
ಉಪ ಚುನಾವಣೆ ಸೋಲು | ಹಿರಿಯ ಶಾಸಕರ ಸಭೆ ಕರೆದ ವಿಪಕ್ಷ ನಾಯಕ ಅಶೋಕ್
ಉಪ ಚುನಾವಣೆ ಸೋಲಿನ ಬಳಿಕ ಬಿಜೆಪಿ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದಾರೆ.
ಬೆಳಗಾವಿ ಅಧಿವೇಶನ ಹಾಗೂ ವಕ್ಫ್ ಸೇರಿದಂತೆ ವಿವಿಧ ವಿಷಯಗಳನ್ನು ಇನ್ನಷ್ಟು ಪ್ರಬಲವಾಗಿ ಜನರ ಮುಂದಿಡುವ ನಿಟ್ಟಿನಲ್ಲಿ ಹೋರಾಟ ಕಟ್ಟುವ ಬಗ್ಗೆ ಚರ್ಚಿಸಲು ಮಂಗಳವಾರ(ನ.26) ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ರಾಜ್ಯದ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಸೇರಿದಂತೆ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲೇ ತಮ್ಮ ಪಕ್ಷ ಮತ್ತು ಎನ್ಡಿಎ ಅಂಗಪಕ್ಷ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಪಡೆಯಲಿದ್ದು, ಮೂರೂ ಕಡೆ ತಾವೇ ಜಯಭೇರಿ ಬಾರಿಸುವುದು ಎಂಬ ಅತ್ಯುತ್ಸಾಹದಲ್ಲಿ ಬಿಜೆಪಿ ನಾಯಕರಿದ್ದರು. ಸಮೀಕ್ಷೆಗಳು ಕೂಡ ಅವರ ಪರವಾಗಿಯೇ ಬಂದಿದ್ದವು. ಆದರೆ, ಇದೀಗ ಫಲಿತಾಂಶ ಪಕ್ಷದ ರಾಜ್ಯ ನಾಯಕರ ಆ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿದೆ.
ಆ ಹಿನ್ನೆಲೆಯಲ್ಲಿ ಪಕ್ಷದ ಮುಂದಿನ ಸವಾಲುಗಳ ಬಗ್ಗೆ ಚರ್ಚಿಸಲು ಮತ್ತು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋರಾಟ ರೂಪಿಸುವ ಉದ್ದೇಶದಿಂದ ಆರ್ ಅಶೋಕ್ ಈ ಸಭೆ ಕರೆದಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ತಮಗೆ ನೈಜ ಬೆಂಬಲ ನೀಡಿಲ್ಲ ಎಂಬ ಅಸಮಾಧಾನ ಜೆಡಿಎಸ್ ನಾಯಕರಲ್ಲಿದೆ. ಆ ಹಿನ್ನೆಲೆಯಲ್ಲಿಯೂ ಪ್ರಮುಖವಾಗಿ ರಾಮನಗರ ಸೇರಿದಂತೆ ಹಳೇ ಮೈಸೂರು ಭಾಗದ ಹಿರಿಯ ನಾಯಕರೊಂದಿಗೆ ಅಶೋಕ್ ಚರ್ಚಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಡಿಸೆಂಬರ್ 7 ಕ್ಕೆ ಕೋರ್ ಕಮಿಟಿ
ಈ ನಡುವೆ, ಪಕ್ಷ ಮತ್ತು ತಮ್ಮ ಮೈತ್ರಿಕೂಟ ಉಪ ಚುನಾವಣೆಯಲ್ಲಿ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಸೋಲಿನ ಪರಾಮರ್ಶೆ ನಡೆಸಲು ಡಿಸೆಂಬರ್ 7 ರಂದು ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದೆ.
ಕೋರ್ ಕಮಿಟಿ ಸಭೆಯಲ್ಲಿ ಪಕ್ಷದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಅದರಿಂದಾಗಿ ಪಕ್ಷದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಕೂಡ ಅಶೋಕ್ ಅವರು ಕರೆದಿರುವ ಹಿರಿಯ ಶಾಸಕರ ಸಭೆ ಕುತೂಹಲ ಮೂಡಿಸಿದೆ.