ಅಂಗಾಂಗ ದಾನ | ಸಾವಿನಲ್ಲೂ ಸಾರ್ಥಕತೆ ಮರೆದ ಮಂಗಳೂರಿನ ಗ್ಲೋರಿಯಾ
x
ಗ್ಲೋರಿಯಾ ರೋಡ್ರಿಗಾಸ್

ಅಂಗಾಂಗ ದಾನ | ಸಾವಿನಲ್ಲೂ ಸಾರ್ಥಕತೆ ಮರೆದ ಮಂಗಳೂರಿನ ಗ್ಲೋರಿಯಾ


ಕೆಲವರು ಇರುತ್ತಾರೆ.. ಆಯಸ್ಸು ಅಲ್ಪವಾದರೂ ಕೊನೆ ಉಸಿರು ಎಳೆಯುವಾಗಲೂ ಮತ್ತೊಬ್ಬರ ಬದುಕಿಗೆ ಆಸರೆಯಾಗಿ ಸಾವಿನಲ್ಲೂ ಸಾರ್ಥಕತೆ ಮೆರೆಯುತ್ತಾರೆ.

ಅಂತಹ ಅಪರೂಪದ ಸಾರ್ಥಕತೆ ಮರೆದವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ಡೋಡ್ರಿಗಾಸ್.

ಹೌದು, ಕೇವಲ 23 ವರ್ಷದ ಗ್ಲೋರಿಯಾ ದಿಢೀರನೇ ಬಂದು ಎರಗಿದ ಸಾವಿನ ಎದುರೂ ನಿಸ್ವಾರ್ಥ ಮತ್ತು ಪರೋಪಕಾರದ ಕಾರ್ಯ ಮಾಡಿ ಅಪರೂಪದ ಮಾನವೀಯತೆ ಮತ್ತು ಬದುಕಿನ ಸಾರ್ಥಕತೆಗೆ ಮೇರು ಉದಾಹರಣೆಯಾಗಿದ್ದಾರೆ.

ಸುಂದರ ಯುವತಿಯಾಗಿದ್ದ ಗ್ಲೋರಿಯಾ, ಬದುಕಿನ ಹರೆಯದ ದಿನಗಳಲ್ಲಿ ಇರುವಾಗಲೇ ಅವರಿಗೆ ಅಪರೂಪದ ಅಲರ್ಜಿಗೆ ಸಂಬಂಧಿಸಿದ ಅನಾಫಿಲ್ಯಾಕ್ಟಿಕ್ ಎಂಬ ಸಮಸ್ಯೆ ಕಾಣಿಸಿಕೊಂಡಿತ್ತು. ಕೆಲವು ದಿನಗಳ ಹಿಂದೆ ದಿಢೀರನೇ ಕಾಣಿಸಿಕೊಂಡ ಈ ತೀವ್ರ ಅಲರ್ಜಿಯಿಂದಾಗಿ ಅವರು ಕಾಲೇಜಿನ ಮೆಟ್ಟಿಲಿನಿಂದ ಬಿದ್ದು ಕೋಮಾಕ್ಕೆ ಜಾರಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ರೆ ಪಡೆಯುತ್ತಿದ್ದರು. ಆದರೆ, ಅನಾಫಿಲ್ಯಾಕ್ಟಿಕ್ ಮೆದುಳಿಗೆ ಹಾನಿ ಮಾಡಿತ್ತು. ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹಾನಿ ತಡೆಯುವ ಪ್ರಯತ್ನ ನಡೆಸಿದರೂ ಅಷ್ಟರಲ್ಲಾಗಲೀ ಪರಿಸ್ಥಿತಿ ಕೈಮೀರಿತ್ತು. ಎಲ್ಲ ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲಿಲ್ಲ. ಭವಿಷ್ಯದ ಕುರಿತು ಸಾವಿರ ಕನಸುಗಳನ್ನು ಹೊತ್ತಿದ್ದ ಗ್ಲೋರಿಯಾ ನವೆಂಬರ್ 14ರಂದು ಕೊನೆಯುಸಿರೆಳೆದರು.

ಮಂಗಳೂರಿನ ಬಜ್ಪೆ ಪಡು ಪೆರಾರ ವಾಸಿಗಳಾದ ಗ್ರೇಷನ್ ಅಲೆಕ್ಸ್ ರೋಡ್ರಿಗಾಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿಯ ಪುತ್ರಿಯಾಗಿದ್ದ ಗ್ಲೋರಿಯಾ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲೇ ಸ್ನಾತಕೋತ್ತರ ಪದವಿ ಪಡೆದು, ಅದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರಿಗೆ ಊಟದ ಬಳಿಕ ದಿಢೀರನೇ ಅಲರ್ಜಿ ಕಾಣಿಸಿಕೊಂಡಿತ್ತು. ಅಲರ್ಜಿ ಉಲ್ಬಣವಾದ ಬಳಿಕ ಅದು ಅನಾಫಿಲ್ಯಾಕ್ಟಿಕ್ ಎಂದು ಗುರುತಿಸಿ ಚಿಕಿತ್ಸೆ ನೀಡಲಾಗಿತ್ತು.

ಸಾವಿನಲ್ಲೂ ಸಾರ್ಥಕತೆ

ಆದರೆ, ಆಕೆಯನ್ನು ಬದುಕುಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದ ಆಕೆಯ ತಂದೆ-ತಾಯಿ, ಮಗಳನ್ನು ಉಳಿಸಿಕೊಳ್ಳಲಾಗದ ದುಃಖದ ನಡುವೆಯೂ ಪರೋಪಕಾರ ಮೆರೆದಿದ್ದಾರೆ. ಆ ಮೂಲಕ ತನ್ನ ಸಾವಿನನ್ನೂ ಆಕೆ ಸಾರ್ಥಕತೆ ಕಾಣುವ ಅವಕಾಶ ಮಗಳಿಗೆ ಕೊಟ್ಟಿದ್ದಾರೆ.

ಮೃತ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಾಸ್ ಅವರ ಅಂಗಾಂಗಗಳನ್ನು ದಾನಮಾಡಲಾಗಿದೆ. ಗ್ಲೋರಿಯಾ ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಆಕೆಯ ತಂದೆ-ತಾಯಿಯೇ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು.

ಅದರಂತೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲೇ ಅಂಗಾಂಗ ಕಸಿ ಮಾಡಿ, ಗ್ಲೋರಿಯಾ ಅವರ ಯಕೃತ್ತನ್ನು ಎಜೆ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಹಾಗೇ, ಪರೋಪಕಾರಕ್ಕೆ ಮಿಡಿದ ಗ್ಲೋರಿಯಾ ಅವರ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮೂತ್ರಪಿಂಡವನ್ನು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಮತ್ತು ಚರ್ಮ ಮತ್ತು ಕಾರ್ನಿಯಾವನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ನೀಡಲಾಗಿದೆ.

ಈ ಮೂಲಕ ವಿದ್ಯಾರ್ಥಿಗಳು, ಸಹೋದ್ಯೋಗಿ ಉಪನ್ಯಾಸಕರು ಮತ್ತು ಕಾಲೇಜು ಆಡಳಿತ ಮಂಡಳಿಯ ನೆಚ್ಚಿನ ಗ್ಲೋರಿಯಾ, ಸಾವಿನಲ್ಲೂ ಸಾರ್ಥಕತೆ ಮರೆದು ಎಲ್ಲರ ಭಾರದ ಮನಸ್ಸಿನಲ್ಲೂ ಮತ್ತೆ ಹಸಿರಾಗಿದ್ದಾರೆ.

Read More
Next Story