ಡಿಕೆಶಿ-ಎಚ್‌ಡಿಕೆ ವೈಯಕ್ತಿಕ ಟೀಕೆಯಿಂದ ಪಾದಯಾತ್ರೆ ಡೈವರ್ಟ್: ಎಸ್ ಆರ್ ವಿಶ್ವನಾಥ್
ʻʻಮುಡಾ ಹಗರಣದ ವಿರುದ್ಧ ಪಾದಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ವೈಯಕ್ತಿಕ ಟೀಕೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹಾಗಾಗಿ ಈ ಪಾದಯಾತ್ರೆ ಡೈವರ್ಟ್ ಆಗಿದೆ" ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ʻʻಮುಡಾ ಹಗರಣ ವಿರುದ್ಧದ ಹೋರಾಟ ರಾಷ್ಟ್ರವ್ಯಾಪಿ ತಲುಪಿದೆ. ಇದರ ನಡುವೆ ಪಾದಯಾತ್ರೆಯೂ ಪ್ರಾರಂಭವಾಗಿದೆ. ಆದರೆ, ಈ ಪಾದಯಾತ್ರೆ ಡೈವರ್ಟ್ ಆಗಿದೆ ಅನಿಸುತ್ತಿದೆ. ಏಕೆಂದರೆ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ವೈಯಕ್ತಿಕ ಟೀಕೆಗಳಿಗೆ ಯಾತ್ರೆಯಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆʼʼ ಎಂದು ಹೇಳಿದ್ದಾರೆ.
ʻʻನಮ್ಮ ಪಾದಯಾತ್ರೆಯ ಉದ್ದೇಶ ವಾಲ್ಮೀಕಿ ಮತ್ತು ಮುಡಾ ಹಗರಣದ ಕುರಿತು ಜನರಿಗೆ ತಿಳಿಸುವುದು. ಆದರೆ, ಎರಡು ದಿನಗಳಿಂದ ವೈಯಕ್ತಿಕ ಟೀಕೆಗಳು ಹೆಚ್ಚಾಗಿವೆ. ಇದರಿಂದ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಿದೆ ಅನಿಸುತ್ತಿದೆ. ಇವರ ವಾಗ್ಯುದ್ಧಕ್ಕೆ ಬೇರೆ ಕಡೆ ವೇದಿಕೆ ಕಲ್ಪಿಸಿಕೊಡಬೇಕು. ಮುಖ್ಯಮಂತ್ರಿ ವಿರುದ್ಧದ ಹೋರಾಟ ಮರೆತೇ ಬಿಟ್ಟರು ಅನಿಸ್ತಿದೆ. ನಮ್ಮ ಗುರಿ ಇರುವುದು ಸಿಎಂ ರಾಜೀನಾಮೆ. ನಿರಂತರವಾಗಿ ಅದಕ್ಕೆ ಒತ್ತು ಕೊಡಬೇಕುʼʼ ಎಂದರು.
ಡಿ ಕೆ ಶಿವಕುಮಾರ್ ಅವರು ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ ಅವರ ಹಗರಣಗಳನ್ನೂ ಬಿಚ್ಚಿಡುತ್ತೇನೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ʻʻಈಗ ಆಡಳಿತದಲ್ಲಿ ಇರುವುದು ಅವರು. ಈಗಾಗಲೇ ಹಗರಣಗಳನ್ನು ಬಿಚ್ಚಿಡಬೇಕಿತ್ತು. ಈ ರೀತಿ ಹೇಳಿ ಜನರ ಗಮನ ಬೇರೆ ಕಡೆ ಸೆಳೆಯುತ್ತಿದ್ದಾರೆ ಅಷ್ಟೇ. ಈಗಾಗಲೇ ನಮ್ಮ ಕಾಲದ ಹಗರಣಗಳನ್ನು ದಾಖಲೆಸಮೇತ ಬಿಚ್ಚಿಡಬೇಕಿತ್ತು. ಯಾಕೆ ಬಿಚ್ಚಿಟ್ಟಿಲ್ಲ?ʼʼ ಎಂದು ಪ್ರಶ್ನೆ ಮಾಡಿದರು.
ಮತ್ತೊಂದೆಡೆ ಬಿಜೆಪಿ ಶಾಸಕ ಯತ್ನಾಳ್ ಅವರು ವಿಜಯೇಂದ್ರ ಮತ್ತು ಬಿಎಸ್ವೈ ವಿರುದ್ಧ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ʻʻಅವರು ಯಾಕೆ ಹೀಗೆ ಮಾತನಾಡುತ್ತಾರೆ ಎಂದು ಗೊತ್ತಿಲ್ಲ. ವರಿಷ್ಠರು ಕೂಡ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷಕ್ಕಿಂತ ಯಾರೂ ಕೂಡ ದೊಡ್ಡವರಿಲ್ಲ. ಈ ಹಿಂದೆಯೂ ರಾಜ್ಯದ ಮುಖ್ಯಮಂತ್ರಿ ಆಗಿದ್ದವರನ್ನೇ ಉಚ್ಛಾಟನೆ ಮಾಡಿರುವ ಉದಾಹರಣೆ ಇವೆ. ಏನಾದರು ಇದ್ದರೆ ನಾಲ್ಕು ಗೋಡೆ ಮಧ್ಯ ಇರಬೇಕು. ಈ ರೀತಿಯ ಹೇಳಿಕೆ ಕೊಟ್ಟು ಕಾರ್ಯಕರ್ತರ ವಿಶ್ವಾಸ ಕಡಿಮೆ ಮಾಡಿದಂತಾಗುತ್ತದೆ. ಅದನ್ನು ಯತ್ನಾಳ್ ಅವರೂ ಕೂಡ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ನೋವಾಗಿದ್ದರೆ ಅದನ್ನು ವರಿಷ್ಠರ ಮುಂದೆ ಹೇಳಬೇಕುʼʼ ಎಂದು ಸಲಹೆ ನೀಡಿದರು.