
ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ವರದಿ ನೀಡಿತು
ಹಳೆ ಯೋಜನೆಗಳಿಗೆ ಗೇಟ್‌ಪಾಸ್; ಸರ್ಕಾರದಿಂದ ʼಒನ್ ಇನ್, ಒನ್ ಔಟ್ʼ ನೀತಿ ಜಾರಿ?
ʼಒನ್ ಇನ್, ಒನ್ ಔಟ್ʼ ನೀತಿಯಿಂದ ಹಣಕಾಸು ಶಿಸ್ತು ಕಾಪಾಡಬಹುದು. ಆದರೆ ವೆಚ್ಚದ ಆಧಾರದ ಮೇಲೆ ಯೋಜನೆಗಳು ರದ್ದಾದರೆ ಎಡವಟ್ಟುಗಳಾಗುವ ಸಾಧ್ಯತೆಯಿದೆ. ಸಾಮಾಜಿಕ ಯೋಜನೆಗಳಿಗೆ ಹಿನ್ನಡೆಯಾಗಲಿದೆ!
ವೆಚ್ಚ ಕಡಿತ, ಆಡಳಿತ ಸರಳೀಕರಣ ಮತ್ತು ಯೋಜನೆಗಳ ಪರಿಣಾಮಕಾರಿ ಜಾರಿಗಾಗಿ “ಒನ್ ಇನ್, ಒನ್ ಔಟ್” ಎಂಬ ನೀತಿ ಜಾರಿಗೆ ತರಲು ಕರ್ನಾಟಕ ಆಡಳಿತ ಸುಧಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸರ್ಕಾರದಲ್ಲಿರುವ ಹಲವು ಯೋಜನೆಗಳು ಆಡಳಿತಾತ್ಮಕವಾಗಿ ದುಬಾರಿಯಾಗಿವೆ. ಪ್ರತಿಯೊಂದು ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದಾಗ ಹೊಸ ಹೊಸ ಯೋಜನೆ ಪ್ರಕಟಿಸುತ್ತವೆ. ಆ ಯೋಜನೆ ನಿರ್ವಹಣೆಗೆ ಸಿಬ್ಬಂದಿ, ವಾಹನ, ಕಚೇರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆದರೆ, ಅಷ್ಟೇನು ಪರಿಣಾಮ ಬೀರದ ಯೋಜನೆಗಳನ್ನು ಸ್ಥಗಿತಗೊಳಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಆಯೋಗ ನೀಡಿದೆ.
ಅನಗತ್ಯವಾದ, ಯಾವುದೇ ಪರಿಣಾಮ, ಪ್ರಗತಿ ಕಾಣದ ಯೋಜನೆಗಳನ್ನು ಕೈ ಬಿಟ್ಟು, ಅದರ ಬದಲಿಗೆ ಹೊಸ ಯೋಜನೆ ತರುವ ಸಲುವಾಗಿ ಆಯೋಗವು ʼಒನ್ ಇನ್, ಒನ್ ಔಟ್ʼ ನೀತಿ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆ ಪರಿಚಯಿಸಿದರೆ, ಅದಕ್ಕೆ ಸಮನಾದ ಒಂದು ಹಳೆಯ, ಅನಗತ್ಯ ಅಥವಾ ಪರಿಣಾಮಕಾರಿಯಲ್ಲದ ಯೋಜನೆಯನ್ನು ರದ್ದುಪಡಿಸಬೇಕು. ಇಲ್ಲವೇ ವಿಲೀನ ಮಾಡಬೇಕು. ಇದರಿಂದ ಸರ್ಕಾರಿ ವ್ಯವಸ್ಥೆಯಲ್ಲಿ ಅನಗತ್ಯ ಯೋಜನೆಗಳ ಸಂಖ್ಯೆ ಹೆಚ್ಚಾಗದಂತೆ ತಡೆಯಬಹುದಾಗಿದೆ ಎಂದು ಆರ್.ವಿ.ದೇಶಪಾಂಡೆ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ಒಂದು ಕೋಟಿ ರೂ.ಗಿಂತ ಕಡಿಮೆ ಅನುದಾನ ಪಡೆಯುತ್ತಿರುವ ಮತ್ತು ಸ್ಪಷ್ಟ ಫಲಿತಾಂಶ ನೀಡದ ಯೋಜನೆಗಳನ್ನು ವಿಲೀನಗೊಳಿಸಬೇಕು. ಇದನ್ನು “ಒನ್ ಇನ್, ಒನ್ ಔಟ್” ತತ್ವದ ಭಾಗವಾಗಿಯೇ ನೋಡಬೇಕು ಎಂದು ಹೇಳಿದೆ.
ಹೊಸ ನೀತಿಯ ಪ್ರಯೋಜನ ಏನು?
ʼಒನ್ ಇನ್, ಒನ್ ಔಟ್ʼ ನೀತಿ ಜಾರಿಯಿಂದ ಹಣಕಾಸಿನ ಶಿಸ್ತು ಕಾಪಾಡಬಹುದು. ಯೋಜನೆಗಳ ಸಂಖ್ಯೆ ಕಡಿಮೆಯಾಗುವುದರಿಂದ ಪರಿಣಾಮಕಾರಿ ಜಾರಿ ಸಾಧ್ಯವಾಗಲಿದೆ. ಆಡಳಿತದಲ್ಲಿ ದಕ್ಷತೆ ಹೆಚ್ಚಿಸುವ ಜತೆಗೆ ಸಾರ್ವಜನಿಕ ಹಣದ ದುರುಪಯೋಗ ತಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಪ್ರತಿ ವರ್ಷ ರಾಜ್ಯ ಸರ್ಕಾರವು ಅಸ್ತಿತ್ವದಲ್ಲಿರುವ ಯೋಜನೆಗಳ ಜೊತೆಗೆ ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತದೆ. ಇದರೊಂದಿಗೆ, ಅಷ್ಟೇ ಸಂಖ್ಯೆಯ ಹಳೆಯ ಯೋಜನೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸಬೇಕು. ಇದು ಹೊಸ ಉಪಕ್ರಮಗಳಿಗೆ ಮಾರ್ಗವಾಗಲಿದೆ. ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಅಗತ್ಯವಿರುವ ಮಾನವಶಕ್ತಿಯ ಲಭ್ಯತೆಯನ್ನೂ ಖಾತ್ರಿಪಡಿಸಲಿದೆ. ಹಾಗಾಗಿ, ಇಲಾಖಾವಾರು ಬಜೆಟ್ ಅಂತಿಮಗೊಳಿಸುವ ಸಂದರ್ಭದಲ್ಲಿ ಅನಗತ್ಯ ಯೋಜನೆಗಳನ್ನು ಕೈಬಿಡಬೇಕು ಎಂಬುದು ಆಡಳಿತ ಸುಧಾರಣಾ ಆಯೋಗದ ಅಭಿಪ್ರಾಯವಾಗಿದೆ.
ದೀರ್ಘಾವಧಿ ಯೋಜನೆ ಅನಗತ್ಯ
ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆ ಜಾರಿ ಮಾಡಿದಾಗ ಅದು ಅನಿರ್ದಿಷ್ಟ ಅವಧಿ ಹೊಂದಿರಬಾರದು. ಪ್ರತಿ ಯೋಜನೆಯ ಉದ್ದೇಶ, ವ್ಯಾಪ್ತಿ ಹಾಗೂ ಗುರಿ ನಿಗದಿ ಮಾಡಬೇಕು. ಹೊಸ ಯೋಜನೆಗಳನ್ನು ಕನಿಷ್ಠ 3 ರಿಂದ 5 ವರ್ಷಗಳ ನಿಗದಿತ ಕಾಲಮಿತಿಯೊಂದಿಗೆ 'ಮಿಷನ್ ಮೋಡ್' ವ್ಯವಸ್ಥೆಯಡಿ ಅನುಷ್ಠಾನ ಮಾಡಬೇಕು. 5 ವರ್ಷಗಳ ನಂತರ ಯೋಜನೆ ಮುಂದುವರಿಸುವುದು ಆಡಳಿತಾತ್ಮಕವಾಗಿ ಕಾರ್ಯಸಾಧುವಲ್ಲ. ಉದ್ದೇಶಿತ ಫಲಿತಾಂಶ ದೊರೆತ ಕೂಡಲೇ ಯೋಜನೆ ಸ್ಥಗಿತಗೊಳಿಸಬೇಕು ಎಂದು ಆಯೋಗ ಹೇಳಿದೆ.
ಪ್ರತಿ ಯೋಜನೆಗೆ ವಾರ್ಷಿಕ ಬಜೆಟ್ ಅಂತಿಮಗೊಳಿಸುವ ಸಂದರ್ಭದಲ್ಲಿ ಯೋಜನೆಗಳ ಭೌತಿಕ ಮತ್ತು ಹಣಕಾಸಿನ ಸಾಧನೆ ಬಗ್ಗೆ ವ್ಯವಸ್ಥಿತ ಮೌಲ್ಯಮಾಪನ ಆಗಬೇಕು. ಕಡಿಮೆ ಪ್ರಭಾವ ಬೀರುವ, ನಿರಂತರವಾಗಿ ಕಳಪೆ ಸಾಧನೆ ಮಾಡುವ ಅಥವಾ ಇತರ ಯೋಜನೆಗಳೊಂದಿಗೆ ಹೋಲಿಕೆಯಾಗುವ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
“ಸಮಾಜದ ಮೇಲೆ ಪರಿಣಾಮ ಬೀರದಿರುವ ಯೋಜನೆಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಪ್ರತಿ ವರ್ಷ ಜಾರಿಗೆ ತರುವ ಹೊಸ ಯೋಜನೆಗಳನ್ನು ʼಒನ್ ಇನ್, ಒನ್ ಔಟ್ʼ ಆಧಾರದಲ್ಲಿ ತರಬೇಕು. ಯೋಜನೆಗಳು ಹೆಚ್ಚಿದರೆ ಆಡಳಿತಕ್ಕೆ ತೊಂದರೆ ಆಗಲಿದೆ. ಸರ್ಕಾರದಲ್ಲಿ ಎಷ್ಟು ಯೋಜನೆಗಳಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಯೋಜನೆಗಳು ಎಷ್ಟೇ ಒಳ್ಳೆಯವಿದ್ದರೂ ಅದರ ಪರಿಣಾಮ ಫಲಿಸುವುದಿಲ್ಲ. ಹಾಗಾಗಿ ಅವುಗಳ ಮೌಲ್ಯಮಾಪನ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ” ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದರು.
ಯೋಜನೆ ಸ್ಥಗಿತದ ಅಪಾಯವೇನು?
ʼಒನ್ ಇನ್, ಒನ್ ಔಟ್ʼ ನೀತಿ ಜಾರಿಯಿಂದ ದುಂದುವೆಚ್ಚಗಳಿಗೆ ಕಡಿವಾಣ ಹಾಕಬಹುದು. ಆಡಳಿತಾತ್ಮಕ ಒತ್ತಡ ಕಡಿಮೆ ಮಾಡಬಹುದು. ಆದರೆ, ಕೇವಲ ವೆಚ್ಚದ ಆಧಾರದ ಮೇಲೆ ಯೋಜನೆಗಳನ್ನು ರದ್ದುಪಡಿಸಿದರೆ ಕೆಲವೊಮ್ಮೆ ಎಡವಟ್ಟುಗಳಾಗುವ ಸಾಧ್ಯತೆಯೂ ಇರಲಿದೆ. ಸಾಮಾಜಿಕವಾಗಿ ಅಗತ್ಯವಿರುವ ಕೆಲ ಯೋಜನೆಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇರಲಿದೆ. ಹೀಗಾಗಿ ಯೋಜನೆಗಳ ಕಾರ್ಯಕ್ಷಮತೆ, ಫಲಾನುಭವಿಗಳ ಸಂಖ್ಯೆ ಮತ್ತು ಸಾಮಾಜಿಕ ಪರಿಣಾಮ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ತರ್ಕವೂ ವ್ಯಕ್ತವಾಗಿದೆ.

