One lakh crore rupees will be transferred to the pockets of the poor through government schemes: DKS
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿದರು. 

ಸರ್ಕಾರದ ಯೋಜನೆಗಳಿಂದ ಬಡವರ ಜೇಬಿಗೆ ಒಂದು ಲಕ್ಷ ಕೋಟಿ ಸಂದಾಯ: ಡಿಕೆಶಿ

ಜೆ.ಹೆಚ್. ಪಟೇಲರ ಕಾಲದಲ್ಲಿ ಪಂಚಾಯಿತಿಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಎಸ್‌.ಎಂ. ಕೃಷ್ಣ ಕಾಲದಲ್ಲಿ 5 ಲಕ್ಷ ರೂ. ಗೆ ಏರಿಕೆ ಮಾಡುವ ಮೂಲಕ ಪಂಚಾಯಿತಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ ಎಂದು ಡಿಕೆಶಿ ತಿಳಿಸಿದರು.


“ಕಾಂಗ್ರೆಸ್ ಸರ್ಕಾರದ ವಿವಿಧ ಜನಪರ ಯೋಜನೆಗಳಿಂದ ಬಡವರ ಜೇಬಿಗೆ ಒಂದು ಲಕ್ಷ ಕೋಟಿ ರೂ. ಹಣವನ್ನು ಹಾಕುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, “ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಎರಡು ವರ್ಷವಾಗಿದೆ. ನೀವು ಇದರ ಬಗ್ಗೆ ಜನರಿಗೆ ನೆನಪಿಸುತ್ತಿರಬೇಕು. ನಾವು ಈ ಯೋಜನೆ ಜಾರಿ ಮಾಡಿ ನಿಮ್ಮ ಕೈಗೆ ಅಸ್ತ್ರ ನೀಡಿದ್ದೇವೆ". ನೀವು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

"ರೈತರ ಉಚಿತ ವಿದ್ಯುತ್‌ಗೆ 20 ಸಾವಿರ ಕೋಟಿ ರೂ, ವಿವಿಧ ಪಿಂಚಣಿ ಯೋಜನೆಗೆ 10 ಸಾವಿರ ಕೋಟಿ ರೂ, ಪಂಚ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ ಹಾಗೂ ಸಮಾಜ ಕಲ್ಯಾಣ ಯೋಜನೆಗಳಿಗೆ ಸೇರಿ 1 ಲಕ್ಷ ಕೋಟಿಯಷ್ಟು ಹಣವನ್ನು ನಮ್ಮ ಸರ್ಕಾರ ಬಡವರ ಜೇಬಿಗೆ ಹಾಕುತ್ತಿದೆ. ಈ 1 ಲಕ್ಷ ಕೋಟಿ ರೂ. ಹಣದಲ್ಲಿ ಬಿಜೆಪಿ ಅಥವಾ ದಳದವರ ಒಂದು ಕಾರ್ಯಕ್ರಮ ಇದೆಯೇ? ನಾನು ಶಾಸಕನಾಗಿದ್ದಾಗ ಜೆ.ಹೆಚ್. ಪಟೇಲರ ಕಾಲದಲ್ಲಿ ಪಂಚಾಯಿತಿಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಎಸ್‌.ಎಂ. ಕೃಷ್ಣ ಅವರ ಕಾಲದಲ್ಲಿ ಅದನ್ನು 5 ಲಕ್ಷ ರೂ. ಗೆ ಏರಿಕೆ ಮಾಡಿದೆವು. 27 ಇಲಾಖೆಯನ್ನು ಪಂಚಾಯಿತಿಗೆ ಸೇರಿಸುವ ಮೂಲಕ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ” ಎಂದು ತಿಳಿಸಿದರು.

ದೇಶಕ್ಕೆ ಪ್ರತಿಪಕ್ಷಗಳ ಕೊಡುಗೆ ಶೂನ್ಯ

“ಜೆಡಿಎಸ್‌ನಲ್ಲಿ ದೊಡ್ಡ ಗೌಡರು, ಅವರ ಮಕ್ಕಳು, ಮೊಮ್ಮಕ್ಕಳು ಯಾವ ತ್ಯಾಗ ಮಾಡಿದ್ದಾರೆ? ಇನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಕೊಡುಗೆ ಏನು? ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಹೊಟ್ಟೆ ತುಂಬಿಸಿದ್ದಾರಾ? ಜಮೀನು ಕೊಟ್ಟಿದ್ದಾರಾ? ರೈತರಿಗೆ ಮೊದಲು ಉಚಿತ ವಿದ್ಯುತ್ ಕೊಟ್ಟಿದ್ದು ಬಂಗಾರಪ್ಪ, ನಾನು ಸಚಿವನಾಗಿದ್ದಾಗ 6 ಗಂಟೆ ನೀಡಲಾಗುತ್ತಿದ್ದ ವಿದ್ಯುತ್ ಅನ್ನು 7 ಗಂಟೆಗೆ ಏರಿಸಿದೆ. ಮೊದಲು ಪ್ರತಿ ವರ್ಷ ಇದಕ್ಕಾಗಿ 800 ಕೋಟಿ ರೂ. ನೀಡುತ್ತಿದ್ದೆವು. ಈಗ 20 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

ದೇಶದಲ್ಲಿ ತಂತ್ರಜ್ಞಾನದ ಕ್ರಾಂತಿ

“ನಾನು ವಿದ್ಯಾರ್ಥಿಯಾಗಿದ್ದಾಗ ಹಾಸ್ಟೆಲ್‌ನಲ್ಲಿದ್ದೆ. ನಮ್ಮ ಊರಿನಲ್ಲಿ ಆಗ ದೂರವಾಣಿ ಸಂಪರ್ಕ ಇರಲಿಲ್ಲ. ಅದನ್ನು ಪಡೆಯಬೇಕಾದರೆ ಮೂರರಿಂದ ನಾಲ್ಕು ವರ್ಷ ಬೇಕಾಗುತ್ತಿತ್ತು. ಆದರೆ ಇಂದು ಪ್ರತಿಯೊಬ್ಬರು ಎರಡು, ಮೂರು ಮೊಬೈಲ್‌ ಇಟ್ಟುಕೊಂಡಿದ್ದಾರೆ. ಈ ದೇಶದಲ್ಲಿ ಕಂಪ್ಯೂಟರ್ ಹಾಗೂ ದೂರವಾಣಿ ತಂತ್ರಜ್ಞಾನದ ಕ್ರಾಂತಿ ತಂದವರು ರಾಜೀವ್ ಗಾಂಧಿ” ಎಂದು ತಿಳಿಸಿದರು.

ವಿದ್ಯಾರ್ಥಿ ಚುನಾವಣೆಗೆ ಶೀಘ್ರವೇ ಸಮಿತಿ ರಚನೆ

“ಈಗ ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿರುವ ಅನೇಕ ನಾಯಕರು ರಾಜೀವ್ ಗಾಂಧಿ ಅವರ ಕಾಲದಲ್ಲಿ ಬೆಳೆದು ಬಂದವರು. ಈ ದೇಶದ ಸಮಗ್ರತೆ, ಐಕ್ಯತೆ ಶಾಂತಿಗಾಗಿ ನಮ್ಮ ಪಕ್ಷದ ನಾಯಕರು ಮಾಡಿರುವ ತ್ಯಾಗ ಬಲಿದಾನ ಬೇರೆ ಪಕ್ಷದ ನಾಯಕರು ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಚುನಾವಣೆ ನಡೆಸಲು ಪತ್ರ ಬರೆದಿದ್ದು, ಇದನ್ನು ಯಾವ ರೀತಿ ನಡೆಸಬೇಕು ಎಂದು ತೀರ್ಮಾನ ಮಾಡಲು ಸಮಿತಿ ರಚಿಸಲಿದ್ದೇನೆ” ಎಂದು ತಿಳಿಸಿದರು

Read More
Next Story