
ಕಂದಾಯ ಸಚಿವ ಕೃಷ್ಣಬೈರೇಗೌಡ
ಶೈಕ್ಷಣಿಕ ಉದ್ದೇಶಕ್ಕಾಗಿ ಭೂಮಿ ಖರೀದಿಗೆ ಮಿತಿ; ಡಿಸಿಗಳಿಗೆ ಅನುಮೋದನೆ ಅಧಿಕಾರ
ಶಿಕ್ಷಣ ಸಂಸ್ಥೆ ಕಟ್ಟುವ ಉದ್ದೇಶಕ್ಕೆ ಖರೀದಿಸುವ ಕೃಷಿ ಭೂಮಿಯನ್ನು ಶಿಕ್ಷಣ ಸಂಸ್ಥೆ ಬದಲು ಬೇರೆ ಉದ್ದೇಶಕ್ಕೂ ಬದಲಾವಣೆ ಮಾಡಿ ಕೊಡಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶಿಕ್ಷಣ ಸಂಸ್ಥೆ ಅಥವಾ ಇತರೆ ಉದ್ದೇಶಕ್ಕೆ 4 ಹೆಕ್ಟೇರ್‌ವರೆಗೆ ಕೃಷಿ ಭೂಮಿ ಖರೀದಿಸಲು ʼಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರೆ ಕಾನೂನು ತಿದ್ದುಪಡಿಗಳ ವಿಧೇಯಕʼದಲ್ಲಿ ಮಿತಿ ಹೇರಲಾಗಿದೆ. ಈ ಸಂಬಂಧ ಅನುಮೋದನೆ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ʼಕರ್ನಾಟಕ ಭೂಸುಧಾರಣೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕʼಕ್ಕೆ ಅಂಗೀಕಾರ ಪಡೆದ ಬಳಿಕ ಮಾತನಾಡಿದರು.
ಕೃಷಿ ಭೂಮಿ ಖರೀದಿ ಸಂಬಂಧ ವಿಧೇಯಕದಲ್ಲಿ ಕೆಲವು ಕಾನೂನುಗಳನ್ನು ಸರಳೀಕರಣ ಮಾಡಲಾಗಿದೆ. ಶಿಕ್ಷಣ ಸಂಸ್ಥೆ ಕಟ್ಟುವ ಉದ್ದೇಶಕ್ಕೆ ಖರೀದಿಸಿದ ಕೃಷಿ ಭೂಮಿಯನ್ನು ಶಿಕ್ಷಣ ಸಂಸ್ಥೆ ಬದಲು ಬೇರೆ ಉದ್ದೇಶಕ್ಕೂ ಬದಲಾವಣೆ ಮಾಡಿ ಕೊಡಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕೈಗಾರಿಕೆ ಮಾಡಲು ಎರಡು ಎಕರೆ ಕೃಷಿ ಭೂಮಿಯ ಪರಿವರ್ತನೆಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.
ನವೀಕರಿಸಬಹುದಾದ ಇಂಧನಗಳ ಉತ್ಪಾದನೆಗಾಗಿ ಕೃಷಿ ಭೂಮಿಯ ಸ್ವಯಂ ಭೂಪರಿವರ್ತನೆ ದಾಖಲೆ ವಿತರಿಸಲು ವಿಧೇಯಕದಲ್ಲಿ ಅವಕಾಶ ಕೊಡಲಾಗಿದೆ ಎಂದರು.
ಕರ್ನಾಟಕ ನೋಂದಣಿ ತಿದ್ದುಪಡಿ-2025 ವಿಧೇಯಕವು ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಾಗರಿಕ ಸ್ನೇಹಿ ಸುಧಾರಣೆಗಳಿಗಾಗಿ ತರಲಾಗಿದೆ. ಸ್ವತ್ತಿನ ನೋಂದಣಿಗಳಲ್ಲಿ ಇನ್ನಷ್ಟು ಸರಳೀಕರಣ ಮಾಡಲಾಗಿದೆ. ಕಾನೂನು ಬಾಹಿರ ನೋಂದಣಿ, ಪೇಪರ್ ದಾಖಲೆಗಳಿಗೆ ಬ್ರೇಕ್ ಹಾಕಲಾಗಿದ್ದು, ಇ-ಖಾತಾ ನೋಂದಣಿಗೆ ಮಾತ್ರವೇ ಅವಕಾಶ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕೃಷಿ ಭೂಮಿಯನ್ನು ಅನುಮತಿ ಇಲ್ಲದೇ ಅಥವಾ ಭೂಪರಿವರ್ತನೆ ಮಾಡಿಸದೆ ಕೃಷಿಯೇತರ ಉದ್ದೇಶಕ್ಕೆ ಬಳಸಿದರೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಲು ಕೂಡ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.