
ನೀತಿ ಸಂಹಿತೆ ಉಲ್ಲಂಘನೆ | ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ
ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿ ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸುತ್ತಿದ್ದ ಬಗ್ಗೆ ಬಂದ ಖಚಿತ ದೂರಿನ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿ: ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಆರೋಪದ ಮೇಲೆ ರಾಜ್ಯ ಚುನಾವಣಾ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ತಮ್ಮ ಗೃಹಕಚೇರಿಯಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರ ಸಭೆ ನಡೆಸುತ್ತಿದ್ದರು. ಈ ವೇಳೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸಭೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಮನೆಯ ಪಕ್ಕದ ಗೃಹಕಚೇರಿಯಲ್ಲಿ ಮಂಗಳವಾರ 500ಕ್ಕೂ ಹೆಚ್ಚು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದ್ದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪುತ್ರ ಮೃಣಾಲ್ ಹೆಬ್ಬಾಳಕರ್ ಪರ ಪ್ರಚಾರ: ಆರೋಪ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳಕರ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರ ಸಭೆ ಕರೆದಿದ್ದರು ಎನ್ನಲಾಗಿದೆ. ಅಲ್ಲದೇ ಚುನಾವಣೆಯಲ್ಲಿ ತಮ್ಮ ಮಗನಿಗೆ ಮತ ಹಾಕುವಂತೆ ಒತ್ತಡ ಹೇರಿದ್ದರು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.