ಪೊಲೀಸ್ ಅಧಿಕಾರಿ ವಿರುದ್ಧ ಅವಾಚ್ಯ ಪದ ಬಳಸಿದ ವಿಪಕ್ಷ ನಾಯಕ: ಕೈ-ಕಮಲ ನಾಯಕರ ಮಧ್ಯೆ ವಾಕ್ಸಮರ
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ನಿಂದಿಸಿದರು ಎಂಬ ಘಟನೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮಕ್ಕೆ ಕಾರಣವಾಗಿದೆ.
ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಪೊಲೀಸರು ತಡೆಯಲು ಮುಂದಾದಾಗ ಆರ್.ಅಶೋಕ್ ತಾಳ್ಮೆ ಕಳೆದುಕೊಂಡು ʼಏಯ್ ನನ್ನನ್ನು ತಳ್ಳೋದು ಮಾಡಿದ್ರೆ ಹುಷಾರ್. ನಾನು ಅಪೋಜಿಷನ್ ಲೀಡರ್. ಪ್ರತಿಭಟನೆ ಮಾಡಬಾರದು ಅಂದರೆ ಬರೆದುಕೊಡೊ, ಏಯ್ ಹೊಡಿತಿಯಾ ಹೊಡಿ, ಕೊಡ್ರಿ ಲಾಟಿನಾ, ಏಯ್ ನಾಟಕ ಆಡ್ತಾ ಇದಿಯಾʼ ಎಂದು ಏರುದನಿಯಲ್ಲಿ ನಿಂದಿಸಿದ್ದಾರೆ.
ಅಲ್ಲದೇ ʼಏಯ್ ಇದೇ ಸರ್ಕಾರ ಇರಲ್ಲ ಹುಷಾರ್. ನಿಮ್ಮ ಹೆಸರೆನ್ನೆಲ್ಲಾ ನೋಟ್ ಮಾಡ್ಕೋತಿನಿ ಎಂದು ಬೆದರಿಸಿ ಅಧಿಕಾರಿಯನ್ನು ದೂಡಿದ್ದಾರೆ. ಈ ವೇಳೆ ಅಧಿಕಾರಿ ʼಸಾರ್ ಇಲ್ಲಿ ಪ್ರತಿಭಟನೆ ಮಾಡೋದು ಬೇಡ, ಬೇಕಿದ್ದರೆ ಬರೆದುಕೊಡ್ತೀನಿʼ ಎಂದು ಮನವಿ ಮಾಡಿದರೂ ಏರುದನಿಯಲ್ಲಿ ನಿಂದಿಸಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಪ್ರಯಾಣಿಕರಿಗೆ ಹೂ ನೀಡಿ ಪ್ರತಿಭಟನೆ
ಬಸ್ ಪ್ರಯಾಣ ದರವನ್ನು ಶೇ 15 ರಷ್ಟು ಏರಿಕೆ ಮಾಡಿರುವ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ ನಾಯಕರು ಪ್ರಯಾಣಿಕರಿಗೆ ಹೂವು ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ʼಬೆಲೆ ಏರಿಕೆ ಮಾಡಿರುವ ಸಿದ್ದರಾಮಯ್ಯ ಪರವಾಗಿ ನಾವು ಕ್ಷಮೆ ಕೇಳುತ್ತೇವೆ. 2025 ರಲ್ಲಿ ಎಲ್ಲಾ ತೆರಿಗೆ ಜಾಸ್ತಿ ಮಾಡ್ತೀವಿ, ನಿಮ್ಮ ಕಾಲಿಗೆ ಬೀಳ್ತೀವಿ, ಕೈಮುಗಿತೀವಿ ಕ್ಷಮಿಸಿ ಬಡಿ ಎಂಬುದು ಸಿದ್ದರಾಮಯ್ಯ ಸರ್ಕಾರ ಹೊಸ ಸ್ಲೋಗನ್ʼ ಎಂದು ಲೇವಡಿ ಮಾಡಿದರು.
ಇದೇ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಭಾವಿಸಿ ನೀವು ಮತ ನೀಡಿದ್ದೀರಿ, ಆದರೆ, ಮಾತಿಗೆ ತಪ್ಪಿದ ಸಿದ್ದರಾಮಯ್ಯ ಸರ್ಕಾರ ಹೊಸ ವರ್ಷದಂದೇ ಟಿಕೆಟ್ ಪ್ರಯಾಣ ದರ ಏರಿಕೆ ಮಾಡಿದೆ. ಹಾಗಾಗಿ ನಾವು ಸಿದ್ದರಾಮಯ್ಯ ಸರ್ಕಾರದ ಪರ ಕ್ಷಮೆ ಕೇಳುತ್ತೇವೆ ಎಂದು ಪ್ರಯಾಣಿಕರಿಗೆ ಹೇಳಿದರು.
ಅವಾಚ್ಯ ಶಬ್ದ ಬಳಕೆ; ಪರಸ್ಪರ ವಾಗ್ದಾಳಿ
ಪೊಲೀಸ್ ಅಧಿಕಾರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವಾಚ್ಯ ಪದ ಬಳಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ತನ್ನ ʼಎಕ್ಸ್ʼ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದೆ. ವಿಪಕ್ಷ ನಾಯಕನಾಗಿಬಿಟ್ಟರೆ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಬಹುದೇ, ಅವರ , ತಾಯಿಯ ಬಗ್ಗೆ ಪದ ಬಳಕೆ ಎಷ್ಟು ಸರಿ. ಗೂಂಡಾಗಿರಿ ವಿಪಕ್ಷ ನಾಯಕನ ಕೆಲಸವೇ, ಅವರ ನಾಲಿಗೆಯೇ ಸಂಸ್ಕಾರ ಹೇಳುತ್ತದೆ. ಸಿ.ಟಿ.ರವಿ ಬಳಿಕ ನಿಮ್ಮ ಸರದಿಯೇ, ನೀವು ವಿಪಕ್ಷ ನಾಯಕನಾಗಿ ಉಳಿಯಲು ಅರ್ಹರಲ್ಲ ಎಂಬುದನ್ನು ನಿಮ್ಮ ನಡತೆಯೇ ಹೇಳುತ್ತದೆ. ಸಂಸ್ಕಾರ ಹಾಗೂ ಸಂಸ್ಕೃತಿ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ನಿಮ್ಮ ನಾಯಕರ ಹೊಲಸು ನಾಲಿಗೆಯನ್ನು ಯಾವ ಫಿನಾಯಿಲ್‌ನಿಂದ ತೊಳೆಯಬೇಕು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಡಿಯೋಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ ಮಾಡಿ, ಎಡಿಟ್ ಮಾಡಿ ವಿರೋಧ ಪಕ್ಷಗಳ ತೇಜೋವಧೆ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಕರಗತವಾಗಿದೆ. ಕಾಮಾಲೆ ಕಣ್ಣಿನವನಿಗೆ ಜಗತ್ತೆಲ್ಲಾ ಹಳದಿ ಎಂಬಂತೆ ಟೂಲ್‌ಕಿಟ್‌ನಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್ ಪಕ್ಷದವರಿಗೆ ಎಲ್ಲದರಲ್ಲೂ ಟೂಲ್ ಕಿಟ್ ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.