ಮಳೆ ಅವಾಂತರ | ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆ:  ಜನಜೀವನ ಅಸ್ತವ್ಯಸ್ತ
x

ಮಳೆ ಅವಾಂತರ | ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ


ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದ ಆರಂಭವಾಗಿ ಬೆಳಗಿನವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಮಹಾನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವೆಡೆ ಜನಜೀವನ ಅಸ್ತವ್ಯಸ್ತಗಾಗಿದೆ. ಹಲವು ರಸ್ತೆಗಳು ಕೆಸರು ಮಯವಾಗಿವೆ. ನೀರು ನಿಂತು ಅಂಡರ್​ಪಾಸ್‌ಗಳು ಜಲಾವೃತಗೊಂಡಿವೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಮಹಾನಗರದ ಮೆಜೆಸ್ಟಿಕ್​​, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್​​ ಸರ್ಕಲ್, ಟೌನ್​ಹಾಲ್, ಕೆ.ಆರ್​.ಮಾರ್ಕೆಟ್​​, ತ್ಯಾಗರಾಜನಗರ, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್​​, ಹೆಬ್ಬಾಳ, ಯಲಹಂಕ, ಕೆ.ಆರ್ ಪುರಂ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗಿದ್ದು ರಸ್ತೆಗಳು ಜಲಾವೃತಗೊಂಡಿವೆ. ಜತೆಗೆ ಅಲ್ಲಲ್ಲಿ ಅವಾಂತರವೂ ಸೃಷ್ಟಿಯಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ.

ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದರಿಂದ ಆ ಪ್ರದೇಶದ ಜನರು ನಿದ್ರೆಯಿಲ್ಲದೇ ಪರದಾಡುವಂತಾಗಿದೆ. ಓಕಳಿಪುರಂನ ಅಂಡರ್​ಪಾಸ್‌ಗೆ ನೀರು ನುಗ್ಗಿ, ವಾಹನ ಸವಾರರು ತಡರಾತ್ರಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ನೀರು ನಿಂತದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಆದರೆ, ಒಳಗೆ ರೋಗಿಗಳು ಇರದ ಕಾರಣ ನೀರಿನ ಪ್ರಮಾಣ ಕಡಿಮೆ ಆದ ಬಳಿಕ ಆ್ಯಂಬುಲೆನ್ಸ್ ತೆರಳಿತು.

ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ರಸ್ತೆಯಲ್ಲೇ ನಿಂತಿದೆ. ವಾಹನ ಸವಾರರು ಭಯದಲ್ಲಿಯೇ ಸಂಚಾರ ಮಾಡ್ತಿದ್ದಾರೆ. ಇತ್ತ ಕೆ.ಆರ್​.ಮಾರ್ಕೆಟ್​ನ ರಸ್ತೆಗಳೂ ಕೆಸರುಮಯವಾಗಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆ ಎದುರಾಗಿದೆ.

ಸಿಲ್ಕ್ ಬೋರ್ಡ್ ಸಿಗ್ನಲ್ ಬಳಿ ಭಾರಿ ಮಳೆಯಿಂದ ತೆರೆದುಕೊಂಡಿದ್ದ ಮ್ಯಾನ್‌ಹೋಲ್‌ಗೆ ಎರಡು ಕಾರುಗಳು ಬಿದ್ದಿದ್ದು, ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದೆ. ಕಾರಿನಲ್ಲಿ ಇದ್ದ ಇಬ್ಬರನ್ನು ರಕ್ಷಿಸಲಾಗಿದೆ.

ದಿಢೀರ್ ‌ಮಳೆಯಿಂದಾಗಿ‌ ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದವು. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ‌ಮುಂಭಾಗದ ರಸ್ತೆ ‌ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ಸುಮಾರು ‌ಎರಡು ಅಡಿಯಷ್ಟು ನೀರು ನಿಂತಿತ್ತು. ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು.

ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೇ ಪೇಟೆ, ಕಾಟನ್ ಪೇಟೆ ರಸ್ತೆ ಸಂಪೂರ್ಣ ಜಾಲವೃತವಾಗಿದೆ. ಸುಲ್ತಾನ್ ಪೇಟೆ ಮುಖ್ಯ ರಸ್ತೆ ಸಂಪೂರ್ಣ ರಸ್ತೆ ಬಂದ್ ಆಗಿದ್ದು, ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದೆ. ಪುಲಕೇಶಿ‌ ನಗರದ ಎನ್.ಸಿ. ಕಾಲೋನಿಯಲ್ಲಿ ಮನೆಗಳು ಜಲಾವೃತಗೊಂಡಿವೆ. ಮೂವತ್ತು ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ.

ಮಾರತಹಳ್ಳಿ ಬಳಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬೇಸ್‌ಮೆಂಟ್‌ ಗೋಡೆ ಕುಸಿದಿದ್ದು, ಕೂದಲೆಳೆಯ ಅಂತರದಲ್ಲಿ‌ ಮನೆ ಮಂದಿ ಪಾರಾಗಿದ್ದಾರೆ.

ಇಂದೂ ಕೂಡ ಭಾರೀ ಮಳೆ

ಬೆಂಗಳೂರು ಸೇರಿದಂತೆ ಹಲವೆಡೆ ಸೋಮವಾರ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಯಚೂರು, ಚಿಕ್ಕಬಳ್ಳಾಪುರ, ಮೈಸೂರು ರಾಮನಗರ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಇದೆ. ಬೆಂಗಳೂರು ವ್ಯಾಪ್ತಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Read More
Next Story