
ಗೊಡ್ಡು ಬೆದರಿಕೆಗೆ ಬಗ್ಗಲ್ಲ; ಪಾದಯಾತ್ರೆ ಹತ್ತಿಕ್ಕಲು ಸಾಧ್ಯವಿಲ್ಲ: ಬಿ ವೈ ವಿಜಯೇಂದ್ರ
ಗೊಡ್ಡು ಬೆದರಿಕೆ ಹಾಕುವ ಮೂಲಕ ನಮ್ಮ ಹೋರಾಟವನ್ನಾಗಲೀ, ಪಾದಯಾತ್ರೆಯನ್ನಾಗಲಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಮೈಸೂರು ಚಲೋ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ʻʻಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಉಪ ಮುಖ್ಯಮಂತ್ರಿ ಶಿವಕುಮಾರರೇ ನಿಮ್ಮ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಹೆದರುವುದಿಲ್ಲʼʼ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಸಂಬಂದ ಬಿಜೆಪಿ-ಜೆಡಿಎಸ್ ಪಕ್ಷಗಳು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿರುವ ಹಿನ್ನೆಲೆ ಗೃಹ ಸಚಿವ ಜಿ ಪರಮೇಶ್ವರ್ ಅವರು "ಪಾದಯಾತ್ರೆಗೆ ಅವಕಾಶ ನೀಡುವುದಿಲ್ಲ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ʻನಿಮ್ಮ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಹೆದರುವುದಿಲ್ಲʼ ಎಂದು ಸವಾಲು ಹಾಕಿದ್ದಾರೆ.
ʻʻಇಡೀ ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಪರವಾಗಿ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಪರಿಶಿಷ್ಟ ಸಮುದಾಯದ ಹಣ ಲೂಟಿ ಮಾಡಿದ್ದಾರೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆಸಿದ್ದಾರೆ. ಇವುಗಳ ವಿರುದ್ಧ ಹೋರಾಟ ನಡೆಸದೆ ಇದ್ದರೆ ಭಗವಂತನೂ ನಮ್ಮನ್ನು ಕ್ಷಮಿಸುವುದಿಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʻʻವಾಲ್ಮೀಕಿ ನಿಗಮದ ನೂರಾರು ಕೋಟಿ ಹಣವನ್ನು ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಪರಿಶಿಷ್ಟ ಪಂಗಡಗಳಿಗೆ ಸೇರಿದ ಈ ಹಣವನ್ನು ಬಳಿಕ ಅದನ್ನು ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿದ್ದರು. ಹೆಂಡ ಖರೀದಿಯೂ ಮಾಡಿದ್ದನ್ನು ಇಡಿ ಉಲ್ಲೇಖಿಸಿದೆ. ವಾಲ್ಮೀಕಿ ನಿಗಮದಲ್ಲಿ 3187 ಕೋಟಿ ಅವ್ಯವಹಾರ ನಡೆದಿದೆ ಎಂದು ಯೂನಿಯನ್ ಬ್ಯಾಂಕ್, ಸಿಬಿಐಗೆ ಪತ್ರ ಬರೆದಿದೆ. ಸಿಬಿಐ ತನಿಖೆ ಮಾಡಬೇಕೆಂದು ಅದು ಕೋರಿತ್ತು. ಕಾನೂನಿನಡಿಯೇ ಸಿಬಿಐ ತನಿಖೆ ನಡೆಯುತ್ತಿದೆ. ಸರ್ಕಾರ ರಚಿಸಿದ ಎಸ್‌ಐಟಿ ಎಂದರೆ ಅದು ಸಿದ್ದರಾಮಯ್ಯ ಇನ್‌ವೆಸ್ಟಿಗೇಷನ್ ಟೀಂ. ಅಹಿಂದ ಸಮುದಾಯಕ್ಕೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆʼʼ ಎಂದು ಆರೋಪ ಮಾಡಿದರು.
"ಬಿಜೆಪಿ, ವಾಲ್ಮೀಕಿ ನಿಗಮದ ಹಗರಣ ಮತ್ತು ಮೂಡಾ ಹಗರಣ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದೆ. ಮುಡಾದಲ್ಲಿ ಸಿದ್ದರಾಮಯ್ಯನವರ ಕುಟುಂಬ ಪಡೆದ 14 ನಿವೇಶನಗಳು ಮುಡಾಕ್ಕೆ ವಾಪಸ್ ಬಂದು ಬಡವರಿಗೆ ಹಂಚಿಕೆ ಅಗಲಿದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಬೈರತಿ ಸುರೇಶ್ ಏಕೆ ರಾತ್ರೋ ರಾತ್ರಿ ಮೈಸೂರಿಗೆ ಹೋಗ್ತಾರೆ? ಕಡತಗಳನ್ನು ಬೆಂಗಳೂರಿಗೆ ಏಕೆ ತರುತ್ತಾರೆ? ಯಾವುದೇ ಚುನಾವಣೆ ಇಲ್ಲದೆ ಇದ್ದರೂ ನಾವು ಹೋರಾಟ ಮಾಡ್ತಿದ್ದೇವೆ. ಅಹಿಂದ ಸಮುದಾಯಕ್ಕೆ ದ್ರೋಹ, ಅನ್ಯಾಯ ಮಾಡಿದ್ದಾರೆ. ಅದಕ್ಕಾಗಿ ಪಾದಯಾತ್ರೆ" ಎಂದು ಹೇಳಿದರು.
"ವಾಲ್ಮೀಕಿ ಹಗರಣದ ಬಗ್ಗೆ ನಮ್ಮ ಒತ್ತಡಕ್ಕೆ ಮಣಿದು ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ. ಆದರೆ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಇವರ ಹಣೆಬರಹ ಬಹಿರಂಗ ಆಗುತ್ತದೆ ಎಂಬ ಕಾರಣಕ್ಕಾಗಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಮುಡಾದಲ್ಲಿ ಹಗರಣ ಆಗಿಲ್ಲದಿದ್ದರೆ ಸದನದಲ್ಲಿ ಉತ್ತರ ಕೊಡದೆ ಏಕೆ ಪಲಾಯನ ಮಾಡಿದ್ರಿ?" ಎಂದು ಪ್ರಶ್ನಿಸಿದರು.
ʻʻಮೂರರಿಂದ ನಾಲ್ಕು ಸಾವಿರ ಕೋಟಿ ಬೆಲೆಬಾಳುವ ನಿವೇಶನಗಳನ್ನು ಮನಸೋ ಇಚ್ಛೆ ಕೊಡಲಾಗಿದೆ. ಸ್ವತಃ ಸಿದ್ದರಾಮಯ್ಯನವರೇ ನೇಮಿಸಿದ ಮೂಡಾ ಅಧ್ಯಕ್ಷ ಮರಿಗೌಡರೇ ಇದನ್ನು ಬಾಯಿ ಬಿಟ್ಟಿದ್ದಾರೆ. ಇನ್ನು ಮುಂದೆ ನಿವೇಶನ ಹಂಚದಿರಲು ಕಡತದಲ್ಲಿ ಮುಡಾ ಅಧ್ಯಕ್ಷರೇ ಸೂಚಿಸಿದ್ದರು. ಜಿಲ್ಲಾಧಿಕಾರಿ ತನಿಖೆಯನ್ನೂ ಮಾಡಿಸಿದ್ದರು. ತನಿಖಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಅದು ಸರಿ ಇರುವುದಾಗಿ ಸರ್ಕಾರವೂ ಹೇಳಿತ್ತುʼʼ ಎಂದು ಹೇಳಿದರು.
ʻʻನಿವೇಶನ ನೀಡದಂತೆ ಸರ್ಕಾರದ ಆದೇಶದ ನಂತರವೂ ಮುಡಾ ಕಮೀಷನರ್ ಯಥೇಚ್ಛವಾಗಿ ನಿವೇಶನ ಹಂಚಿದ್ದರು. ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ನಾವು ಈ ಕುರಿತು ಒತ್ತಡ ಹೇರಿ ಚರ್ಚೆಗೆ ಅವಕಾಶ ಪಡೆದಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟಿದ್ದ ಅನುದಾವನ್ನು ಸ್ಥಗಿತಗೊಳಿಸಿದ್ದಾರೆʼʼ ಎಂದು ಟೀಕಿಸಿದರು.
ʻʻಕಾಂಗ್ರೆಸ್ ಬಂದ ಬಳಿಕ ಅಭಿವೃದ್ಧಿ ಮರೀಚಿಕೆಯಾಗಿದೆ. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದೆ. ಆದರೆ ಲೋಕಸಭೆ ಚುನಾವಣೆ ಮತದಾನದ ಮೂರು ದಿನ ಮೊದಲು ಗೃಹ ಲಕ್ಷ್ಮಿ ಹಣ 50% ಖಾತೆಗೆ ಹೋಗುತ್ತದೆ. ಆದರೆ ಚುನಾವಣೆಯ ಬಳಿಕ ಗೃಹ ಲಕ್ಷ್ಮಿ ಹಣ ಬಂದ್ ಆಗಿದೆʼʼ ಎಂದರು.
ಪಾದಯಾತ್ರೆ ಯಾವಾಗ ಮತ್ತು ಎಲ್ಲಿಂದ ಆರಂಭ?
ಇದೇ ಆಗಸ್ಟ್ 3ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲು ಬಿಜೆಪಿ ನಿರ್ಧರಿಸಿದ್ದು, ಆಗಸ್ಟ್ 10ರಂದು ಮೈಸೂರಿನಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸೋಮವಾರ (ಜು.29) ಪಕ್ಷದ ನಾಯಕರ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದರು.
ಆ.10ರಂದು ಬೆಳಿಗ್ಗೆ 8.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದ್ದು, ಪ್ರತಿನಿತ್ಯ 20 ಕಿ.ಮೀನಷ್ಟು ಪಾದಯಾತ್ರೆ ನಡೆಯಲಿದೆ. ಮೊದಲ ದಿನ 8 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸುತ್ತಾರೆ. ಒಂದೊಂದು ದಿನ ಒಂದೊಂದು ಮೋರ್ಚಾ ಕಾರ್ಯಕರ್ತರು ಭಾಗವಹಿಸುತ್ತಾರೆ. ಬೆಳಿಗ್ಗೆಯಿಂದ ಮಧ್ಯಾಹ್ನ ಒಂದು ತಂಡ, ಮಧ್ಯಾಹ್ನದಿಂದ ಸಂಜೆಯವರೆಗೆ ಮತ್ತೊಂದು ತಂಡ ಭಾಗವಹಿಸುತ್ತದೆ. ಪಾದಯಾತ್ರೆ ಯಶಸ್ವಿಗೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಸಮನ್ವಯ ತಂಡ ಕೂಡಾ ರಚಿಸುತ್ತೇವೆ. ಇನ್ನು ಪಾದಯಾತ್ರೆ ಆಗಸ್ಟ್ 10 ರಂದು ಮುಕ್ತಾಯ ಆಗಲಿದ್ದು, ಸಮಾರೋಪ ಸಮಾವೇಶದಲ್ಲಿ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುತ್ತಾರೆ ಎಂದು ವಿಜಯೇಂದ್ರ ಮಾಹಿತಿ ನೀಡಿದ್ದಾರೆ.