Operation Sindoor: ಪಹಲ್ಗಾಮ್‌ ದಾಳಿಯಲ್ಲಿ ಹುತಾತ್ಮರ ಕುಟುಂಬಗಳ ಸಂತಸ
x

Operation Sindoor: ಪಹಲ್ಗಾಮ್‌ ದಾಳಿಯಲ್ಲಿ ಹುತಾತ್ಮರ ಕುಟುಂಬಗಳ ಸಂತಸ

ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ʼಆಪರೇಷನ್‌ ಸಿಂಧೂರʼ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭ್ರಮ ವ್ಯಕ್ತವಾಗಿದೆ.


ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ʼಆಪರೇಷನ್‌ ಸಿಂಧೂರʼ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭ್ರಮ ವ್ಯಕ್ತವಾಗಿದೆ.

ಪೆಹಲ್ಗಾಮ್‌ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ 26 ಮಂದಿಯಲ್ಲಿ ಶಿವಮೊಗ್ಗದ ಮಂಜುನಾಥ್‌ ರಾವ್‌ ಕೂಡಾ ಒಬ್ಬರು. ಅವರನ್ನು ಕಳೆದುಕೊಂಡ ಶಿವಮೊಗ್ಗ ನಗರದ ಜನತೆ ಭಯೋತ್ಪಾದಕರನ್ನು ಪೋಷಣೆ ಮಾಡುತ್ತಿರುವ ಪಾಕಿಸ್ತಾನದ ಮೇಲೆ ಉಗ್ರ ಕ್ರಮಕ್ಕೆ ಆಗ್ರಹಿಸಿದ್ದರು. ಅದರಂತೆ ಭಾರತ ಸರ್ಕಾರ ಪಾಕ್‌ ಒಳಗಿನ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮೃತ ಮಂಜುನಾಥ್‌ ಕುಟುಂಬ ಸೇರಿದಂತೆ ಜನಪ್ರತಿನಿಧಿಗಳು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ....

"ದೇಶದ ಯಜಮಾನ ಪ್ರಧಾನಿಯವರು, ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ"... ಇದು ಆಪರೇಷನ್‌ ಸಿಂಧೂರಕ್ಕೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಶಿವಮೊಗ್ಗದ ಮಂಜುನಾಥ್‌ ರಾವ್‌ ತಾಯಿ ಸುಮತಿ ಅವರು ನೀಡಿದ ಪ್ರತಿಕ್ರಿಯೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ವಿದೇಶಗಳಿಗೆ ಸಲೀಸಾಗಿ ಪ್ರವಾಸ ಹೋಗಿ ಬರಲು ಸಾಧ್ಯವಿರುವಾಗ ನಮ್ಮ ದೇಶದಲ್ಲಿಯೇ ನಾವು ಓಡಾಡುವ ಪರಿಸ್ಥಿತಿ ಇಲ್ಲದಿರುವುದು ನೋವಿನ ಸಂಗತಿ. ನಮ್ಮ ಮಗ ಮಲೆನಾಡಿನಿಂದ ಅಲ್ಲಿಗೆ ಹೋಗಿ ಅನಾಥವಾಗಿ ಸಾವಿಗೀಡಾಗಿದ್ದು ಆಘಾತವಾಗಿತ್ತು. ಅದರ ಪ್ರತೀಕಾರವಾಗಿ ದೇಶದ ಸೈನಿಕರು ಪಾಕ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ್ದಾರೆ. ಮೋದಿ ಅವರು ಮಾಡಿರುವ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಇದೇ ಅಭಿಪ್ರಾಯ," ನಮ್ಮ ಕುಟುಂಬದ ಎಲ್ಲರದ್ದಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರೂ ಹಾಗೂ ಮಂಜುನಾಥ್‌ ರಾವ್‌ ಬಂಧುಗಳೂ ಆಗಿರುವ ಡಾ.ರವಿಕಿರಣ್‌ ಮಾತನಾಡಿ, "ಮಂಜುನಾಥ್‌ ಅವರು ಮರಳಿ ಬರಲಾರರು. ಆದರೆ ಅವರನ್ನು ಕೊಂದವರಿಗೆ ತಕ್ಕ ಪ್ರತೀಕಾರ ನೀಡಿದ ಭಾರತ ಸರ್ಕಾರ ಮತ್ತು ಭಾರತೀಯ ಸೇನೆಗೆ ನಮನ ಸಲ್ಲಿಸುತ್ತೇವೆ. ಪಹಲ್ಗಾಮ್‌ನಲ್ಲಿ ನಮ್ಮ ಮುಗ್ದಜನರ ನೆತ್ತರ ಬಿಸಿ ಆರುವ ಮುನ್ನವೇ ದೇಶ ಪ್ರತೀಕಾರ ತೆಗೆದುಕೊಂಡಿದೆ. ಭಯೋತ್ಪಾದಕ ಕೃತ್ಯ ನಡೆಸುವ ಮತ್ತು ಅದಕ್ಕೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸಲಾಗಿದೆ ಇದಕ್ಕಾಗಿ ದೇಶದ ಪ್ರಧಾನಿ ಅವರಿಗೆ ಧನ್ಯವಾದ ಹೇಳುತ್ತೇವೆ," ಎಂದು ಹೇಳುತ್ತೀರಿ.

"ನಮ್ಮ ದೇಶ ಆ ದೇಶದ ನಾಗರೀಕರಿಗೆ ಏನೂ ತೊಂದರೆ ಕೊಡದೆ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. ಬೆಳಗ್ಗೆ ಏಳುವ ಮುನ್ನವೇ ಒಳ್ಳೆಸುದ್ದಿ ಕೇಳಿದ್ದೇವೆ. ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಕೊಂದು ಮಹಿಳೆಯರ ಸಿಂಧೂರ ಅಳಿಸಿದ ಭಯತ್ಪಾದಕರುಇಗೆ ಬುದ್ದಿ ಕಲಿಸಲು ಆಪರೇಷನ್‌ ಸಿಂಧೂರ ಎಂಬ ಹೆಸರಿನಲ್ಲಿ ನಡೆಸಿ ಕಾರ್ಯಾಚರಣೆಯೇ ಒಂದು ರೋಮಾಂಚಕ," ಎಂದು ಪ್ರತಿಕ್ರಿಯಿಸಿದ್ದಾರೆ.

"ನಮ್ಮ ಕಡೆಯ ನಾಗರೀಕರು ಸತ್ತಿದ್ದಾರೆ ಎಂಬುದು ನೋವಿನ ಸಂಗತಿಯಾಗಿದೆ. ನಮ್ಮ ಕಡೆ ಸಾವುನೋವು ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಇಡೀ ದೇಶದ ಜನ ಭಾರತ ಸರ್ಕಾರ ಮತ್ತು ಸೇನೆಯ ಜತೆಗೆ ನಿಲ್ಲಬೇಕು. ಭಯೋತ್ಪಾದನೆ ನಾಶಕ್ಕೆ ನಮ್ಮ ದೇಶದ ನಾಗರೀಕರು ಎಲ್ಲ ರೀತಿಯ ಸಹಕಾರ ನೀಡಬೇಕು. ಭಯೋತ್ಪಾದನೆ ಕೃತ್ಯಕ್ಕೆ ತಕ್ಕ ಪ್ರತೀಕಾರ ನೀಡಿದ ಕೇಂದ್ರ ಸರಕಾರ ಮತ್ತು ಸೇನೆಯನ್ನು ನಮ್ಮ ಕುಟುಂಬದ ಪರವಾಗಿ ಅಭಿನಂದಿಸುತ್ತೇವೆ ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇವೆ," ಎಂದು ಡಾ.ರವಿಕಿರಣ್‌ ಹೇಳಿದರು.

"ನೆರೆಯ ದೇಶದಲ್ಲಿನ ಶಿಬಿರಗಳನ್ನು ಹುಡುಕಿ ಹುಡುಕಿ ಹೊಡೆದಿರುವುದು ದೇಶದ ಸಾಮರ್ಥ್ಯವನ್ನು ತೋರಿಸಿದೆ. ನಮ್ಮ ಮದ್ದು ಗುಂಡುಗಳು ಅಲಂಕಾರಕ್ಕೆ ಇಟ್ಟುಕೊಂಡಿದ್ದಲ್ಲ ಎಂಬುದನ್ನು ಸಾಬೀತು ಮಾಡಲಾಗಿದೆ," ಎಂದು ರವಿಕಿರಣ್‌ ಹೇಳಿದರು.

ಪಟಾಕಿ ಸಿಡಿಸಿ ಸಂಭ್ರಮ

ಭಯೋತ್ಪಾದಕರ ಹುಟ್ಟಡಗಿಸಿದ ಭಾರತೀಯ ಸೇನೆಯ ಸೈನಿಕರಿಗೆ ಆತ್ಮಬಲ ತುಂಬಲು ಇಂದು ರಾಷ್ಟ್ರಭಕ್ತರ ಬಳಗದಿಂದ ನಗರದ ರವೀಂದ್ರ ನಗರ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಯೋಧರ ಆಯಸ್ಸು ವೃದ್ಧಿಗೆ ಮತ್ತು ವಿಜಯಕ್ಕಾಗಿ ಪ್ರಾರ್ಥಿಸಲಾಯಿತು. ಸಿಹಿ ಹಂಚಿ ಪಟಾಕಿಸಿಡಿಸಿ ಸಂಭ್ರಮಿಸಲಾಯಿತು ಈ ಸಂದರ್ಭದಲ್ಲಿ ಬಳಗದ ಪ್ರಮುಖರಾದ ಕೆಇ ಕಾಂತೇಶ್ ಈ ವಿಶ್ವಾಸ್ ಜಾದವ್ ಉಮೇಶ್ ಆರಾಧ್ಯ ಸತ್ಯನಾರಾಯಣ್ , ಕುಬೇರಪ್ಪ ಸಂತೋಷ್‌, ಶ್ರೀಕಾಂತ್ ಬಾಲು ಮೊದಲಾದವರಿದ್ದರು.

ಪಾಕಿಸ್ತಾನಕ್ಕೆ ತಕ್ಕ ಪಾಠ

ಅಮಾಯಕ ೨೬ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ನೆಲೆಗಳನ್ನು ಧ್ವಂಸ ಮಾಡುವುದರ ಮೂಲಕ ಮೋದಿ ಸರ್ಕಾರ ಮತ್ತು ಭಾರತೀಯ ಸೇನೆ ಉಗ್ರಗಾಮಿಗಳಿಗೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಹೇಯಕೃತ್ಯ ನಡೆದ ತಕ್ಷಣ ಪ್ರಧಾನಿ ಮೋದಿ ಹಲವಾರು ಸಭೆಗಳನ್ನು ನಡೆಸಿ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಅನೇಕ ದಿಗ್ಬಂಧನ ಹಾಕಿತ್ತು. ಅಲ್ಲದೇ, ಸರಿಯಾದ ಉತ್ತರ ಕೊಡುತ್ತೇವೆ ಎಂದು ಹಲವು ವೇದಿಕೆಗಳಲ್ಲಿ ಹೇಳಿದ್ದರು. ಈಗ ಆಪರೇಷನ್ ಸಿಂಧೂರದ ಮೂಲಕ ಉಗ್ರರ ತಾಣಗಳನ್ನು ಧ್ವಂಸ ಮಾಡಿ ಪ್ರತ್ಯುತ್ತರ ನೀಡಿದ್ದಾರೆ. ಅದಕ್ಕಾಗಿ ಮೋದಿ ಹಾಗೂ ಸೇನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸೈನಿಕರಿಗೆ ಯಾವುದೇ ಜಾತಿ, ಧರ್ಮವಿಲ್ಲ. ತಮ್ಮ ಸರ್ವಸ್ವವನ್ನೂ ತ್ಯಜಿಸಿ ರಾಷ್ಟ್ರ ರಕ್ಷಣೆಯಲ್ಲಿ ಮುಂದಾಗಿರುವ ಸೈನಿಕರ ಕೈ ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ. ಪಾಕಿಸ್ತಾನದ ಕಳ್ಳ ನಡೆಗೆ ತಕ್ಕ ಪಾಠ ಕಲಿಸಿದ್ದೇವೆ ಎಂದರು.

ತಕ್ಕ ಪ್ರತೀಕಾರ

ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿ ಭಾರತದಲ್ಲಿ ೨೬ ಸಹೋದರಿಯರ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕ ಪಾಠವನ್ನು ಭಾರತೀಯ ಸೇನೆ ಕಲಿಸಿದೆ ಎಂದು ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಹೇಳಿದ್ದಾರೆ.

ಅವರು ಇಂದು ದೇಶದ ಸೈನಿಕರ ಆಯಸ್ಸು ಆರೋಗ್ಯ ವೃದ್ಧಿಗಾಗಿ ಮತ್ತು ಶಕ್ತಿ ತುಂಬಲು ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಮಾತನಾಡಿದರು.

ಭಾರತ ಮಾತೆಯೆ ಸಿಂಧೂರ ಜಮ್ಮು ಮತ್ತು ಕಾಶ್ಮೀರ ಎಂದು ನಾವು ಹೇಳುತ್ತಾ ಬಂದಿದ್ದೆವು. ಈಗ ನಮ್ಮ ತಾಯಂದಿರ ಸಿಂಧೂರ ಅಳಿಸುವವರಿಗೆ ಆಪರೇಷನ್ ಸಿಂಧೂರ್ ಮೂಲಕವೇ ತಕ್ಕ ಉತ್ತರ ನೀಡಲಾಗಿದೆ ಎಂದರು.

ಯೋಧರು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಸಿಗಬೇಕು. ದೇಶದ ಜನ ಶಾಂತಿಯಿಂದ ಬಾಳಬೇಕು. ದೇಶದ ಸೈನ್ಯಕ್ಕೆ ಶಕ್ತಿ ತುಂಬಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದೇವೆ. ಅಖಂಡ ಭಾರತದ ಕನಸು ನನಸಾಗುವ ಸಂದರ್ಭ ಬಂದಿದೆ ಎಂದರು.

ನೂರಾರು ಉಗ್ರರ ಸಂಹಾರ

ದೇಶದ ಹೊರ ಭಾಗದಲ್ಲಿರುವ ಉಗ್ರರಿಗೆ ಬೆಂಬಲ ನೀಡುತ್ತಿರುವ ದೇಶದ ಒಳಗಿನ ಶತ್ರುಗಳಿಗೂ ಈಗ ನಡುಕ ಪ್ರಾರಂಭವಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸ ಮಾಡಿ ನೂರಕ್ಕೂ ಹೆಚ್ಚು ಉಗ್ರರ ಸಂಹಾರ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಆತ್ಮಗಳಿಗೆ ಇದರಿಂದ ಶಾಂತಿ ಸಿಕ್ಕಿದೆ. ರಾಷ್ಟ್ರದ್ರೋಹಿಗಳು ಕೂಡ ಶೀಘ್ರದಲ್ಲೇ ಸೂಕ್ತ ಪಾಠ ಕಲಿಯುತ್ತಾರೆ ಎಂದರು.

ದೇಶದ ಜನ ನಮ್ಮ ಸೈನಿಕರ ಹೋರಾಟಕ್ಕೆ ಬೆಂಬಲಕ್ಕೆ ನಿಂತಿದ್ದಾರೆ. ೨೬ ಜನ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದಾಗಲೇ ಇದು ಪಾಕಿಸ್ತಾನದ ನಾಶಕ್ಕೆ ಮೊದಲ ಹೆಜ್ಜೆ ಎಂದು ನಾನು ಹೇಳಿದ್ದೆ. ಅದು ಈಗ ನಿಜವಾಗಿದೆ. ಯಾವ ಕಾರಣಕ್ಕೂ ಭಯೋತ್ಪಾದನೆಗೆ ನಮ್ಮ ದೇಶದಲ್ಲಿ ಅವಕಾಶವಿಲ್ಲ ಎಂದು ಮೋದಿ ಸರ್ಕಾರ ಆಪರೇಷನ್ ಸಿಂಧೂರದ ಮೂಲಕ ತೋರಿಸಿದೆ ಎಂದರು.

Read More
Next Story