Yatnal Expulsion | ನಾಮ ಹಾಕಿ, ಪೂಜೆ ಮಾಡಿದವರೆಲ್ಲರೂ ಹಿಂದೂ ಅಲ್ಲ ; ಯತ್ನಾಳ್‌ ಉಚ್ಛಾಟನೆಗೆ ಕಲ್ಲಡ್ಕ ಪ್ರಭಾಕರ್‌ ಭಟ್‌ ಸಮರ್ಥನೆ
x

Yatnal Expulsion | ನಾಮ ಹಾಕಿ, ಪೂಜೆ ಮಾಡಿದವರೆಲ್ಲರೂ ಹಿಂದೂ ಅಲ್ಲ ; ಯತ್ನಾಳ್‌ ಉಚ್ಛಾಟನೆಗೆ ಕಲ್ಲಡ್ಕ ಪ್ರಭಾಕರ್‌ ಭಟ್‌ ಸಮರ್ಥನೆ

ಸಂಘಟನೆ, ಪಕ್ಷದಲ್ಲಿದ್ದಾಗ ಮಾತು ಅತಿಯಾಗಬಾರದು. ಅಸಮಾಧಾನ, ಬೇಸರಗಳಿದ್ದರೆ ಪಕ್ಷದ ಚೌಕಟ್ಟಿನಲ್ಲಿ ವ್ಯಕ್ತಪಡಿಸಬೇಕು. ಆದರೆ, ಯತ್ನಾಳ್‌ ಅವರು ಬೀದಿಯಲ್ಲಿ ಮಾತನಾಡುವ ಮೂಲಕ ಹಿಂದುತ್ವದ ಶಿಸ್ತು ಉಲ್ಲಂಘಿಸಿದ್ದಾರೆ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದ್ದಾರೆ.


ಹಾದಿ ಬೀದಿಯಲ್ಲಿ ಮಾತನಾಡುವುದು ಹಿಂದುತ್ವದ ಲಕ್ಷಣವಲ್ಲ. ನಾಮ ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೆ ಹಿಂದೂ ಆಗುವುದಿಲ್ಲ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯತ್ನಾಳ್‌ ಉಚ್ಚಾಟನೆ ಹಿಂದೂಗಳಲ್ಲಿ ಅಸಮಾಧಾನ ತಂದಿದೆ ಎಂಬ ಮಾತುಗಳಿಗೆ ಮಂಡ್ಯದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಹಿಂದುತ್ವವಾದಿ ಎಂದರೆ ಮನಸ್ಸಿಗೆ ತೋಚಿದಂತೆ ಮಾತನಾಡುವುದಲ್ಲ. ಮಾತಿನ ಮೇಲೆ ನಿಗಾ ಇರಬೇಕು. ಒಂದು ಸಂಘಟನೆ, ಪಕ್ಷದಲ್ಲಿದ್ದಾಗ ಮಾತು ಮಿತಿ ಮೀರಬಾರದು. ಯಾವುದೇ ಅಸಮಾಧಾನ, ಬೇಸರಗಳಿದ್ದರೂ ಪಕ್ಷದ ಚೌಕಟ್ಟಿನಲ್ಲಿ ವ್ಯಕ್ತಪಡಿಸಬೇಕು. ಆದರೆ, ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಬೀದಿಯಲ್ಲಿ ಮಾತನಾಡುವ ಮೂಲಕ ಹಿಂದುತ್ವದ ಶಿಸ್ತು ಉಲ್ಲಂಘಿಸಿದ್ದಾರೆ ಎಂದು ಉಚ್ಚಾಟನೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಹಿಂದುತ್ವದಲ್ಲಿ ಶಿಸ್ತಿದೆ. ಅನುಶಾಸನವೂ ಇದೆ. ಅನುಶಾಸನ ಇಲ್ಲದಿದ್ದರೆ ಶಿಸ್ತು ಎನ್ನಿಸುವುದಿಲ್ಲ ಎಂದು ಯತ್ನಾಳ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ʼಹಿಂದೂಗಳಿಂದ ಬಿಜೆಪಿ, ಬಿಜೆಪಿಯಿಂದ ಹಿಂದೂಗಳಲ್ಲʼ

ಬಸನಗೌಡ ಪಾಟೀಲ ಯತ್ನಾಳ್‌ ಉಚ್ಚಾಟನೆಗೆ ಕೆಲ ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿವೆ. ಹಿಂದೂಗಳಿಂದ ಬಿಜೆಪಿ ಪಕ್ಷವಿದೆ, ಬಿಜೆಪಿಯಿಂದ ಹಿಂದೂಗಳಲ್ಲ. ಯತ್ನಾಳ್‌ ಉಚ್ಚಾಟನೆ ಸಾವಿರಾರು ಹಿಂದೂ ಕಾರ್ಯಕರ್ತರಿಗೆ ನೋವು ತಂದಿದೆ ಎಂದು ಕಿಡಿಕಾರಿದ್ದಾರೆ.

ಹಿಂದೂ ಫೈರ್‌ ಬ್ರ್ಯಾಂಡ್‌ ಆಗಿರುವ ಯತ್ನಾಳ್‌ ಅವರು ತಮ್ಮದೇ ಆದ ಹಿಂದೂಗಳ ಪಡೆ ಹೊಂದಿದ್ದು, ಹಲವರು ಯತ್ನಾಳ್‌ ಬೆಂಬಲಿಸಿದ್ದಾರೆ. ಯತ್ನಾಳ್‌ ಇಲ್ಲದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಎಸ್‌ವೈ ಕುಟುಂಬದ ಅಂತ್ಯ; ಯತ್ನಾಳ್‌

ಬಿಜೆಪಿಯಿಂದ ಉಚ್ಚಾಟನೆ ಬಳಿಕವೂ ಬಿಎಸ್‌ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಾಗ್ದಾಳಿ ಮುಂದುವರಿಸಿದ್ದಾರೆ. ಭಿನ್ನಮತೀಯರ ಸಭೆ ನಡೆಸಿದ ಬಳಿಕ ಹೆಚ್ಚು ಸಕ್ರಿಯರಾಗಿರುವ ಅವರು, ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ಅಂತ್ಯ ಆರಂಭವಾಗಿದೆ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

ನಾನು ಯಾವುದೇ ಹೊಸ ಪಕ್ಷ ಕಟ್ಟುವುದಿಲ್ಲ. ಹಾಗಂತ ಬಿಜೆಪಿ ಹೈಕಮಾಂಡ್ ಮುಂದೆ ಕೈ ಕಟ್ಟಿ ನಿಲ್ಲುವುದೂ ಇಲ್ಲ. ನಾನು ಭ್ರಷ್ಟಾಚಾರ ಮಾಡಿ ಲೂಟಿ ಮಾಡಿಲ್ಲ. ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ಸನಾತನ ಧರ್ಮ ರಕ್ಷಣೆ ಮಾಡಿದ್ದೇನೆ. ಗೋರಕ್ಷಣೆ ಮಾಡಿದ್ದೇನೆ. ನಾನು ಪಕ್ಷಕ್ಕೆ ಮತ್ತೆ ಬಂದೇ ಬರುತ್ತೇನೆ. ವರಿಷ್ಠರೇ ನನ್ನನ್ನು ಮತ್ತೆ ಗೌರವಯುತವಾಗಿ ವಾಪಸ್‌ ಕರೆಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣದ ವಿರುದ್ಧದ ನನ್ನ ಹೋರಾಟ ಮುಂದೆಯೂ ಇರಲಿದೆ. ಇದರ ಅರಿವು ವರಿಷ್ಠರಿಗೂ ಇದೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಜನ ಜಾಗೃತಿ ಮೂಡಿಸುತ್ತೇನೆ. ಬಿಜೆಪಿಯ ಮೂಲ ಸಿದ್ಧಾಂತ ಉಳಿಸುವ ಪ್ರಯತ್ನ ಮಾಡುತ್ತೇನೆ. ಪಕ್ಷವನ್ನು ರಿಪೇರಿ ಮಾಡಿ ಮರಳಿ ಬರುತ್ತೇನೆ. ಬಿಜೆಪಿಯನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿರುವ ‌ಭ್ರಷ್ಟರಿಗೆ ಅಂತ್ಯ ಹಾಡಿ, ಸನಾತನ ಹಿಂದೂ ಧರ್ಮ ಉಳಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

Read More
Next Story