
ಸಿದ್ದರಾಮಯ್ಯ
Hampi | ಅತ್ಯಾಚಾರಿಗಳ ಬಂಧನಕ್ಕೆ ಆದೇಶ; ಪ್ರವಾಸಿಗರ ಭದ್ರತೆಗೆ ಸರ್ಕಾರ ಬದ್ಧ: ಸಿಎಂ ಭರವಸೆ
ಅತ್ಯಾಚಾರ ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲು ಆದೇಶ ನೀಡಿದ್ದೇನೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಇಸ್ರೇಲ್ ಮಹಿಳೆ ಹಾಗೂ ಹೋಂ ಸ್ಟೇ ನಿರ್ವಾಹಕಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ.
ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲು ಆದೇಶ ನೀಡಿದ್ದೇನೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಗಂಗಾವತಿ ತಾಲೂಕಿನ ಪ್ರವಾಸಿ ತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ಗುರುವಾರ ರಾತ್ರಿ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕ ಗಿಟಾರ್ ಬಾರಿಸುತ್ತಾ ಕುಳಿತಿದ್ದ ಐವರು ಪ್ರವಾಸಿಗರ ಪೈಕಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಬಗ್ಗೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಸ್ರೇಲ್‌ನ 27 ವರ್ಷದ ಮಹಿಳೆ ಮತ್ತು 29 ವರ್ಷದ ಹೋಮ್ ಸ್ಟೇ ನಿರ್ವಾಹಕಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಘಟನೆ ವೇಳೆ ಮೂವರು ಪುರುಷ ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಕಾಲುವೆಗೆ ತಳ್ಳಿದ್ದರು. ಘಟನೆಯಲ್ಲಿ ಓರ್ವ ಪ್ರವಾಸಿಗನ ಮೃತದೇಹ ಶನಿವಾರ ಪತ್ತೆಯಾಗಿತ್ತು.