ನಮ್ಮದು ಹೋರಾಟ, ಕಾಂಗ್ರೆಸ್ಸಿನದ್ದು ಹಾರಾಟ: ಆರ್.ಅಶೋಕ್
x

ನಮ್ಮದು ಹೋರಾಟ, ಕಾಂಗ್ರೆಸ್ಸಿನದ್ದು ಹಾರಾಟ: ಆರ್.ಅಶೋಕ್


ʻʻವಿಪಕ್ಷವಾಗಿ ನಾವು ಹೋರಾಟ ಮಾಡುತ್ತಿದ್ದೇವೆ; ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷವಾಗಿ ಹಾರಾಟ ಮಾಡುತ್ತಿದೆʼʼ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮೈಸೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಜನಾಂದೋಲನ ಸಮಾವೇಶವನ್ನು ಟೀಕಿಸಿದ್ದಾರೆ.

ಮಂಡ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ʻʻಕಾಂಗ್ರೆಸ್ ಪಕ್ಷ, ವಿಪಕ್ಷವಾಗಿ ಬೀದಿಗಿಳಿದು ‘ನಾನು ಕಳ್ಳ ಅಲ್ಲ; ನಾನು ಕಳ್ಳ ಅಲ್ಲ, ನನ್ನ ನಂಬಿರಿ’ ಎಂದು ಹೇಳುವುದನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ವಿಪಕ್ಷವಾಗಲು ತಯಾರಿ ಮಾಡುತ್ತಿದೆʼʼ ಎಂದು ವ್ಯಂಗ್ಯವಾಡಿದ್ದಾರೆ.

ʻʻಕಾಂಗ್ರೆಸ್ ಪಕ್ಷದವರು ದಾಖಲೆಗಳನ್ನು ಕೊಟ್ಟು ಸರ್ಕಾರ ಸ್ವಚ್ಛ, ಪಾರದರ್ಶಕವಾಗಿದೆ ಎಂದು ವಿಧಾನಸಭೆ ಒಳಗೆ ಹೇಳಬೇಕಿತ್ತು. ಆದರೆ ಹೇಳಲಿಲ್ಲ, ಬದಲಾಗಿ ಈಗ ಮೈಸೂರಿನಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಈ ಮೂಲಕ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್, ವಿಪಕ್ಷವಾಗಲು ಕೆಲಸ ಮಾಡಲು ಪೀಠಿಕೆ ಹಾಕುತ್ತಿದೆʼʼ ಎಂದು ಟೀಕಿಸಿದರು.

ʻʻವಿಪಕ್ಷವಾಗಿ ನಾವು ಹೋರಾಟ ಮಾಡುತ್ತಿದ್ದೇವೆ; ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷವಾಗಿ ಹಾರಾಟ ಮಾಡುತ್ತಿದೆ ಎಂದು ಆಕ್ಷೇಪಿಸಿದ ಅವರು, ಮಂತ್ರಿಗಳಿಗೆ ಇನ್ ಚಾರ್ಜ್ ಕೊಟ್ಟು ಸಭೆಗಳನ್ನು ಮಾಡಿ, ನಾವು ಬಿಜೆಪಿ ಭ್ರಷ್ಟಾಚಾರಗಳನ್ನು ಬಯಲಿಗೆ ತರುತ್ತೇವೆ, ಕೇಂದ್ರ ನೀಡುವ ಅನುದಾನದಲ್ಲಿ ತಾರತಮ್ಯ ಆಗಿದೆ, ಅದರ ಬಗ್ಗೆ ನಾವು ಸಮಾವೇಶ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ಸಿನವರು ನಾಟಕ ಆಡುತ್ತಿದ್ದಾರೆʼʼ ಎಂದು ದೂರಿದರು.

ʻʻಕೇಂದ್ರದ ಅನುದಾನ ಬಾರದಿದ್ದರೆ ಪ್ರಜಾಪ್ರಭುತ್ವದ ರೀತಿಯಲ್ಲಿ ಮಾತನಾಡಬೇಕಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ವಿಪಕ್ಷ ನಾಯಕರು, ಅವರು ತಾರತಮ್ಯ ಆಗಿದೆ ಎಂದು ಸಂಸತ್ತಿನಲ್ಲಿ ಒಂದು ದಿನವೂ ಮಾತನಾಡಿಲ್ಲ. ಇಲ್ಲಿ ರಾಜಕೀಯದ ಬೇಳೆ ಬೇಯಿಸಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಸುತ್ತಿದ್ದಾರೆʼʼ ಎಂದು ಆರೋಪಿಸಿದರು.

ʻʻಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಬಂದು ಕಾಂಗ್ರೆಸ್ಸಿನವರ ಮುಖಕ್ಕೆ ಮಂಗಳಾರತಿ ಎತ್ತಿ ಹೋಗಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ಸರ್ಕಾರ 10 ವರ್ಷ ಇತ್ತು. ಅದೇ ರೀತಿ ನರೇಂದ್ರ ಮೋದಿಯವರ ಸರ್ಕಾರ 10 ವರ್ಷ ಇತ್ತು. ಅಂಕಿ- ಅಂಶಗಳೊಂದಿಗೆ ಹೋಲಿಸಿ ಅನುದಾನ, ಸಹಾಯದ ವಿವರ ನೀಡಿದ್ದಾರೆ. ಯಾವುದರಲ್ಲೂ ಕಡಿಮೆ ಮಾಡಿಲ್ಲ, ನಾನೇ ಹಿಂದೆ ಕಂದಾಯ ಸಚಿವನಾಗಿದ್ದೆ ಆಗ ಡಾ. ಮನಮೋಹನ್ ಸಿಂಗ್ ಅವರ ಸರ್ಕಾರ ಕೊಟ್ಟ ಮೊತ್ತಕ್ಕಿಂತ ಮೋದಿ ಸರ್ಕಾರ 5 ಪಟ್ಟು ಹೆಚ್ಚು ಅನುದಾನ ಕೊಟ್ಟಿದೆʼʼ ಎಂದು ತಿಳಿಸಿದರು.

ಪಾದಯಾತ್ರೆಯ ಅಂತಿಮ ಘಟ್ಟಕ್ಕೆ ತಲುಪಿದ್ದೇವೆ. ಇವತ್ತು ಸಂಜೆ ಮೈಸೂರು ಗಡಿಭಾಗ ತಲುಪಿ ನಾಳೆ ಬೆಳಿಗ್ಗೆ ಆರೇಳು ಕಿಮೀ ಪಾದಯಾತ್ರೆಯ ಬಳಿಕ ಮೈಸೂರಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಆರ್. ಅಶೋಕ್ ಅವರು ತಿಳಿಸಿದರು.

ʻʻಕಾನೂನು ಪ್ರಕಾರ, ನಿಯಮ ಪ್ರಕಾರ ಸಿದ್ದರಾಮಯ್ಯನವರು ನಿವೇಶನ ಪಡೆದಿದ್ದರೆ 2014ರಲ್ಲಿ ಕಡತ ಬಂದಾಗ ಯಾಕೆ ತಿರಸ್ಕರಿಸಿದ್ದರು? ಎನ್ನುವುದು ಇದು ಬಿಜೆಪಿ ಪ್ರಶ್ನೆ. 10 ವರ್ಷ ಅದಕ್ಕಾಗಿ ಕಾಯಬೇಕಿತ್ತೇ? ಅನ್ಯಾಯ ಇದ್ದ ಕಾರಣ ನೀವು ಆಗ ಸಹಿ ಹಾಕಿಲ್ಲ. ಅಲ್ಲವೇ? ಈ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲʼʼ ಎಂದು ತಿಳಿಸಿದರು.

Read More
Next Story