Kolkata rape-murder: ರಾಜ್ಯಾದ್ಯಂತ ಶನಿವಾರ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್; ಪ್ರತಿಭಟನೆಗೆ ಮುಂದಾದ ವೈದ್ಯರು
x

Kolkata rape-murder: ರಾಜ್ಯಾದ್ಯಂತ ಶನಿವಾರ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್; ಪ್ರತಿಭಟನೆಗೆ ಮುಂದಾದ ವೈದ್ಯರು


ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಖಂಡಿಸಿ ರಾಜ್ಯಾದ್ಯಂತ ಶನಿವಾರ (ಆ.17) ಹೊರರೋಗಿ ಸೇವೆ ವಿಭಾಗ (ಒಪಿಡಿ) ಬಂದ್ ಮಾಡಿ ಪ್ರತಿಭಟನೆ ನಡೆಸಲು ಖಾಸಗಿ ಆಸ್ಪತ್ರೆಗಳ ವೈದ್ಯರು ನಿರ್ಧರಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ʻʻವೈದ್ಯರ ಮುಷ್ಕರದ ಕಾರಣ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವುದು. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಜತೆಗೂ ಮಾತನಾಡಿದ್ದೇನೆ. ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಚರ್ಚಿಸಲು ಹೇಳಿದ್ದೇನೆ. ತೊಂದರೆಯಾಗದಂತೆ ಪ್ರತಿಭಟನೆ ಮಾಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು. ಎಲ್ಲಾ ಅಸೋಸಿಯೇಷನ್ ಸಭೆ ಕರೆದು ಕ್ರಮದ ಬಗ್ಗೆ ಚರ್ಚಿಸುತ್ತೇನೆʼʼ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಖಂಡಿಸಿ ಮೈಸೂರಿನ ಕೆಆರ್ ಆಸ್ಪತ್ರೆ ಮುಂಭಾಗ ಕೈಗೆ ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಕೆಆರ್ ಆಸ್ಪತ್ರೆ ಕಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊಲ್ಕತ್ತಾ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಕಳೆದ ಶುಕ್ರವಾರ (ಆ.9) ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಾತ್ರಿ ಕರ್ತವ್ಯದಲ್ಲಿದ್ದ ಆ ವೈದ್ಯೆ ಸಹೋದ್ಯೋಗಿಗಳ ಜೊತೆ ಊಟ ಮುಗಿಸಿ, ವಿಶ್ರಾಂತಿಗೆಂದು ಸೆಮಿನಾರ್​ ಹಾಲ್‌ಗೆ ಹೋಗಿದ್ದರು. ಏಕಾಂಗಿಯಾಗಿದ್ದ ಅವರ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Read More
Next Story