
'ಒಂದೇ ಮನೆ, 80 ಮತದಾರರು' ರಾಹುಲ್ ಆರೋಪದ ಅಸಲಿಯೇ? 'ದ ಫೆಡರಲ್ ಕರ್ನಾಟಕ ' ರಿಯಾಲಿಟಿ ಚೆಕ್ನಲ್ಲಿ ಸತ್ಯ ಬಯಲು
ವಾಸ್ತವವನ್ನು ಅರಿಯಲು 'ದ ಫೆಡರಲ್ ಕರ್ನಾಟಕ' ವರದಿಗಾರರು ಆರೋಪದ ಕೇಂದ್ರಬಿಂದುವಾದ ಬೆಳ್ಳಂದೂರಿನ ಆ ಮನೆಗೆ ಭೇಟಿ ನೀಡಿದಾಗ ಹಲವು ಸತ್ಯಗಳು ಬಹಿರಂಗಗೊಂಡವು.
"ಬೆಂಗಳೂರಿನ ಮಹದೇವಪುರ ಕ್ಷೇತ್ರದ ಒಂದು ಸಣ್ಣ ಮನೆಯಲ್ಲಿ 80 ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿದೆ!" ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿದ ಈ ಒಂದು ಆರೋಪ, ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. 'ಮತಗಳವಿಗೆ ಬಲವಾದ ಸಾಕ್ಷಿ ಎಂಬಂತೆ ಬಿಂಬಿತವಾದ ಈ ಹೇಳಿಕೆಯು, ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸಿಯಾಗಿದೆ. ಆದರೆ, ಈ ಆರೋಪದ ಹಿಂದಿರುವ ಸತ್ಯಾಸತ್ಯತೆ ಏನು? ನಿಜವಾಗಿಯೂ ಒಂದು ಪುಟ್ಟ ಮನೆಯಲ್ಲಿ 80 ಮಂದಿ ವಾಸವಿದ್ದಾರೆಯೇ? ಇದರ ವಾಸ್ತವವನ್ನು ಅರಿಯಲು 'ದ ಫೆಡರಲ್ ಕರ್ನಾಟಕ' ವರದಿಗಾರರು ಆರೋಪದ ಕೇಂದ್ರಬಿಂದುವಾದ ಬೆಳ್ಳಂದೂರಿನ ಆ ಮನೆಗೆ ಭೇಟಿ ನೀಡಿದಾಗ ಹಲವು ಸತ್ಯಗಳು ಬಹಿರಂಗಗೊಂಡವು.
ಆರೋಪದ ಕೇಂದ್ರಬಿಂದು: ಮುನಿರೆಡ್ಡಿ ಗಾರ್ಡನ್ನ 35ನೇ ಸಂಖ್ಯೆಯ ಮನೆ
ಬೆಳ್ಳಂದೂರಿನ ಟೆಕ್ ಕಾರಿಡಾರ್ಗಳ ಅಬ್ಬರದಿಂದ ತುಸು ಒಳಗೆ ಸಾಗಿದರೆ ಸಿಗುವುದೇ ಮುನಿರೆಡ್ಡಿ ಗಾರ್ಡನ್. ಇಲ್ಲಿ ಸಾಲಾಗಿ ಕಟ್ಟಿರುವ, ತಗಡಿನ ಶೀಟ್ ಹೊದಿಸಿದ 10x15 ಅಳತೆಯ ಪುಟ್ಟ ಮನೆಗಳು. ಹೊರ ರಾಜ್ಯಗಳಿಂದ ವಲಸೆ ಬಂದ ಸಾವಿರಾರು ಕಾರ್ಮಿಕರ ಪಾಲಿನ ಆಸರೆಯ ತಾಣ. ಈ ಮನೆಗಳ ಸಾಲಿನಲ್ಲಿರುವ 35ನೇ ಸಂಖ್ಯೆಯ ಮನೆಯೇ ಈಗ ರಾಷ್ಟ್ರದ ಗಮನ ಸೆಳೆದಿರುವ ವಿವಾದದ ಕೇಂದ್ರ. 'ದ ಫೆಡರಲ್ ಕರ್ನಾಟಕ' ಅಲ್ಲಿಗೆ ತಲುಪಿದಾಗ, ಆ ಮನೆಯ ಮುಂದೆ ಮಾಧ್ಯಮಗಳ ದಂಡು, ಸುತ್ತಮುತ್ತಲಿನವರ ಅನುಮಾನದ ನೋಟಗಳು, ಮತ್ತು ಇವೆಲ್ಲದರ ನಡುವೆ, ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯದಂತೆ, ತನ್ನ ಪತ್ನಿ ಮತ್ತು ಮಗನೊಂದಿಗೆ ಆತಂಕದಲ್ಲಿ ನಿಂತಿದ್ದ ಪಶ್ಚಿಮ ಬಂಗಾಳ ಮೂಲದ ಯುವಕ ದೀಪಕ್ ಕಂಡು ಬಂದರು.
ದೀಪಕ್ ದಿನಚರಿಯಲ್ಲಿ ಬಿರುಗಾಳಿ
ಕೇವಲ ಒಂದು ತಿಂಗಳ ಹಿಂದೆಯಷ್ಟೇ ಈ ಮನೆಗೆ ಬಾಡಿಗೆಗೆ ಬಂದಿದ್ದ ದೀಪಕ್, ಸ್ವಿಗ್ಗಿಯಲ್ಲಿ ಫುಡ್ ಡೆಲಿವರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಂಪ್ಯೂಟರ್ ರಿಪೇರಿ ಅಂಗಡಿ ಇಟ್ಟುಕೊಂಡು, ಅದು ನಷ್ಟವಾದ ಕಾರಣ, ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ವಲಸೆ ಬಂದಿದ್ದ ಅವರಿಗೆ, ತಾವು ವಾಸಿಸುವ ಮನೆಯೇ ರಾಷ್ಟ್ರೀಯ ವಿವಾದದ ಕೇಂದ್ರವಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.
'ದ ಫೆಡರಲ್ ಕರ್ನಾಟಕ' ಜತೆ ತಮ್ಮ ನೋವು ತೋಡಿಕೊಂಡ ದೀಪಕ್, "ಕಳೆದ ಎರಡು ದಿನಗಳಿಂದ ನಮ್ಮ ಜೀವನ ನರಕವಾಗಿದೆ ಸರ್. ಅಕ್ಕಪಕ್ಕದ ಮನೆಯವರು ನಮ್ಮನ್ನು ಅಪರಾಧಿಗಳಂತೆ ನೋಡುತ್ತಿದ್ದಾರೆ. 'ನಿಮ್ಮ ಮನೆಯಲ್ಲಿ 80 ಜನ ಇದ್ದಾರಂತೆ, ನೀವೇನು ಅಕ್ರಮ ಮಾಡುತ್ತಿದ್ದೀರಿ?' ಎಂದು ಕೇಳುತ್ತಾರೆ. ನನ್ನ ಮಗನನ್ನು ಆಟಕ್ಕೂ ಸೇರಿಸಿಕೊಳ್ಳುತ್ತಿಲ್ಲ. ಈ ಸುದ್ದಿಯಿಂದ ನನ್ನ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ಮನೆ ಮಾಲೀಕರು ಮನೆ ಖಾಲಿ ಮಾಡಿಸಿದರೆ ನಾವು ಎಲ್ಲಿಗೆ ಹೋಗುವುದು? ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗೂ, ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವೋಟರ್ ಐಡಿ ಇರುವುದು ಬೆಂಗಳೂರಿನಲ್ಲಲ್ಲ, ಪಶ್ಚಿಮ ಬಂಗಾಳದಲ್ಲಿ," ಎಂದು ಹೇಳುವಾಗ ಅವರ ದನಿಯಲ್ಲಿ ಆತಂಕವಿತ್ತು.
ಯಾವ ತನಿಖೆಗೂ ಸಿದ್ಧ: ಮನೆ ಮಾಲೀಕ ಜಯರಾಮ್ ರೆಡ್ಡಿ ಸವಾಲು
ಈ 35 ಮನೆಗಳ ಮಾಲೀಕರಾದ ಜಯರಾಮ್ ರೆಡ್ಡಿ ಅವರು ರಾಹುಲ್ ಗಾಂಧಿ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. "ನೋಡಿ, ಇವೆಲ್ಲ 10x15 ಅಳತೆಯ ಸಣ್ಣ ಮನೆಗಳು. ಇಲ್ಲಿರುವವರೆಲ್ಲರೂ ಕೂಲಿ ಮಾಡಿ ಜೀವಿಸುವ ಉತ್ತರ ಭಾರತದ ಬಡ ಕಾರ್ಮಿಕರು. ಇಂತಹ ಪುಟ್ಟ ಮನೆಯಲ್ಲಿ 80 ಮಂದಿ ಇರಲು ಸಾಧ್ಯವೇ? ಇದು ಶುದ್ಧ ಸುಳ್ಳು. ಇಲ್ಲಿಗೆ ಬಾಡಿಗೆಗೆ ಬರುವವರು ಮೂರು ತಿಂಗಳು, ಆರು ತಿಂಗಳು ಇದ್ದು, ಬೇರೆ ಕೆಲಸ ಸಿಕ್ಕಾಗ ಮನೆ ಖಾಲಿ ಮಾಡಿ ಹೋಗುತ್ತಾರೆ. ಆದರೆ, ಅವರು ತಮ್ಮ ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸಿರುವುದಿಲ್ಲ. ಬಹುಶಃ ಹಾಗಾಗಿ ಹಳೆಯವರ ಹೆಸರುಗಳು ಪಟ್ಟಿಯಲ್ಲಿ ಉಳಿದಿರಬಹುದು. ಈ ಬಗ್ಗೆ ಯಾವುದೇ ತನಿಖೆ ನಡೆಸಿದರೂ ಎದುರಿಸಲು ನಾನು ಸಿದ್ಧ," ಎಂದು ಅವರು ಸವಾಲು ಹಾಕಿದ್ದಾರೆ.
ತಮ್ಮನ್ನು 'ಬಿಜೆಪಿ ಸಂಘಟಕ' ಎಂದು ವರದಿಯಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ನಾನು ಬಿಜೆಪಿಗೆ ಮತ ಹಾಕುತ್ತೇನೆ, ಆದರೆ ನಾನೆಂದೂ ಪಕ್ಷದ ಪರ ಪ್ರಚಾರ ಮಾಡಿಲ್ಲ," ಎಂದು ಹೇಳಿದ್ದಾರೆ.
ಅಸಲಿ ಸಮಸ್ಯೆ ಮತದಾರರ ಪಟ್ಟಿಯ ತಾಂತ್ರಿಕ ದೋಷವೇ?
ಈ ಗೊಂದಲದ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮೂಲಗಳನ್ನು ಸಂಪರ್ಕಿಸಿದಾಗ, ಸಮಸ್ಯೆಯ ಬೇರುಗಳ ವಿವರ ದೊರೆಯಿತು. "ನಾವು ಆ ಮನೆಯ ವಿಳಾಸದಲ್ಲಿ 80 ಹೆಸರುಗಳಿವೆ ಎಂದು ಹೇಳಿದ್ದೇವೆಯೇ ಹೊರತು, ಅವರೆಲ್ಲರೂ ಅಲ್ಲಿಂದಲೇ ಮತ ಚಲಾಯಿಸಿದ್ದಾರೆ ಎಂದು ಹೇಳಿಲ್ಲ. ಮನೆ ಖಾಲಿ ಮಾಡಿ ಹೋದಂತಹ ಅನೇಕರು ತಮ್ಮ ವಿಳಾಸವನ್ನು ಬದಲಾಯಿಸದ ಕಾರಣ, ಹಳೆಯ ವಿಳಾಸದಲ್ಲೇ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿದಿವೆ. ಇದು ಒಂದು ತಾಂತ್ರಿಕ ಸಮಸ್ಯೆ. ಮತದಾರರ ಪಟ್ಟಿಯಿಂದ ಇಂತಹ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲಾಗುವುದು," ಎಂದು ಮೂಲಗಳು ತಿಳಿಸಿವೆ.
ಬಿಜೆಪಿಗೆ ಇವೆಲ್ಲ ಮಾಮೂಲು
ಕಾಂಗ್ರೆಸ್ನ ಸ್ಥಳೀಯ ನಾಯಕ ಮೂರ್ತಿ ಅವರು, ಈ ಎಲ್ಲಾ ತಾಂತ್ರಿಕ ಸಬೂಬುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. "ಮಹದೇವಪುರ ಕ್ಷೇತ್ರದಲ್ಲಿ ಒಂದೇ ಮನೆಯಲ್ಲಿ 80 ಹೆಸರುಗಳಿರುವುದು ನಿಜ. ಇದೇ ರೀತಿ ಬೇರೆ ಕಡೆಗಳಲ್ಲೂ ಇರಬಹುದು. ಇದು ಬಿಜೆಪಿಯು ವ್ಯವಸ್ಥಿತವಾಗಿ ಎಸಗಿರುವ ಅಕ್ರಮ. ಅವರಿಂದ ಇಂಥದ್ದೆಲ್ಲಾ ಸಾಧ್ಯ, ಇದೆಲ್ಲಾ ಅವರಿಗೆ ಮಾಮೂಲು," ಎಂದು ಅವರು ತಮ್ಮ ಆರೋಪವನ್ನು ಮುಂದುವರಿಸುತ್ತಾರೆ.