ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಸೆ.‌17ರಿಂದ ಪಾದಯಾತ್ರೆ: ಪ್ರತಾಪ್‌ ಸಿಂಹ ಘೋಷಣೆ
x

ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಸೆ.‌17ರಿಂದ ಪಾದಯಾತ್ರೆ: ಪ್ರತಾಪ್‌ ಸಿಂಹ ಘೋಷಣೆ


ʻʻಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣವನ್ನು ಖಂಡಿಸಿ ಸೆ.‌17ರಿಂದ ಪಾದಯಾತ್ರೆ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಪಾದಯಾತ್ರೆ ನಾಯಕತ್ವ ಪ್ರದರ್ಶನವಲ್ಲʼʼ ಎಂದು ಹೇಳುವ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ‌, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ‌ ಅವರಿಗೆ ಟಕ್ಕರ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ʻʻಪಕ್ಷದ ನೇತಾರ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಾವು ಬೆಳಗಾವಿಯಲ್ಲಿ ಇತ್ತೀಚೆಗೆ ನಡೆಸಿದ್ದು ಬಿಜೆಪಿ ಅತೃಪ್ತರ ಅಥವಾ ಬಂಡಾಯಗಾರರ ಸಭೆಯಲ್ಲ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣವನ್ನು ಖಂಡಿಸಿ ಸೆ.17ರಿಂದ ಪಾದಯಾತ್ರೆಗೆ ನಿರ್ಧರಿಸಿದ್ದೇವೆʼʼ ಎಂದು ಹೇಳಿದರು.

ʻʻಆ ಸಭೆಯಲ್ಲಿ ಮೈಸೂರು ಚಲೋ ಪಾದಯಾತ್ರೆಯ ಅನುಭವವನ್ನು ಹಂಚಿಕೊಂಡೆ. ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತದೆ. ಯತ್ನಾಳ್ ಅವರಂಥ ದೊಡ್ಡ ನಾಯಕರು ಕರೆದ ಕಾರಣ ನಾನು ಸಭೆಗೆ ಹೋಗಿದ್ದೆʼʼ ಎಂದು ತಿಳಿಸಿದರು.

ʻʻನಮ್ಮ ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ವರಿಷ್ಠರ ಅನುಮತಿಯೊಂದಿಗೇ ನಾವು ನಡೆಸುತ್ತೇವೆʼʼ ಎಂದು ಹೇಳಿದರು.

ʻʻಯಾರನ್ನೋ ಓಲೈಸಲು ಅಥವಾ ಮೆಚ್ಚಿಸಲು ರಾಜಕಾರಣ ಮಾಡುವುದಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ, ಆರ್‌ಎಸ್‌ಎಸ್‌ ನೀಡಿತ್ತು. ಕ್ಷೇತ್ರ, ಜಾತಿಯಿಂದಾಚೆ ಜನಪ್ರಿಯತೆಯುಳ್ಳ ಯತ್ನಾಳ್ ಅಂಥವರಲ್ಲಿ ನಾನೂ ಒಬ್ಬʼʼ ಎಂದು ರಾಜ್ಯ ನಾಯಕರಿಗೆ ಟಕ್ಕರ್‌ ಕೊಟ್ಟಿದ್ದಾರೆ.

ʻʻಕೇಂದ್ರಕ್ಕೆ ಹೋಗಬೇಡಿ, ರಾಜ್ಯದಲ್ಲೇ ಇರಿ ಎಂಬ ಸಂದೇಶ ವರಿಷ್ಠರಿಂದ ಸಿಕ್ಕಿದೆ. ಹೀಗಾಗಿ ಇಲ್ಲೇ ಇದ್ದೇನೆ. ನಾನು ಅನ್ಯಾಯದ ವಿರುದ್ಧ ಮಾತ್ರವೇ ರೆಬಲ್‌, ಪಕ್ಷದ ವಿರುದ್ಧವಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತಲೂ ನಾನು ಸೀನಿಯರ್. ಏಕೆಂದರೆ, ನನ್ನಪ್ಪ ಆರ್‌ಎಸ್ಎಸ್‌ನಲ್ಲಿದ್ದರುʼʼ ಎಂದು ಸಮರ್ಥಿಸಿಕೊಂಡರು.

ʻʻಬಿ ಎಸ್ ಯಡಿಯೂರಪ್ಪ ಅಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ಪಕ್ಷಕ್ಕೆ ನನ್ನಂತಹ ಯಂಗ್ ಬ್ಲಡ್ ಬರಬೇಕಿದೆ. ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ. ನಾನು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಇರುವೆ. ನಮ್ಮ ಪಾದಯಾತ್ರೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂಬ ವಿಶ್ವಾಸವಿದೆʼʼ ಎಂದು ಹೇಳಿದರು.

Read More
Next Story