
ಪದ್ಮಶ್ರೀ ಪುರಸ್ಕೃತ ಅಂಕೇಗೌಡ
ಪುಸ್ತಕ ಮನೆ ಅಂಕೇಗೌಡರಿಗೆ ಪದ್ಮಶ್ರೀ ಗೌರವ; ಪುಸ್ತಕ ಸಂಗ್ರಹಕ್ಕಾಗಿಯೇ ನಿವೇಶನ ಮಾರಿದ ಸಾಧಕ
ಪುಸ್ತಕಗಳೇ ದೇವರೆಂದು ನಂಬಿರುವ ಅಂಕೇಗೌಡರು, ಪುಸ್ತಕ ಖರೀದಿ ಹಾಗೂ ಸಂಗ್ರಹಣೆಗಾಗಿ ತಮ್ಮ ಮೈಸೂರಿನ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಅಂಕೇಗೌಡ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಗೌರವ ಸಂದಿದೆ.
ಕಳೆದ ಮೂರು ದಶಕಗಳಿಂದ ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಂಕೇಗೌಡ ಅವರು, ಪುಸ್ತಕದ ಮನೆ ಆರಂಭಿಸಿ, ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇವರು ಸ್ಥಾಪಿಸಿರುವ ಖಾಸಗಿ ಗ್ರಂಥಾಲಯವು ಭಾರತದಲ್ಲೇ ಅತಿ ಜ್ಞಾನಭಂಡಾರವಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೂ ದಾಖಲಾಗಿದೆ.
ಅಂಕೇಗೌಡ ಅವರು ತಮ್ಮ ನಿವೃತ್ತಿಯ ನಂತರದ ಹಣವನ್ನು ಪುಸ್ತಕಗಳ ಸಂಗ್ರಹಕ್ಕಾಗಿ ವ್ಯಯಿಸಿದ್ದು, ಸಂಶೋಧನಾ ವಿದ್ಯಾರ್ಥಿಗಳ ಜ್ಞಾನದಾಹ ನೀಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಉಚಿತ ಗ್ರಂಥಾಲಯದ ಮೂಲಕ ಜ್ಞಾನ ದಾಸೋಹ ಮಾಡುತ್ತಿರುವ ಇವರಿಗೆ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಅಂಕೇಗೌಡರ ಸಾಧನೆ
ಪುಸ್ತಕಗಳೇ ದೇವರೆಂದು ನಂಬಿರುವ ಅಂಕೇಗೌಡರು, ಪುಸ್ತಕ ಖರೀದಿ ಹಾಗೂ ಸಂಗ್ರಹಣೆಗಾಗಿ ತಮ್ಮ ಮೈಸೂರಿನ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಹರಳಹಳ್ಳಿಯಲ್ಲಿ ನಿರ್ಮಿಸಿರುವ 'ಪುಸ್ತಕ ಮನೆ' (ಅಂಕೇಗೌಡ ಜ್ಞಾನ ಪ್ರತಿಷ್ಠಾನ) ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದೆ.
ಈ ಗ್ರಂಥಾಲಯದಲ್ಲಿ ಸುಮಾರು 5 ಲಕ್ಷ ಅಪರೂಪದ ವಿದೇಶಿ ಪುಸ್ತಕಗಳು, 5,000ಕ್ಕೂ ಹೆಚ್ಚು ಭಾಷೆಗಳ ನಿಘಂಟುಗಳು ಮತ್ತು 1832ರ ಹಸ್ತಪ್ರತಿಗಳೂ ಇವೆ.
ಕೆಎಸ್ಆರ್‌ಟಿಸಿಯಲ್ಲಿ ಟೈಮ್ ಕೀಪರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಿಂದಲೇ ಪುಸ್ತಕ ಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದರು. ಇವರ ಗ್ರಂಥಾಲಯದಲ್ಲಿ ಯಾವುದೇ ಸದಸ್ಯತ್ವ ಶುಲ್ಕವಿಲ್ಲದೆ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕರಿಗೆ ಓದಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಪುಸ್ತಕಕ್ಕಾಗಿ ಬದುಕು ಮುಡುಪಿಟ್ಟ ಅಂಕೇಗೌಡ
ನಾಣ್ಯ ಸಂಗ್ರಹ, ಅಂಚೆ ಚೀಟಿಗಳ ಸಂಗ್ರಹ, ಲಗ್ನಪತ್ರಿಕೆಗಳ ಸಂಗ್ರಹವನ್ನೂ ಪುಸ್ತಕ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಹುಟ್ಟಿದ ಅಂಕೇಗೌಡ, ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿದರು. ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಬಳಿಕ ಅಂಚೆ ತೆರಪಿನ ಮೂಲಕ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು.
ಕಂಡಕ್ಟರ್ ಆಗಿ ನಿವೃತ್ತಿಯಾದ ಬಳಿಕ ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅಂಕೇಗೌಡರು ತಮ್ಮ ಸಂಬಳದ ಬಹುಭಾಗವನ್ನು ಪುಸ್ತಕ ಕೊಳ್ಳಲು ಬಳಸಿದ್ದರು. ಉದ್ಯಮಿ ಹರಿ ಕೋಡೆ ಅವರು ಪುಸ್ತಕಗಳನ್ನು ಇಡಲು ಪಾಂಡವಪುರದ ವಿಶ್ವೇಶ್ವರನಗರ ಬಡಾವಣೆಯಲ್ಲಿ ಒಂದು ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ.

