Oppression of Kannadigas by non-native speakers,  truth behind the false allegations
x
ವಿಂಗ್ ಕಮಾಂಡರ್​ ಹಲ್ಲೆ ನಡೆಸುತ್ತಿರುವ ಸಿಸಿ ಟಿವಿ ದೃಶ್ಯಗಳು.

ಕನ್ನಡಿಗರ ಮೇಲೆ ದಬ್ಬಾಳಿಕೆ; ಭಾಷಾ ಕಿಚ್ಚು ಹಚ್ಚುವ ಕಿಡಿಗೇಡಿಗಳ ಅಸಲಿಯತ್ತೇನು?

ತಾವೇ ಕುಕೃತ್ಯ ನಡೆಸಿದರೂ ''ಕನ್ನಡ ಮಾತನಾಡಿಲ್ಲ'' ಎಂಬ ಕಾರಣಕ್ಕೆ ಕನ್ನಡಿಗರು ತಮ್ಮ ಹಲ್ಲೆ ನಡೆಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳ ಮೂಲಕ ಸುಳ್ಳು ಆರೋಪಗಳನ್ನು ಮಾಡಿ ಬಚಾವಾಗಲು ಯತ್ನಿಸುತ್ತಿದ್ದಾರೆ. ಇದರಿಂದ ಕನ್ನಡಿಗರು ಕೆರಳಿದ್ದಾರೆ.


ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಅನಪೇಕ್ಷಿತ ಘಟನೆಗಳು, ಕನ್ನಡಿಗರ ಮೇಲೆ ಅನ್ಯ ಭಾಷಿಕರ ದಬ್ಬಾಳಿಕೆ, ಭಾಷಾ ವಿವಾದ ಮತ್ತು ಸುಳ್ಳು ಆರೋಪಗಳು ತೀವ್ರ ಸಾಮಾಜಿಕ ಚರ್ಚೆಗೆ ಕಾರಣವಾಗಿವೆ.

ಉದ್ಯೋಗ ಹಾಗೂ ನಾನಾ ಕಾರಣಗಳಿಗೆ ಬೆಂಗಳೂರಿಗೆ ಬರುವ ಉತ್ತರ ಭಾರತೀಯರು ಸೇರಿದಂತೆ ಬೇರೆ ಭಾಷಿಕರು, ಇಲ್ಲಿ ತಮ್ಮ ಭಾಷಾ ದುರಭಿಮಾನ ಪ್ರದರ್ಶಿಸುವ ಜತೆ ಸ್ಥಳೀಯರ ಮೇಲೆಯೇ ಹಲ್ಲೆ ನಡೆಸುತ್ತಿರುವುದು ಆತಂಕಕಾರಿ ಎಂಬ ಜನಾಭಿಪ್ರಾಯ ಮೂಡುವಂತೆ ಮಾಡಿದೆ.

ತಾವೇ ಕುಕೃತ್ಯ ನಡೆಸಿದರೂ ''ಕನ್ನಡ ಮಾತನಾಡಿಲ್ಲ'' ಎಂಬ ಕಾರಣಕ್ಕೆ ಕನ್ನಡಿಗರು ತಮ್ಮ ಹಲ್ಲೆ ನಡೆಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳ ಮೂಲಕ ಸುಳ್ಳು ಆರೋಪಗಳನ್ನು ಮಾಡಿ ಬಚಾವಾಗಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ನಿಧಾನವಾಗಿ ಕನ್ನಡಿಗರು ಕೆರಳುತ್ತಿದ್ದು ಪ್ರತಿರೋಧ ಆರಂಭಿಸಿದ್ದಾರೆ. ಕೆಲವು ರಾಷ್ಟ್ರೀಯ ಮಾಧ್ಯಮಗಳು ಏಕಪಕ್ಷೀಯವಾಗಿ ಕನ್ನಡಿಗರ ಹಾಗೂ ಬೆಂಗಳೂರಿಗರ ಬಗ್ಗೆ ಸುಳ್ಳು ವರದಿಗಳನ್ನು ಪ್ರಕಟಿಸಿ ಅಪಮಾನ ಮಾಡುತ್ತಿವೆ ಎಂದೂ ಅವರೆಲ್ಲರೂ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ತಪ್ಪನ್ನು ಮುಚ್ಚಿ ಹಾಕಲು ಕನ್ನಡಿಗರ ಮೇಲೆ ಗೂಬೆ ಕೂರಿಸುವ ಅನ್ಯಭಾಷಿಕರು

ಕನ್ನಡಿಗರ ಮೇಲಿನ ಸತತ 'ಅನ್ಯಾಯ'ದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬುವರೇ ಅದಕ್ಕೆ ಕಾರಣ. ಅವರು ಸ್ಥಳೀಯ ಯುವಕನ ಮೇಲೆ ಮಾರಕವಾಗಿ ಹಲ್ಲೆ ನಡೆಸಿದ್ದ ಹೊರತಾಗಿಯೂ ತಮ್ಮ ಮೇಲೆಯೇ ''ಕನ್ನಡ ಮಾತನಾಡಿಲ್ಲ'' ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವಿಡಿಯೊ ಮಾಡಿದ್ದರು. ಆರಂಭದಲ್ಲಿ ವಾಯುಪಡೆ ಅಧಿಕಾರಿಯ ಮಾತನ್ನು ಎಲ್ಲರೂ ನಂಬಿದ್ದರು. ಆದರೆ, ಘಟನೆ ನಡೆದ ವ್ಯಾಪ್ತಿಯಲ್ಲಿನ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳು ಸತ್ಯ ಹೇಳಿದ್ದವು. ಆ ದೃಶ್ಯಗಳು ಏರ್​ಫೋರ್ಸ್​ ಅಧಿಕಾರಿಯ 'ಮಿಥ್ಯೆಯ ಗುರಾಣಿ'ಯನ್ನು ಭೇದಿಸಿವೆ!

ಏನಿದು ಘಟನೆ?

ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರ ಪತ್ನಿ ಚಲಾಯಿಸುತ್ತಿದ್ದ ಕಾರಿಗೆ ವಿಕಾಸ್ ಎಂಬ ಯುವಕನ ಬೈಕ್ ಸ್ವಲ್ಪ ತಾಗಿತ್ತು. ಈ ಕಾರಣಕ್ಕಾಗಿ ಉಂಟಾದ ವಾಗ್ವಾದವು ಶೀಘ್ರದಲ್ಲೇ ದೈಹಿಕ ಹಲ್ಲೆಗೆ ತಿರುಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವಿಂಗ್ ಕಮಾಂಡರ್ ಬೋಸ್, ವಿಕಾಸ್‌ನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ವಿಕಾಸ್‌ನ ಮೊಬೈಲ್‌ನ್ನು ಕಿತ್ತು ನೆಲಕ್ಕೆ ಎಸೆದು ಪುಡಿಗಟ್ಟಿದ್ದಾರೆ. 'ರೌಡಿ' ರೀತಿಯ ವರ್ತನೆ ತೋರಿದ್ದಾರೆ. ಸ್ಥಳೀಯರು ತಡೆಯಲು ಯತ್ನಿಸಿದರೂ ಅಧಿಕಾರದ ದರ್ಪವನ್ನು ಎಲ್ಲರ ಮುಂದೆ ಪ್ರದರ್ಶಿಸಿದ್ದಾರೆ.

ಈ ನಡುವೆ ಯುವಕನ ಕೈಯಲ್ಲಿದ್ದ ಬೈಕ್​ ಕೀ ಅವರ ಮುಖಕ್ಕೆ ತಾಗಿ ರಕ್ತ ಸೋರಿದೆ. ತನ್ನೆಲ್ಲ ದುರಂಹಕಾರವನ್ನು ಬಡಪಾಯಿಗೆ ಹೊಡೆಯುವ ಮೂಲಕ ಪ್ರದರ್ಶಿಸಿದ್ದ ಅವರಿಗೆ ತನ್ನ ಮೂಗಿನಲ್ಲಿಯೂ ರಕ್ತ ಬರುತ್ತಿರುವುದು ಗೊತ್ತಾಗಿದ್ದೇ ತಡ, ಹೊಸ ನಾಟಕ ಶುರು ಮಾಡಿದ್ದರು.

ಯುವಕನಿಗೆ ಮಾರಣಾಂತಿಕ ಹಲ್ಲೆಗೈದು ಅಲ್ಲಿಂದ ಹೊರಡುವ ನಡುವೆಯೇ ವಿಂಗ್ ಕಮಾಂಡರ್ ಬೋಸ್, ತಾವೇ ದಾಳಿಗೊಳಗಾದವರು ಎಂದು ಸುಳ್ಳು ಆರೋಪಗಳನ್ನು ಮಾಡಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿ "ಕನ್ನಡ ಮಾತನಾಡದ ಕಾರಣಕ್ಕೆ ಬೈಕ್ ಸವಾರನಿಂದ ಹಲ್ಲೆಗೊಳಗಾದೆ, ನನ್ನ ಪತ್ನಿಗೆ ಅವಾಚ್ಯ ಪದಗಳಿಂದ ನಿಂದಿಸಿದರು, ಸ್ಥಳೀಯರು ಯಾರೂ ಸಹಾಯಕ್ಕೆ ಬರಲಿಲ್ಲ" ಎಂದು ಮೊಸಳೆ ಕಣ್ಣಿರು ಸುರಿಸಿದ್ದಾರೆ. ತಮ್ಮ ತಲೆ ಮತ್ತು ಮೂಗಿನ ಭಾಗಕ್ಕೆ ಪೆಟ್ಟಾಗಿದೆ ಎಂದು ಬ್ಯಾಂಡೇಜ್ ಹಾಕಿಕೊಂಡು ಬಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಪ್ರದರ್ಶಿಸಿದ್ದಾರೆ. ಈ ವೀಡಿಯೋ ವೈರಲ್ ಆದ ಕಾರಣ ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ತಪ್ಪು ಕಲ್ಪನೆ ಮೂಡಲು ಆರಂಭಿಸಿತ್ತು. ಕೆಲವು ಪೂರ್ವಗ್ರಹ ಪೀಡಿತ ಅನ್ಯಭಾಷಿಕರು ಕನ್ನಡಿಗರ ಸಮುದಾಯವನ್ನೇ ನಿಂದಿಸಲು ಆರಂಭಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾದ ಸತ್ಯ

ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ವಿಂಗ್ ಕಮಾಂಡರ್‌ನ ನಿಜ ಬಣ್ಣ ಬಯಲು ಮಾಡಿತು ಹಾಗೂ ಕನ್ನಡಿಗರಿಗೆ ಆಗುತ್ತಿದ್ದ ಬೃಹತ್ ಅಪಮಾನವನ್ನು ತಡೆದಿದೆ. ದೃಶ್ಯಾವಳಿಗಳಲ್ಲಿ ಬೈಕ್ ಸವಾರ ವಿಕಾಸ್‌ನ ಮೇಲೆ ಬೋಸ್ ತೀವ್ರವಾಗಿ ದಾಳಿ ಮಾಡಿರುವುದು ಗೊತ್ತಾಗಿದೆ. ವಿಕಾಸ್​ನನ್ನು ನೆಲಕ್ಕೆ ಬೀಳಿಸಿ, ಸಿನಿಮಾದ ಹೀರೋ ರೀತಿ ಕಾಲಲ್ಲಿ ಒದ್ದಿದ್ದಾರೆ. ಈ ದಾಳಿಯಿಂದ ವಿಕಾಸ್‌ಗೆ ಗಂಭೀರ ಗಾಯಗಳಾಗಿವೆ.

ವಿಂಗ್ ಕಮಾಂಡರ್ 'ಸಾಚಾ' ಎಂದು ನಂಬಿದ ಪೊಲೀಸರು ವಿಕಾಸ್​ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ವಿಡಿಯೊ ಬಯಲಾಗುತ್ತಿದ್ದಂತೆ ಕೆರಳಿದ ಕನ್ನಡಪರ ಸಂಘಟನೆಗಳು ಕೆ.ಆರ್​ ಪುರ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹಕ್ಕೊತ್ತಾಯ ಮಾಡಿದ್ದರು. ಅಮಾನವೀಯವಾಗಿ ಹಲ್ಲೆ ಮಾಡಿದ ವಿಂಗ್ ಕಮಾಂಡರ್ ಮೇಲೆಯೂ ಎಫ್​ಐಆರ್​ ದಾಖಲಿಸುವಂತೆ ಒತ್ತಾಯಿಸಿದ್ದರು. ಆರಂಭದಲ್ಲಿ ನಿರಾಕರಿಸಿದ್ದ ಪೊಲೀಸರು ಸಾರ್ವಜನಿಕರ ಒತ್ತಡಕ್ಕೆ ಮಣಿದು ಎಫ್​ಐಆರ್ ದಾಖಲಿಸಿದ್ದಾರೆ.

ಸಿಎಂ ಖಂಡನೆ

ವಿಕಾಸ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದು, ವಿಂಗ್‌ ಕಮಾಂಡರ್‌ ವಿರುದ್ದ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ತಮ್ಮ ಎಕ್ಸ್(ಟ್ವಿಟ್ಟರ್)‌ ಖಾತೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಸಿಎಂ. ಕನ್ನಡಿಗನ ಮೇಲೆಯೇ ವಿಂಗ್‌ ಕಮಾಂಡರ್‌ ಹಲ್ಲೆ ನಡೆಸಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗನಿಗೆ ಎಲ್ಲ ರೀತಿಯ ಕಾನೂನು ನೆರವು ಕೊಡುತ್ತೇವೆ ಹಾಗೂ ವಿಂಗ್ ಕಮಾಂಡರ್ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್ ಬಗ್ಗೆ ರಾಜಕೀಯ ಪಕ್ಷ ಜೆಡಿಎಸ್‌ ಹಾಗೂ ಇತರ ಕನ್ನಡಪರ ಸಂಘಟನೆಗಳೂ ಖಂಡನೆ ವ್ಯಕ್ತಪಡಿಸಿವೆ. ಆತನ ದುಷ್ಕೃತ್ಯದಿಂದ ರಾಷ್ಟ್ರದ ಹೆಮ್ಮೆಯ ವಾಯುಸೇನೆಯ ಆಡಳಿತಕ್ಕೂ ಕಪ್ಪುಚುಕ್ಕೆ ಇಟ್ಟಂತಾಗಿದೆ. ಇದು ವಾಯಸೇನಾಧಿಕಾರಿಗಳಲ್ಲೂ ಆತಂಕ ಸೃಷ್ಟಿಸಿದ್ದು, ಸದ್ಯದಲ್ಲೇ ಆತನ ಕೋರ್ಟ್‌ ಮಾರ್ಷಲ್‌ ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡಿಗರ ಮೇಲಿನ ದಬ್ಬಾಳಿಕೆ ನಿರಂತರ

ಈ ಘಟನೆಯು ಕನ್ನಡಿಗರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದಬ್ಬಾಳಿಕೆಯ ಒಂದು ತಾಜಾ ಉದಾಹರಣೆಯಷ್ಟೇ. ಅದಕ್ಕಿಂತ ಎರಡು ದಿನಗಳ ಹಿಂದೆಯುಷ್ಟೇ ಉತ್ತರ ಭಾರತ ಮೂಲಕ ಟೆಕಿಯೊಬ್ಬರು ಬೆಂಗಳೂರಿನ ಆಟೊ ಚಾಲಕರೊಬ್ಬರಿಗೆ ''ಹಿಂದಿ ಮಾತನಾಡಿಲ್ಲ'' ಎಂದು ಬೆದರಿಕೆ ಹಾಕಿದ ಪ್ರಸಂಗವೂ ನಡೆದಿತ್ತು. ಕನ್ನಡಿಗರ ಆಕ್ರೋಶ ಹೆಚ್ಚಾದ ಬಳಿಕ ಆತ ಸೋಶಿಯಲ್​ ಮೀಡಿಯಾಗಳ ಮುಂದೆ ಬಂದ ಕ್ಷಮೆ ಕೋರಿದ್ದರು.

2021ರಲ್ಲಿ ಜೊಮ್ಯಾಟೊ ಸಂಸ್ಥೆಯ ಡೆಲಿವರಿ ಬಾಯ್​ ಒಬ್ಬರು ಆಹಾರ ತಡವಾಗಿ ತಲುಪಿಸಿದ್ದರು ಎಂದು ಫ್ಯಾಶನ್​ ಕ್ಷೇತ್ರದಲ್ಲಿ ಕೆಲಸ ಮಾಡುವ ಹಿತೇಶ್​ ಚಂದ್ರಾಣಿ ಎಂಬು ಯುವತಿ ಡೆಲಿವರಿ ಬಾಯ್​ ಕಾಂತೇಶ್​ ಎಂಬುವರಿಗೆ ಚಪ್ಪಲಿಯಲ್ಲಿ ಹಲ್ಲೆ ಮಾಡಿದ್ದರು. ಅದರಿಂದ ತಪ್ಪಿಸಿಕೊಳ್ಳಲು ಅವರು ಮುಂದಾದಾಗ, ವಿಂಗ್​ ಕಮಾಂಡರ್ ಪ್ರಕರಣದಂತೆಯೇ, ಯುವತಿಯ ಮೂಗಿಗೇ ಗಾಯವಾಗಿತ್ತು. ಬಳಿಕ ವಿಡಿಯೊ ಮಾಡಿದ್ದ ಆಕೆ ''ಕನ್ನಡಿಗ ಹಾಗೂ ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದ' ಎಂಬ ಮಹಾ ಸುಳ್ಳನ್ನು ಹೇಳಿದ್ದರು. ವಿಷಯ ದೊಡ್ಡದಾದ ಬಳಿಕ ಯುವತಿ ಮೇಲೂ ದೂರು ದಾಖಲಾಗಿತ್ತು.

ಫೆಬ್ರವರಿಯಲ್ಲಿ ಹೆಸರಘಟ್ಟ ರಸ್ತೆಯ ಬಳಿಯ ಗಬ್ರು ಬಿಸ್ಟ್ರೋ ಮತ್ತು ಕೆಫೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಕನ್ನಡಿಗ ಡೆಲಿವರಿ ಬಾಯ್ ಒಬ್ಬರು ಹೋಟೆಲ್‌ ಸಿಬ್ಬಂದಿಗೆ ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಹೋಟೆಲ್ ಒಳಗೆ ಎಳೆದೊಯ್ದು ಹಲ್ಲೆ ಮಾಡಿದ್ದರು ಎಂದ ಆರೋಪಿಸಲಾಗಿತ್ತು. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆಕ್ರೋಶ ವ್ಯಕ್ತವಾಗಿತ್ತು.

ಭಾಷಾ ಸಮರಕ್ಕೆ ಕಿಚ್ಚು ಹಚ್ಚಿ ಬಚಾವಾಗಲು ಯತ್ನ

ಭಾಷಾ ಸಮರಕ್ಕೆ ಕಿಚ್ಚು ಹಚ್ಚಿ ಬಚಾವಾಗಬಹುದು ಎಂದು ತಿಳಿದುಕೊಂಡಿರುವ ಅನ್ಯ ಭಾಷಿಕ ಕಿಡಿಗೇಡಿಗಳು, ಅದೇ ವಿಷಯಕ್ಕೆ ಕಿಡಿ ಹಚ್ಚುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸ. ಬೇರೆ ಯಾವ ನಗರದಲ್ಲೂ ಪ್ರದರ್ಶಿಸಲು ಆಗದ ದುರಂಹಕಾರ ಬೆಂಗಳೂರಿನಲ್ಲಿ ತೋರಿಸಲು ಹೇಗೆ ಸಾಧ್ಯವಾಗುತ್ತಿದೆ ಎಂಬುದೇ ನಮ್ಮ ಪ್ರಶ್ನೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು.

ಭಾಷಾ ರಾಜಕೀಯ

ಕನ್ನಡಿಗರ ಮೇಲಿನ ಈ ರೀತಿಯ ದಾಳಿಗಳು ಭಾಷಾ ಗುರುತಿನ ರಾಜಕೀಯದ ಒಂದು ಭಾಗವಾಗಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸುವ ಪ್ರವೃತ್ತಿಯು ಕರ್ನಾಟಕದಲ್ಲಿ ಹೆಚ್ಚುತ್ತಿದೆ ಎಂಬ ಕರುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಪರ ಸಂಘಟನೆಗಳು, ಕನ್ನಡ ಭಾಷೆಗೆ ಗೌರವ ಮತ್ತು ಸ್ಥಳೀಯರಿಗೆ ಸಮಾನ ಅವಕಾಶಗಳಿಗಾಗಿ ಹೋರಾಟ ಆರಂಭಿಸಿವೆ. ಭಾಷಾ ಆಧಾರದ ಮೇಲಿನ ಅನಗತ್ಯ ಆರೋಪಗಳನ್ನು ನಿಯಂತ್ರಿಸಲು ಕಾನೂನಾತ್ಮಕ ಕ್ರಮಗಳ ಅಗತ್ಯವಿದೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

Read More
Next Story