುವ ವಲಸಿಗರು ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಆದರೂ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲೇ ಹೆಚ್ಚು ವಿದೇಶಿ ವಲಸಿಗರು
ಬೆಂಗಳೂರು ನಗರದಲ್ಲಿ ಅವಧಿ ಮೀರಿಯೂ ನೆಲೆಸಿರುವ ವಿದೇಶಿಗರ ಸಂಖ್ಯೆ ಹೆಚ್ಚಿದೆ. 2022 ರಲ್ಲಿ 4 ಮಂದಿ ಇದ್ದರು. 2023 ರಲ್ಲಿ 24 ಹಾಗೂ 2024 ರಲ್ಲಿ 55 ಮಂದಿ ಅಕ್ರಮ ವಲಸಿಗರು ಇರುವುದನ್ನು ಪತ್ತೆ ಮಾಡಲಾಗಿದೆ. ಗಡಿಪಾರು ನಂತರ ಬೆಂಗಳೂರಿನಲ್ಲಿ 27ಮಂದಿ ಮಾತ್ರ ಇದ್ದಾರೆ. ಶಿವಮೊಗ್ಗದಲ್ಲಿ12, ಉಡುಪಿಯಲ್ಲಿ 10, ಹಾಸನದಲ್ಲಿ ಮೂವರು ಅಕ್ರಮ ವಲಸಿಗರು ಇದ್ದಾರೆ.
2023 ರಲ್ಲಿ 24 ಮಂದಿ, 2024 ರಲ್ಲಿ 66 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಅಕ್ರಮವಾಗಿ ನೆಲೆಸಿದ ನಿವಾಸಿಗೆ ನೆಲೆ ಕಲ್ಪಿಸಿದ ಆರೋಪದ ಮೇಲೆ ಒಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಉಗ್ರರನ್ನು ಮಟ್ಟಹಾಕುವುದು ಕೇಂದ್ರದ ಜವಾಬ್ದಾರಿ
ಉಗ್ರರು ಯಾವುದೇ ರಾಜ್ಯದಲ್ಲಿದ್ದರೂ ಅವರನ್ನು ಮಟ್ಟಹಾಕಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಗ್ರರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಪಹಲ್ಗಾಮ್ ಘಟನೆ ಅತ್ಯಂತ ಅಮಾನುಷವಾದ ಘಟನೆ. ಪುಲ್ವಾಮಾ ಘಟನೆಯೂ ಇದೇ ಜಿಲ್ಲೆಯಲ್ಲಿ ನಡೆದಿದ್ದರಿಂದ ಎಚ್ಚರಿಕೆ ವಹಿಸಬೇಕಿತ್ತು. ಬಂದೋಬಸ್ತ್ ಸಡಿಲಗೊಳಿಸಬಾರದಿತ್ತು. ಇದು ಗುಪ್ತಚರ ವ್ಯವಸ್ಥೆಯ ವೈಫಲ್ಯ. ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ರಾಜಕೀಯ ದ್ವೇಷ
ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದರೆ ತಕ್ಷಣವೇ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಬಗ್ಗೆ ಪ್ರಧಾನಿ ,ಗೃಹ ಸಚಿವರನ್ನು ಭೇಟಿ ಮಾಡಿದ್ದರೂ ಏನು ಆಗಿಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಅನುದಾನವನ್ನು ಕೊಡುತ್ತಿಲ್ಲ. 2023-24 ರಲ್ಲಿ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5300 ಕೋಟಿ ಅನುದಾನವನ್ನು ಈವರೆಗೆ ಕೊಟ್ಟಿಲ್ಲ. ಇದು ರಾಜಕೀಯ ದ್ವೇಷದಂತೆ ಕಾಣುತ್ತದೆ ಎಂದು ಹರಿಹಾಯ್ದಿದ್ದಾರೆ.