
ಆನ್‌ಲೈನ್ ಗೇಮಿಂಗ್ ಕಾನೂನು: ಹೈಕೋರ್ಟ್ ಮೆಟ್ಟಿಲೇರಿದ ಎ23 ಕಂಪನಿ
ನಿಷೇಧವನ್ನು ಕೇಂದ್ರ ಸರ್ಕಾರ "ಆನ್‌ಲೈನ್ ಮನಿ ಗೇಮ್‌ಗಳ ಅಪಾಯದಿಂದ ನಾಗರಿಕರನ್ನು ರಕ್ಷಿಸುವ ಮತ್ತು ಇತರ ರೀತಿಯ ಆನ್‌ಲೈನ್ ಆಟಗಳನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಐತಿಹಾಸಿಕ ಕ್ರಮ" ಎಂದು ಹೊಗಳಿದೆ.
ಕೇಂದ್ರ ಸರ್ಕಾರದ ಹೊಸ ಆನ್‌ಲೈನ್ ಮನಿ ಗೇಮಿಂಗ್ ನಿಷೇಧ ಕಾನೂನನ್ನು ಪ್ರಶ್ನಿಸಿ ಗೇಮಿಂಗ್ ಕಂಪನಿ ಎ23 ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ರಮ್ಮಿ ಮತ್ತು ಪೋಕರ್ ಆಟಗಳನ್ನು ನೀಡುವ ಈ ಕಂಪನಿ, ಕೇಂದ್ರ ಸರ್ಕಾರದ ನೂತನ ಕಾನೂನು "ಆನ್‌ಲೈನ್ ಕೌಶಲ್ಯ ಆಟಗಳ ಕಾನೂನುಬದ್ಧ ವ್ಯವಹಾರವನ್ನು ಅಪರಾಧವೆಂದು ಪರಿಗಣಿಸುತ್ತದೆ, ಇದು ವಿವಿಧ ಗೇಮಿಂಗ್ ಕಂಪನಿಗಳನ್ನು ರಾತ್ರೋರಾತ್ರಿ ಮುಚ್ಚಲು ಕಾರಣವಾಗುತ್ತದೆ" ಎಂದು ಹೇಳಿದೆ.
ಹೆಡ್ ಡಿಜಿಟಲ್ ವರ್ಕ್ಸ್ ಎಂಬ ಪೋಷಕ ಕಂಪನಿಯ ಮೂಲಕ ಎ23 ತನ್ನ ಅರ್ಜಿಯಲ್ಲಿ ಈ ಹೊಸ ಕಾನೂನನ್ನು ಕೌಶಲಭರಿತ ಆಟಗಳಿಗೆ ಅನ್ವಯಿಸಿದ್ದು ಅದನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ. 70 ದಶಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಎ23, ತನ್ನನ್ನು "ಭಾರತದ ಪ್ರಮುಖ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್" ಎಂದು ಕರೆದುಕೊಂಡಿದೆ.
ಪ್ರಮೋಷನ್ ಆ್ಯಂಡ್ ರೆಗ್ಯುಲೇಷನ್ ಆಫ್ ಆನ್‌ಲೈನ್ ಗೇಮಿಂಗ್ ಕಾನೂನು
ಆಗಸ್ಟ್ 21 ರಂದು ಸಂಸತ್ತು ಅಂಗೀಕರಿಸಿದ ಈ ಕಾನೂನು ಆನ್‌ಲೈನ್ ಮನಿ ಗೇಮ್‌ಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ನಿಷೇಧಿಸುತ್ತದೆ ಮತ್ತು ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಅಂತಹ ಆಟಗಳಿಗೆ ಹಣ ವರ್ಗಾವಣೆ ಅಥವಾ ಸೌಲಭ್ಯ ನೀಡುವುದನ್ನು ನಿಷೇಧಿಸುತ್ತದೆ.
ಸರ್ಕಾರವು ಇದನ್ನು "ಆನ್‌ಲೈನ್ ಮನಿ ಗೇಮ್‌ಗಳ ಅಪಾಯದಿಂದ ನಾಗರಿಕರನ್ನು ರಕ್ಷಿಸುವ ಮತ್ತು ಇತರ ರೀತಿಯ ಆನ್‌ಲೈನ್ ಆಟಗಳನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಐತಿಹಾಸಿಕ ಕ್ರಮ" ಎಂದು ಹೊಗಳಿದೆ. ಇದು "ತ್ವರಿತ ಸಂಪತ್ತಿನ ಮೋಸದ ಭರವಸೆಗಳ ಮೇಲೆ ಅಭಿವೃದ್ಧಿ ಹೊಂದುವ ಪರಭಕ್ಷಕ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಉಂಟಾಗುವ ವ್ಯಸನ, ಆರ್ಥಿಕ ನಾಶ ಮತ್ತು ಸಾಮಾಜಿಕ ಸಂಕಟವನ್ನು ನಿಯಂತ್ರಿಸಲು ವಿನ್ಯಾಸಗೊಳಿಸಲಾಗಿದೆ" ಎಂದು ತಿಳಿಸಿದೆ.
ಡ್ರೀಮ್11 ಆನ್‌ಲೈನ್ ಗೇಮಿಂಗ್ ಕಂಪನಿಯು ಸರ್ಕಾರದ ನಿಷೇಧವನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಘೋಷಿಸಿದೆ. "ಇಂದಿನ ಕಾನೂನು ಆರ್ಎಮ್ಜಿ ಅನ್ನು ನಿಷೇಧಿಸುತ್ತದೆ, ಆದ್ದರಿಂದ ನಾವು ಇದನ್ನು ಸವಾಲು ಮಾಡುವುದಿಲ್ಲ" ಎಂದು ಡ್ರೀಮ್11ನ ಪೋಷಕ ಕಂಪನಿ ಡ್ರೀಮ್ ಸ್ಪೋರ್ಟ್ಸ್‌ನ ಸಹ-ಸಂಸ್ಥಾಪಕ ಹರೀಶ್ ಜೈನ್ ಹೇಳಿದ್ದಾರೆ.