ಒಂದು ದೇಶ- ಒಂದು ಚುನಾವಣೆ ಇಂದಿನ ತುರ್ತು; ವಿಜಯೇಂದ್ರ ಅಭಿಮತ
x

ಒಂದು ದೇಶ- ಒಂದು ಚುನಾವಣೆ ಇಂದಿನ ತುರ್ತು; ವಿಜಯೇಂದ್ರ ಅಭಿಮತ

ಭಾರತದ ಏಳಿಗೆಯನ್ನು ಅಮೆರಿಕ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಒಪ್ಪಬಹುದು; ಆದರೆ, ಈ ದೇಶದ ಮಣ್ಣಿನ ಋಣ, ಅನ್ನದ ಋಣ ಪಡೆದ ರಾಹುಲ್ ಗಾಂಧಿ, ನಮ್ಮ ಮುಖ್ಯಮಂತ್ರಿಯವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದರೆ ದೇಶದ ದುರಂತ ಎಂದು ವಿಜಯೇಂದ್ರ ಟೀಕಿಸಿದರು.


ಇಂದಿನ ಕಾಲಘಟ್ಟದಲ್ಲಿ 'ಒಂದು ದೇಶ ಒಂದು ಚುನಾವಣೆ' ಅತ್ಯಾವಶ್ಯಕವಾಗಿದೆ. ಇದರಿಂದ ರಾಜ್ಯ ಮತ್ತು ದೇಶಕ್ಕೆ ಒಳಿತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.

ಬೆಂಗಳೂರಿನ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ʼಒಂದು ದೇಶ ಒಂದು ಚುನಾವಣೆʼ ಕುರಿತ ವಿದ್ಯಾರ್ಥಿ ಪ್ರಮುಖರ ಸಭೆ ಉದ್ದೇಶಿಸಿ ಮಾತನಾಡಿದರು. ಆಡಳಿತ ಸುಧಾರಣೆ ಜೊತೆಗೆ ಸಾವಿರಾರು ಕೋಟಿ ಹಣ ಉಳಿಸುವ ಕ್ರಮ ಇದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಕೆಟ್ಟ ವಿಚಾರಗಳು ಬಹಳ ಬೇಗ ಜನರನ್ನು ತಲುಪುತ್ತವೆ. ಒಳ್ಳೆಯ ವಿಚಾರ ಜನರನ್ನು ತಲುಪಲು ತಡ ಆಗುತ್ತದೆ. ಆದ್ದರಿಂದ ನಾವು ನಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಒಳ್ಳೆಯ ವಿಚಾರಗಳ ಕುರಿತು ಜಾಗೃತಿ ಮೂಡಿಸಬೇಕು. ವಿವಿಧ ಕ್ಷೇತ್ರಗಳ ಸಮಾಜದ ಗಣ್ಯರ ಮಧ್ಯೆ ಚರ್ಚೆ ಮಾಡಬೇಕು. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಅತ್ಯಂತ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಕೆಲವೇ ಕೆಲವು ವರ್ಷಗಳಲ್ಲಿ ಭಾರತವು ಖರೀದಿ ಶಕ್ತಿ ಸಮಾನತೆ (ಪಿಪಿಪಿ) ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಭಾರತದ ಏಳಿಗೆಯನ್ನು ಅಮೆರಿಕ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಒಪ್ಪಬಹುದು; ಆದರೆ, ಈ ದೇಶದ ಮಣ್ಣಿನ ಋಣ, ಅನ್ನದ ಋಣ ಪಡೆದ ರಾಹುಲ್ ಗಾಂಧಿ, ನಮ್ಮ ಮುಖ್ಯಮಂತ್ರಿಯವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದರೆ ಇದು ಈ ದೇಶದ ದುರಂತ ಎಂದು ಟೀಕಿಸಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಒಂದು ಚುನಾವಣೆ ಕುರಿತು ಅಧ್ಯಯನ ನಡೆಸಿ ವರದಿ ಪಡೆಯಲಾಗಿದೆ. ಅಲ್ಲದೇ, ಇದು ಅನುಷ್ಠಾನಯೋಗ್ಯ ಎಂಬ ವರದಿಯೂ ಲಭಿಸಿದೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಮತಬ್ಯಾಂಕ್, ಮುಸ್ಲಿಮರ ತುಷ್ಟೀಕರಣದ ಸಲುವಾಗಿ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಬಿಜೆಪಿಯು ತಾನು ನೀಡಿದ ಆಶ್ವಾಸನೆಯಂತೆ ಆ ಸ್ಥಾನಮಾನವನ್ನು ರದ್ದು ಮಾಡಿತು. ಈಗ ಜಿಎಸ್‍ಟಿ ಸರಳೀಕರಣದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಹಿಂದೆ ದೇಶದಲ್ಲಿ ಒಂದು ರಾಷ್ಟ್ರ, ಒಂದೇ ಚುನಾವಣೆ ಪದ್ಧತಿ ಇತ್ತು. ಆದರೆ, ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರು ಅನೇಕ ರಾಜ್ಯಗಳಲ್ಲಿ ಚುನಾಯಿತ ಸರ್ಕಾರವನ್ನು ರದ್ದು ಮಾಡಿ, ರಾಷ್ಟ್ರಪತಿ ಆಳ್ವಿಕೆ ಹೇರಿತು ಎಂದರು.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಮತ್ತು ಒಗ್ಗಟ್ಟಿನ ಸಂದೇಶವನ್ನು ನಾವು ಒಂದು ರಾಷ್ಟ್ರ- ಒಂದು ಚುನಾವಣೆ ಎಂಬ ಸುಧಾರಣೆ ಮೂಲಕ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.

Read More
Next Story