ಬೀದರ್ ಗುತ್ತಿಗೆದಾರ ಆತ್ಮಹತ್ಯೆ | ಸರ್ಕಾರದ ವಿರುದ್ಧ ವಿಪಕ್ಷ ಆಕ್ರೋಶ, ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಡ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಬಳಿ ಗುರುವಾರ ಗುತ್ತಿಗೆದಾರ ಸಚಿನ್ ಮಾನಪ್ಪ ಪಂಚಾಲ್(26) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹಾಗೂ ಇತರರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಲೆ ನೋವಾಗಿ ಪರಿಣಮಿಸಿದೆ. ಇದೇ ಪ್ರಕರಣ ವಿಪಕ್ಷಗಳ ಬತ್ತಳಿಕೆಗೆ ಹೊಸ ಅಸ್ತ್ರ ಕೊಟ್ಟಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣ ಮತ್ತು ಶೇ.40 ಕಮಿಷನ್ ಆರೋಪವನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಕೂಡ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಹಾದಿ ತುಳಿದಿದ್ದಾರೆ. ರಾಜ್ಯ ಸರ್ಕಾರ ಆತ್ಮಹತ್ಯೆ ಭಾಗ್ಯ ಕಲ್ಪಿಸಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಗುತ್ತಿಗೆದಾರ ಆತ್ಮಹತ್ಯೆಗೂ ಮುನ್ನ ಬರೆದಿರುವ 7 ಪುಟಗಳ ಡೆತ್‌ನೋಟ್ ʼದ ಫೆಡರಲ್ ಕರ್ನಾಟಕʼಕ್ಕೆ ಲಭ್ಯವಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಗುತ್ತಿಗೆದಾರ ಸಚಿನ್ ಮಾನಪ್ಪ ಪಂಚಾಲ್(26) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿನ್ ಬರೆದಿರುವ ಡೆತ್ ನೋಟ್‌ನಲ್ಲಿ ಎಂಟು ಜನರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?
"ಕಲಬುರಗಿ ಕಾಂಗ್ರೆಸ್ ಮುಖಂಡ ರಾಜು ಕಪನೂರ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಂದಕುಮಾರ ನಾಗಭುಜಂಗೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋರಖನಾಥ ಸಜ್ಜನ್, ಮಹಾರಾಷ್ಟ್ರದ ಪ್ರತಾಪ್ ಧೀರ ಪಾಟೀಲ, ಸೊಲ್ಲಾಪುರದ ಕಾರ್ಪೊರೇಟರ್ ಮನೋಜ್ ಸೆಜವಾಲ್, ಬೆಂಗಳೂರಿನ ಯುನಿಟಿ ಇನ್ಫಾಬಿಲ್ಡ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಎಚ್.ಎಂ., ಯೋಜನಾ ವ್ಯವಸ್ಥಾಪಕ ವಿನಯ್ ಟಿ.ಪಿ., ಕಲಬುರಗಿಯ ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಪಾಟೀಲ ಹಣಕ್ಕೆ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಉಲ್ಲೇಖಿಸಲಾಗಿದೆ.
"ನಾನು ಬೆಂಗಳೂರಿನ ಯುನಿಟಿ ಇನ್ಫಾ ಬಿಲ್ಡ್ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಎರಡು ವರ್ಷ ಕೆಲಸ ಮಾಡಿದ್ದೆ. ಈ ವೇಳೆ ದುಬಲಗುಂಡಿಯ ಸತೀಶ್ ರತ್ನಾಕರ್ ಎಂಬುವರಿಂದ ರಾಜು ಕಪನೂರ ಪರಿಚವಾಯಿತು. ವಿಕಾಸ್ ಎಚ್.ಎಂ. ಅವರು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಲ್ಲಿ ಟೆಂಡರ್ ಹಾಕಿಸಿದ್ದರು. ಸುಮಾರು ₹12 ಕೋಟಿ ಟೆಂಡರ್ ಅದಾಗಿತ್ತು. ಟೆಂಡರ್ ಮಾಡಿಸಿಕೊಡಲು ರಾಜು ಕಪನೂರ ಶೇ.5 ರಂತೆ 60 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು."
"ಪ್ರಿಯಾಂಕ್ ಖರ್ಗೆ ನಾನು ಹೇಳಿದ ಮಾತು ದಾಟುವುದಿಲ್ಲ ಎಂದು ಹೇಳಿಕೊಂಡಿದ್ದರು. ಸುಮಾರು ಐದಾರು ಸಲ ಬೆಂಗಳೂರಿಗೆ ಹೋಗಿ ಪ್ರಿಯಾಂಕ್ ಖರ್ಗೆ ಅವರನ್ನೂ ಭೇಟಿಯಾಗಿದ್ದೆವು. ನನ್ನ ಎದುರಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಚೀಫ್ ಎಂಜಿನಿಯರ್ ಇಜಾಜ್ ಹುಸೇನ್ ಅವರಿಗೆ ಕರೆ ಮಾಡಿ ಟೆಂಡರ್ ಮಾಡಿಕೊಡುವಂತೆ ಹೇಳಿದ್ದರು."
"ಮುಂಗಡ ಹಣವಾಗಿ 10 ಲಕ್ಷ ರೂ. ನೀಡಿದ್ದೆ. ಆದರೆ, ಟೆಂಡರ್ ನಮಗೆ ಆಗಿರಲಿಲ್ಲ. ಈ ಕುರಿತು ವಿಚಾರಿಸಿದಾಗ ಬೇರೆ ಟೆಂಡರ್ ಕೊಡಿಸುವುದಾಗಿ ಹೇಳಿದ್ದರು. ಆನಂತರ 15 ಕೋಟಿಯ ಟೆಂಡರ್ ಹಾಕಿಸಿದ್ದರು. ಅದು ಕೂಡ ನಮಗೆ ಆಗಲಿಲ್ಲ. ಬೀದರ್ ಹಾಗೂ ಕಲಬುರಗಿ ಜಿಲ್ಲಾ ಪಂಚಾಯ್ತಿಯಲ್ಲಿದ್ದ ಕಂಪನಿಯ 2 ಕೋಟಿ ಮೊತ್ತದ ಬಿಲ್ ಮಂಜೂರು ಮಾಡಿಸಲು ಕೋರಿದೆವು. ಅದರಂತೆ ಸಚಿವರ ಮೂಲಕ ಒತ್ತಡ ತಂದು ಬಿಲ್ ಮಂಜೂರು ಮಾಡಿಸಿದ್ದರು. ಇದಕ್ಕೂ 10 ಲಕ್ಷ ನೀಡುವಂತೆ ಒತ್ತಾಯಿಸಿದರು. ಆಗ ನಾನೇ ನನ್ನ ಸ್ವಂತ ಹಣದಲ್ಲಿ 5 ಲಕ್ಷ ರೂ.ಗಳನ್ನು ರಾಜು ಕಪನೂರ ಅವರ ಪತ್ನಿ ಸಂತೋಷಿ ಅವರ ಎಸ್‌ಬಿಐ ಖಾತೆಗೆ ಜಮೆ ಮಾಡಿದ್ದೆ" ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
"ಕಲಬುರಗಿಯಲ್ಲಿ ಝೂ ಅಥಾರಿಟಿ ಆಫ್ ಕರ್ನಾಟಕದಲ್ಲಿ ಟೆಂಡರ್ ಹಾಕಿದ್ದೆ. ಕೆಲ ದಿನಗಳ ಬಳಿಕ ಡಿಸಿಎಫ್ ಸಮಿತ್ ಪಾಟೀಲ ಅವರನ್ನು ವಿಚಾರಿಸಿದಾಗ ಟೆಂಡರ್ ಕ್ಯಾನ್ಸರ್ ಆಗಿರುವುದಾಗಿ ತಿಳಿಸಿದ್ದರು. ಆದರೆ, ರಾಜು ಕಪನೂರ ಈ ವಿಷಯ ತಿಳಿಸಿರಲಿಲ್ಲ. ಟೆಂಡರ್ ಇಎಂಡಿ ಮೊತ್ತವು ಕಂಪನಿ ಖಾತೆಗೆ ಹೋಗಿತ್ತು. ಯೂನಿಟಿ ಇನ್ಫಾ ಬಿಲ್ಡ್ ವ್ಯವಸ್ಥಾಪಕ ನಿರ್ದೇಶಕರ ವಿಕಾಸ್ ಅವರಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಬೆಂಗಳೂರಿಗೆ ಬಂದು ವಿಚಾರಣೆ ನಡೆಸಿದಾಗ ಕಂಪನಿಯವರು ಟೆಂಡರ್ ಹಾಕದೇ ಮೋಸ ಮಾಡಿದ್ದ ಸಂಗತಿ ಬೆಳಕಿಗೆ ಬಂತು. ಇದಕ್ಕೆ ನನ್ನನ್ನೇ ಹೊಣೆ ಮಾಡಿದ್ದು, ರಾಜು ಕಪನೂರ ಹಾಗೂ ಅವರ ತಂಡ ನನ್ನ ಕೊಲೆಗೆ ಸಂಚು ರೂಪಿಸಿತು. ನಂದಕುಮಾರ್ ನಾಗಭುಂಜಗೆ, ಗೋರಕನಾಥ್ ಸಜ್ಜನ್, ರಾಮನಗೌಡ ಪಾಟೀಲ, ಪ್ರತಾಪ್ ಧೀರ್ ಪಾಟೀಲ್, , ಮನೋಜ್ ಸಜವಾಲ್ ನೇತೃತ್ವದ ತಂಡ ನನ್ನ ಕೊಲೆಗೆ ಸಂಚು ಮಾಡಿತ್ತು. ಇದಕ್ಕೆ ಕಲಬುರಗಿಯ ಹಿಂದೂಪರ ಸಂಘಟನೆ ನಾಯಕ ಆಂದೋಲ್ ಸ್ವಾಮಿ, ಬಿಜೆಪಿ ಮುಖಂಡ ಚಂದುಪಾಟೀಲ, ಮಣಿಕಂಠ ರಾಥೋಡ್ ಹಾಗೂ ಶಾಸಕ ಬಸವರಾಜ ಮತಿಮುಡ್ ಬೆಂಬಲ ನೀಡಿದ್ದರು. ಇದರಿಂದ ಭೀತನಾಗಿ ನಾನು ತಲೆ ಮರೆಸಿಕೊಂಡಿದ್ದೆ. ನನಗಾಗಿ ರಾಜು ಕಪನೂರ ಹಾಗೂ ಅವರ ತಂಡ ನಮ್ಮ ಕುಟುಂಬದವರಿಗೆ ಚಿತ್ರ ಹಿಂಸೆ ನೀಡುತ್ತಿದೆ. ನನ್ನ ಸಾವಿಗೆ ಈ ಎಲ್ಲರೂ ಕಾರಣರಾಗಿದ್ದು, ಸರ್ಕಾರ ಕಠಿಣ ಕ್ರಮ ಜರುಗಿಸಬೇಕು" ಎಂದು ಡೆತ್‌ನೋಟ್‌ನಲ್ಲಿ ಹೇಳಲಾಗಿದೆ.
ಆರೋಪ ನಿರಾಕರಿಸಿದ ರಾಜು ಕಪನೂರ
ಗುತ್ತಿಗೆದಾರರ ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ರವಿ ಕಪನೂರ ಅವರ, "ಸಚಿನ್ ಮಾನಪ್ಪ ಪಾಂಚಾಳ್ ಒಂದು ವರ್ಷದಿಂದ ನನಗೆ ಪರಿಚಯವಿದ್ದು, ತಾನು ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದು, ಟೆಂಡರ್ ಕೊಡಿಸುವಂತೆ ಕೇಳಿದ್ದ. ನಾನೇ ಏರ್‌ಪೋರ್ಟ್ ಟೆಂಡರ್ ಕೊಡಿಸಿದ್ದೆ. ಕೆಐಎಡಿಬಿ ಟೆಂಡರ್‌ಗೆ ಹಣ ಬೇಕೆಂದು ಕೇಳಿದ್ದರು. ನಾನು ಸಚಿನ್ ಖಾತೆಗೆ 65 ಲಕ್ಷ ರೂ. ಹಾಕಿದ್ದೆ. ಬಳಿಕ ₹15 ಲಕ್ಷ ನಗದು ಕೊಟ್ಟಿದ್ದೆ. ಆದರೆ ಆರೇಳು ತಿಂಗಳಾದರೂ ಟೆಂಡರ್ ಪಡೆಯದೇ ಹಣ ನೀಡಲು ಸತಾಯಿಸಿದ್ದರು. ಈ ಸಂಬಂಧ ಸಚಿನ್ ಅವರನ್ನು ಪ್ರಶ್ನಿಸಿದಾಗ ಹಣ ವಾಪಸ್ ಕೊಡುತ್ತೇನೆ ಎಂದಿದ್ದರು. ಸಚಿನ್ ಮನೆಗೆ ಹೋಗಿ ವಿಷಯ ತಿಳಿಸಿದಾಗ ಹಣ ಹಿಂತಿರುಗಿಸಲು ಕಾಲಾವಕಾಶ ಕೇಳಿದ್ದರು" ಎಂದು ಹೇಳಿದ್ದಾರೆ.
"ಸಚಿನ್‌ಗೆ ನಾನು ಯಾವುದೇ ಕಿರುಕುಳ ನೀಡಿಲ್ಲ. ಬಡ್ಡಿ ವ್ಯವಹಾರವನ್ನೂ ಮಾಡಿಲ್ಲ. ಪರವಾನಗಿ ಇರುವ ಕಾರಣಕ್ಕೆ ಆತನೊಂದಿಗೆ ವ್ಯವಹಾರಕ್ಕೆ ಮುಂದಾಗಿದ್ದೆ. ಈ ಬಗ್ಗೆ ತನಿಖೆ ನಡೆಯಲಿ" ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಕಾಂಗ್ರೆಸ್ ಸರ್ಕಾರದಲ್ಲಿ ಕೆಲವು ಮಂತ್ರಿಗಳ ಬಲಗೈ ಬಂಟರು ಹಾಗೂ ಆಪ್ತ ಸಹಾಯಕರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೀಡಿದಂತಿದೆ. ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಕಿರುಕುಳಕ್ಕೆ ತಹಶೀಲ್ದಾರ್ ಕಚೇರಿಯ ಎಸ್ಡಿಎ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ವಿಧಾನ ಮಂಡಲದ ಸುವರ್ಣ ಸೌಧಕ್ಕೆ ನುಗ್ಗಿ ಶಾಸಕರಾದ ಸಿಟಿ ರವಿ ಅವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದರು. ಇಂದು ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಾದ ರಾಜು ಕಪನೂರ ಕಿರುಕುಳ ಹಾಗೂ ಬೆದರಿಕೆಯಿಂದ ಬೀದರ್ ಗುತ್ತಿಗೆದಾರ ಸಚಿನ್ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರವೇ ಇದಕ್ಕೆ ನೇರ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಆಪ್ತನ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಡಾ ಅಶ್ವತ್ಥ ನಾರಾಯಣ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರು, ಗುತ್ತಿಗೆದಾರರ ಹಾಗೂ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಗುತ್ತಿಗೆದಾರ ಸಚಿನ್ ಸಾವಿಗೆ ಪ್ರಿಯಾಂಕ್ ಖರ್ಗೆ ಆಪ್ತನೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಕೂಡ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ತಾನೊಬ್ಬನೇ ಹರಿಶ್ಚಂದ್ರ ಎಂದು ಬೀಗುವ ಪ್ರಿಯಾಂಕ್ ಖರ್ಗೆ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನದಿಂದ ಕೆಳಗಿಳಿಯಲಿ ಎಂದು ಹೇಳಿದ್ದಾರೆ.
ಗುತ್ತಿಗೆದಾರನ ಆತ್ಮಹತ್ಯೆ ಅರಾಜಕತೆಗೆ ಸಾಕ್ಷಿ: ಎಚ್‌ಡಿಕೆ
ಬೀದರ್‌ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯದಲ್ಲಿ ಅರಾಜಕತೆಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಪ್ರತಿಯೊಂದು ವಿಚಾರದಲ್ಲಿ ರಾಜ್ಯದಲ್ಲಿ ನನ್ನನ್ನು ಬಿಟ್ಟರೆ ಸಚ್ಚಾರಿತ್ರ್ಯ ಇರುವ ವ್ಯಕ್ತಿ ಬೇರೆ ಇಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೋಡಿದರೆ ಅವರ ಆಪ್ತ ಸಹಾಯಕನ ಹೆಸರೇ ಬಂದಿದೆ. ಈ ಸರ್ಕಾರ ಈಗಾಗಲೇ ಗುತ್ತಿಗೆದಾರರ ವಿಷಯದಲ್ಲಿ ಚೆಲ್ಲಾಟ ಆಡಿದೆ. ಈಗಲೂ ಅದನ್ನೇ ಮುಂದುವರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೆಲ ತಿಂಗಳುಗಳ ಹಿಂದಷ್ಟೇ ಸಂತೇಬೆನ್ನೂರು ಗುತ್ತಿಗೆದಾರ ಪಿ.ಎಸ್.ಗೌಡರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ವಾಲ್ಮೀಕಿ ಹಗರಣ ಸಂಬಂಧ ಅಕೌಂಟ್ಸ್ ಸೂಪರಿಂಟೆಂಡೆಂಟ್ ಪಿ.ಚಂದ್ರಶೇಖರನ್, ಭೋವಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಉದ್ಯಮಿ ಜೀವಾ ಕೂಡ ಆತ್ಮಹತ್ಯೆ ಮಾಡಿಕೊಂಡು, ಅಧಿಕಾರಿಗಳ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದರು.