
Operation Sindoor | ಪಾಕ್ ಮೇಲಿನ ದಾಳಿಯ ಶ್ರೇಯಸ್ಸು ಸೇನೆಗೆ ಮಾತ್ರ ಸಲ್ಲಬೇಕು; ಸಿಎಂ ಸಿದ್ದರಾಮಯ್ಯ
ಭಾರತ-ಪಾಕ್ ನಡುವಿನ ಸಂಘರ್ಷ ಗಂಭೀರವಾದ ವಿಷಯ. ಇಂದು ನಡೆಯುವ ಡಿಜಿಎಂಎಗಳ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ʼಆಪರೇಷನ್ ಸಿಂದೂರ್ʼ ಕಾರ್ಯಾಚರಣೆಯ ಶ್ರೇಯಸ್ಸನ್ನು ಯಾವುದೇ ರಾಜಕೀಯ ಪಕ್ಷಗಳು ತೆಗೆದುಕೊಳ್ಳಬಾರದು. ಅದೇನಿದ್ದರೂ ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡೂ ದೇಶಗಳ ಮಧ್ಯೆ ಕದನ ವಿರಾಮ ಘೋಷಣೆಯಾಗಿದೆ. ಇಂದು ಡಿಜಿಎಂಒಗಳ ಸಭೆ ನಡೆಯುತ್ತಿದೆ. ಅಲ್ಲಿ ಯಾವೆಲ್ಲಾ ಚರ್ಚೆಗಳಾಗಲಿವೆಯೋ, ಏನು ತೀರ್ಮಾನ ಆಗಲಿದೆಯೋ ನೋಡಬೇಕು ಎಂದರು.
ಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ್, ಕದನ ವಿರಾಮ ಘೋಷಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ಜೊತೆಗೆ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಬೇಕಿತ್ತು ಎಂದು ಹೇಳಿದರು.
ಭಾರತ-ಪಾಕ್ ನಡುವಿನ ಸಂಘರ್ಷ ಗಂಭೀರವಾದ ವಿಷಯ. ಇಂದು ನಡೆಯುವ ಡಿಜಿಎಂಎಗಳ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕು ಎಂದರು.
ಭಾರತ-ಪಾಕಿಸ್ತಾನದ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕ 1971ರ ಯುದ್ದದ ಕುರಿತು ಇಂದಿರಾ ಗಾಂಧಿ ಅವರ ಭಾಷಣದ ವಿಡಿಯೊ ವೈರಲ್ ಆಗುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂದಿನ ಸಂದರ್ಭವನ್ನು ಇಂದಿಗೆ ಹೋಲಿಕೆ ಮಾಡಿ ಮಾತನಾಡುವುದಿಲ್ಲ. ಆಗಿನ ಪರಿಸ್ಥಿತಿಯೇ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆ ಎಂದು ಹೇಳಿದರು.
ಕದನ ವಿರಾಮ ಘೋಷಣೆಗೆ ಮಧ್ಯಸ್ಥಿಕೆ ವಹಿಸಿದ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಬಗ್ಗೆಯಾಗಲಿ, ಪಾಕಿಸ್ತಾನ ಸೇನೆ ಮಾಡಿದ ಕದನ ವಿರಾಮ ಉಲ್ಲಂಘನೆಯ ಬಗ್ಗೆಯಾಗಲಿ ಮಾತನಾಡುವುದಿಲ್ಲ ಎಂದರು.
ಪಾಕಿಸ್ತಾನಿ ಪ್ರಜೆಗಳ ಗಡಿಪಾರು
ರಾಜ್ಯದಲ್ಲಿ ನೆಲೆಸಿದ್ದ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹೊರಗೆ ಕಳುಹಿಸಿದ್ದೇವೆ. ಮೈಸೂರಿನಲ್ಲಿ ಮೂವರು ಮಕ್ಕಳು ಮಾತ್ರ ಇದ್ದಾರೆ. ಅವರನ್ನು ಹೊರಗೆ ಕಳುಹಿಸಲು ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಪತಿ ಪಾಕಿಸ್ತಾನಿ, ಪತ್ನಿ ಮೈಸೂರು ಮೂಲದವರು. ಮಕ್ಕಳನ್ನು ಗಡಿಯವರೆಗೆ ಕಳುಹಿಸಲಾಗಿತ್ತು. ಆದರೆ, ಅವರನ್ನು ಕರೆದೊಯ್ಯಲು ಯಾರೂ ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ಇದ್ದಾರೆ ಎಂದು ಹೇಳಿದರು.
ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ಮಾಡಲಾಗುವುದು. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮದು ಮಾತ್ರ ಎಂದು ಹೇಳಿದರು.