ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಪಂದ್ಯಗಳ ಆಯೋಜನೆ ವೇಳೆ ಅಕ್ರಮ: ಸಿಎಂಗೆ ಪತ್ರ ಬರೆದ ಎಂಎಲ್​ಸಿ ದಿನೇಶ್​​ ಗೂಳಿಗೌಡ
x

ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಪಂದ್ಯಗಳ ಆಯೋಜನೆ ವೇಳೆ ಅಕ್ರಮ: ಸಿಎಂಗೆ ಪತ್ರ ಬರೆದ ಎಂಎಲ್​ಸಿ ದಿನೇಶ್​​ ಗೂಳಿಗೌಡ

ಕೆಎಸ್‌ಸಿಎ ಮತ್ತು ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್‌ವರ್ಕ್ ಕಂಪನಿಯು ಟೆಸ್ಟ್, ಏಕದಿನ ಮತ್ತು ಐಪಿಎಲ್ ಪಂದ್ಯಾವಳಿಗಳ ಆಯೋಜನೆಗೆ ಒಪ್ಪಂದ ಮಾಡಿಕೊಂಡಿದೆ.


ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಮತ್ತು ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್‌ವರ್ಕ್ ಕಂಪನಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದೆ ಹಾಗೂ ಅಕ್ರಮಗಳನ್ನು ಎಸಗುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಕೆಎಸ್‌ಸಿಎ ಮತ್ತು ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್‌ವರ್ಕ್ ಕಂಪನಿಯು ಟೆಸ್ಟ್, ಏಕದಿನ ಮತ್ತು ಐಪಿಎಲ್ ಪಂದ್ಯಾವಳಿಗಳ ಆಯೋಜನೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಕಂಪನಿಯು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ ಎಂದು ಗೂಳಿಗೌಡ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ಪಂದ್ಯಗಳು ನಡೆಯುವ ವೇಳೆ ಸಂಬಂಧಿಸಿದ ಇಲಾಖೆಗಳಿಂದ ಸೂಕ್ತ ಅನುಮತಿಗಳನ್ನು ಪಡೆಯದೆ, ಸ್ಥಳೀಯಾಡಳಿತ ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರಗಳನ್ನು ಪಡೆಯದೆ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದೆ.

ಕಾಳಸಂತೆಯಲ್ಲಿ ಟಿಕೆಟ್​

ಐಪಿಎಲ್ ಪಂದ್ಯಾವಳಿಗಳ ಟಿಕೆಟ್‌ಗಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ ಎಂಬುದಾಗಿ ಗೂಳಿಗೌಡ ಅವರು ಆರೋಪಿಸಿದ್ದಾರೆ. ಉದಾಹರಣೆಗೆ 1,200 ರೂ. ಮೌಲ್ಯದ ಟಿಕೆಟ್‌ಗಳು 10,000 ರಿಂದ 15,000 ರೂ.ಗೆ ಮತ್ತು 20,000 ರೂ. ವಿಐಪಿ ಟಿಕೆಟ್‌ಗಳು 2 ಲಕ್ಷ ರೂ.ಗೆ ಮಾರಾಟವಾಗುತ್ತಿವೆ . ಇದು ಸರ್ಕಾರ ಮತ್ತು ಕ್ರೀಡಾ ಇಲಾಖೆಗೆ ಕೆಟ್ಟ ಹೆಸರು ತರುತ್ತಿದೆ ಎಂದು ದಿನೇಶ್ ಗೂಳಿಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಪಂದ್ಯಾವಳಿಗಳಿಗೆ ಆಗಮಿಸುವ ಅತಿಥಿಗಳಿಗೆ ಪೂರೈಸಲಾಗುತ್ತಿರುವ ಆಹಾರ ಮತ್ತು ಪಾನೀಯಗಳು ಕಳಪೆ ಗುಣಮಟ್ಟದ್ದಾಗಿದೆ. ಇದರಿಂದ ಅತಿಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಇಲಾಖಾ ಮಟ್ಟದಲ್ಲಿ ಚರ್ಚೆಯಾಗಿದೆ. ಕೆಎಸ್‌ಸಿಎ ಕಾರ್ಯದರ್ಶಿ ಶಂಕರ್ ಅವರು ಅವ್ಯವಹಾರಗಳಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.

ಸಮಸ್ಯೆ ನಿವಾರಿಸಲು ಏಕಗವಾಕ್ಷಿ ಪದ್ಧತಿ ಜಾರಿಗೆ ತರಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ. ಈ ಪದ್ಧತಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು, ಪೊಲೀಸ್ ಇಲಾಖೆ, ಕ್ರೀಡಾ ಇಲಾಖೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಒಳಗೊಂಡಿರಬೇಕು. ಇದರಿಂದ ಟಿಕೆಟ್ ವಿತರಣೆ, ಅತಿಥಿ ಸತ್ಕಾರ ಮತ್ತು ಪಂದ್ಯಾವಳಿ ಆಯೋಜನೆಯಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣ ಸಾಧ್ಯ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಟಿಕೆಟ್ ಅಕ್ರಮ, ಕಳಪೆ ಸೌಲಭ್ಯಗಳು ಮತ್ತು ಹಣಕಾಸು ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಕೆಎಸ್‌ಸಿಎ-ಡಿಎನ್‌ಎ ಒಪ್ಪಂದದ ಷರತ್ತುಗಳ ಪುನರ್ ಪರಿಶೀಲನೆ ಮತ್ತು ಉಲ್ಲಂಘನೆ ಇದ್ದರೆ ಒಪ್ಪಂದ ರದ್ದು ಮಾಡಬೇಕು. ಅವ್ಯವಹಾರ ತಡೆಯುವಲ್ಲಿ ವಿಫಲರಾದ ಕ್ರೀಡಾ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಟಿಕೆಟ್ ಕಾಳಸಂತೆ ಮಾರಾಟ ಮತ್ತು ಕಳಪೆ ಸೌಲಭ್ಯಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಡೆಗಟ್ಟಬೇಕು ಎಂದು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

Read More
Next Story