ಹೊರಗುತ್ತಿಗೆ ಮೀಸಲಾತಿ | ಹೊರಬಿತ್ತು ಸರ್ಕಾರದ ಹೊಸ ಆದೇಶ
x

ಹೊರಗುತ್ತಿಗೆ ಮೀಸಲಾತಿ | ಹೊರಬಿತ್ತು ಸರ್ಕಾರದ ಹೊಸ ಆದೇಶ


ಹೊರಗುತ್ತಿಗೆ ನೌಕರಿಯಲ್ಲಿಯೂ ಮೀಸಲಾತಿ ಜಾರಿಗೆ ತರಬೇಕು ಎಂಬ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ.

ವಿವಿಧ ಏಜೆನ್ಸಿಗಳ ಮೂಲಕ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಮೂಲಕ ವಿವಿಧ ಹಂತದ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮಹಿಳಾ ಮೀಸಲಾತಿಯ ನಿಯಮದಂತೆ ಶೇ.33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಹೊರಗುತ್ತಿಗೆ ಮೂಲಕವೇ ಬಹುತೇಕ ಸರ್ಕಾರಿ ನೌಕರಿಗಳು ಭರ್ತಿಯಾಗುತ್ತಿವೆ. ಆದರೆ, ಏಜೆನ್ಸಿಗಳು ತಮಗೆ ಬೇಕಾದವರಿಗೆ ಅವಕಾಶ ಕೊಡುತ್ತಿರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರು ಸರ್ಕಾರಿ ನೌಕರಿಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಹೊರಗುತ್ತಿಗೆಯಲ್ಲೂ ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯ ದಶಕಗಳಿಂದ ಕೇಳಿಬರುತ್ತಿತ್ತು.

ಇದೀಗ ಸರ್ಕಾರ, ಈ ಕುರಿತ ಮಹತ್ವದ ನಿರ್ಧಾರವನ್ನು ಕೈಗೊಂಡು ಆದೇಶ ಹೊರಡಿಸಿದ್ದು, ಎಲ್ಲಾ ಹಂತದ ಹೊರಗುತ್ತಿಗೆ ನೌಕರರ ನೇಮಕಾತಿಗೂ ಮೀಸಲಾತಿ ಅನ್ವಯಿಸುವಂತೆ ಆದೇಶದಲ್ಲಿ ಹೇಳಲಾಗಿದೆ. ಮೀಸಲಾತಿ ಪಾಲನೆಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳನ್ನು ಪಾಲನೆ ಮಾಡುವಂತೆಯೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

ಆದರೆ, ಈ ಮೀಸಲಾತಿ ಪಾಲನೆಯ ಆದೇಶ 45 ದಿನಗಳಿಗಿಂತ ಕಡಿಮೆ ಅವಧಿಯ ಹೊರಗುತ್ತಿಗೆ ನೇಮಕಾತಿಗೆ ಅನ್ವಯಿಸುವುದಿಲ್ಲ. ಕೇವಲ 45 ದಿನಗಳಿಗಿಂತ ಹೆಚ್ಚಿನ ಅವಧಿಯ ಹೊರಗುತ್ತಿಗೆ ನೇಮಕಾತಿಗೆ ಮಾತ್ರ ಮೀಸಲಾತಿ ಅನ್ವಯಿಸಲಿದೆ ಎಂದೂ ಆದೇಶದಲ್ಲಿ ಹೇಳಲಾಗಿದೆ. ನೇಮಕಾತಿಯ ಟೆಂಡರ್ ಕರೆಯುವಾಗಲೇ ಮೀಸಲಾತಿಯನ್ವಯ ಹುದ್ದೆ ಹಂಚಿಕೆ ಮಾಡಿ ಪ್ರಕಟಣೆ ಹೊರಡಿಸಬೇಕು ಎಂದಿರುವ ಇಲಾಖೆ, ಅಂತಹ ನಿಯಮಗಳ ಪಾಪನೆಯಾಗಿದೆಯೇ ಎಂಬುದನ್ನು ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು ಎಂದೂ ಹೇಳಲಾಗಿದೆ.

ಜೊತೆಗೆ ಯಾವುದೇ ಇಲಾಖೆಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೊರಗುತ್ತಿಗೆ ನೇಮಕಾತಿಯ ವೇಳೆ ಮಾತ್ರ ಈ ಮೀಸಲಾತಿ ಅನ್ವಯವಾಗಲಿದೆ ಎಂಬುದನ್ನೂ ಹೇಳಲಾಗಿದೆ.

ಈ ಸುತ್ತೋಲೆ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ವಿಶ್ವವಿದ್ಯಾಲಯ ಮತ್ತು ಸ್ವಾಯತ್ತ ಸಂಸ್ಥೆಗಳ ಹೊರಗುತ್ತಿಗೆ ನೇಮಕಾತಿಗೂ ಅನ್ವಯವಾಗಲಿವೆ ಎಂಬುದನ್ನು ಹೇಳಲಾಗಿದೆ.

Read More
Next Story