ಹಳೆ ಪಿಂಚಣಿ ಯೋಜನೆ | ಶೀಘ್ರವೇ ಸರ್ಕಾರಕ್ಕೆ ವರದಿ; ಒಪಿಎಸ್ ಮರು ಜಾರಿ ಆಗುವುದೇ?
x

ಹಳೆ ಪಿಂಚಣಿ ಯೋಜನೆ | ಶೀಘ್ರವೇ ಸರ್ಕಾರಕ್ಕೆ ವರದಿ; ಒಪಿಎಸ್ ಮರು ಜಾರಿ ಆಗುವುದೇ?

ಹಳೆ ಪಿಂಚಣಿ ಯೋಜನೆ ಜಾರಿಯಿಂದ ಆರ್ಥಿಕವಾಗಿ ಎಷ್ಟು ಹೊರೆ ಬೀಳಲಿದೆ, ಜಾರಿ ಮಾಡಿದರೆ ಯಾವ ರೀತಿ ಜಾರಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಲಿದೆ.


ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ(ಒಪಿಎಸ್) ಮರು ಜಾರಿ‌ ಮಾಡುವ ಸಂಬಂಧ ರಚಿಸಲಾಗಿದ್ದ ಅಧ್ಯಯನ ಸಮಿತಿಯು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ರಾಜ್ಯದಲ್ಲಿ ಒಪಿಎಸ್ ಜಾರಿಗೆ ತರುವುದರಿಂದ ಆರ್ಥಿಕತೆ ಮೇಲೆ ಬೀರುವ ಪರಿಣಾಮಗಳು ಮತ್ತು ಕಾರ್ಯಸಾಧ್ಯತೆಯನ್ನು ಅಧ್ಯಯನ ನಡೆಸಲು 2024 ಆಗಸ್ಟ್ ತಿಂಗಳಲ್ಲಿ ಹಿರಿಯ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಈಗ ಸಮಿತಿಯು ಅಧ್ಯಯನ ಪೂರ್ಣಗೊಳಿಸಿದ್ದು, ವರದಿ ಸಿದ್ಧಪಡಿಸಿದೆ.

ಈ ಸಮಿತಿಯು ಬೇರೆ ರಾಜ್ಯಗಳಲ್ಲಿರುವ ಪಿಂಚಣಿ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ಅಧ್ಯಯನ ವರದಿ ತಯಾರಿಸಿದೆ. ಈ ವರದಿಯು ಸುಮಾರು ನೂರು ಪುಟಗಳನ್ನು ಹೊಂದಿದ್ದು, ಈ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ.

ಹಳೆ ಪಿಂಚಣಿ ಯೋಜನೆ ಜಾರಿಯಿಂದ ಆರ್ಥಿಕವಾಗಿ ಎಷ್ಟು ಹೊರೆ ಬೀಳಲಿದೆ, ಜಾರಿ ಮಾಡಿದರೆ ಯಾವ ರೀತಿ ಜಾರಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಲಿದೆ.

ಹಳೆ ಪಿಂಚಣಿ ಯೋಜನೆ ಕುರಿತಂತೆ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ‌ ಅವರು, ಹಳೆ ಪಿಂಚಣಿ ಯೋಜನೆ ಜಾರಿ ಈಗಾಗಲೇ ಸಾಕಷ್ಟು ವಿಳಂಬ ಆಗಿದೆ. ವರದಿ ಬೇಗ ಸಿಎಂಗೆ ಕೊಡಲಿದ್ದಾರೆ ಎಂಬ ಭರವಸೆ ಇದೆ.‌ ಪ್ರತಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಹಳೆ ಪಿಂಚಣಿ ಯೋಜನೆ ಮರು ಜಾರಿ ಬಗ್ಗೆ ಭರವಸೆ ನೀಡಿತ್ತು. ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಬೇಕು. ಹೋರಾಟ ಮಾಡುವ ಅಗತ್ಯ ಬರದಂತೆ ತೀರ್ಮಾನ ಮಾಡಬೇಕು ಎಂದು ಹೇಳಿದರು.

ಏನಿದು ಹಳೆ ಪಿಂಚಣಿ ಯೋಜನೆ?

ಹಳೆಯ ಪಿಂಚಣಿ ಯೋಜನೆ ಸರ್ಕಾರವು ಅನುಮೋದಿಸಿದ ನಿವೃತ್ತಿ ಯೋಜನೆಯಾಗಿದೆ. ಸರ್ಕಾರಿ ನೌಕರರು ಹಳೆ ಪಿಂಚಣಿ ಅಡಿಯಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಾರೆ. ಇದು ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಅವರ ಕೊನೆಯ ಮೂಲ ವೇತನ ಮತ್ತು ಸೇವಾವಧಿಯ ಆಧಾರದ ಮೇಲೆ ಖಾತರಿಪಡಿಸಿದ ಪಿಂಚಣಿ ಒದಗಿಸುತ್ತದೆ.

ಒಪಿಎಸ್ ಅಡಿಯಲ್ಲಿ ಸರ್ಕಾರವು ನಿವೃತ್ತಿಯ ನಂತರ ಸರ್ಕಾರಿ ನೌಕರರಿಗೆ ಸಂಪೂರ್ಣ ಪಿಂಚಣಿ ಮೊತ್ತ ಪಾವತಿಸುತ್ತದೆ. ಇದಕ್ಕಾಗಿ, ಉದ್ಯೋಗಿಗಳು ಸೇವೆಯಲ್ಲಿರುವಾಗ ಅವರ ಸಂಬಳದಿಂದ ಯಾವುದೇ ಮೊತ್ತವನ್ನು ಕಡಿತಗೊಳಿಸಲಾಗುವುದಿಲ್ಲ.

ನಿವೃತ್ತಿಯ ನಂತರ, ಸರ್ಕಾರಿ ನೌಕರರು ಪಿಂಚಣಿ ಮೊತ್ತವನ್ನು ಮತ್ತು ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆಯ ಪರಿಷ್ಕರಣೆಯ ಪ್ರಯೋಜನ ಪಡೆಯುತ್ತಾರೆ. ಅವರು ತಮ್ಮ ಕೊನೆಯ ಸಂಬಳ ಮತ್ತು ಡಿಎ ಆಧಾರದ ಮೇಲೆ ಪಿಂಚಣಿ ಪಡೆಯುವುದರಿಂದ, ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಾದಾಗ ಅವರ ಪಿಂಚಣಿ ಹೆಚ್ಚಾಗುತ್ತದೆ. ಈ ಯೋಜನೆ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ.

ಹಳೆಯ ಪಿಂಚಣಿ ಯೋಜನೆಯನ್ನು 2004 ರಲ್ಲಿ ಕೇಂದ್ರ ಸರ್ಕಾರ ಹಿಂಪಡೆದಿತ್ತು. ಆದರೆ, ಒಪಿಎಸ್‌ ಮರು ಜಾರಿಯ ಆಯ್ಕೆಯನ್ನು ರಾಜ್ಯಗಳಿಗೆ ಬಿಟ್ಟಿತ್ತು. ಈ ಯೋಜನೆಯಡಿ ನೌಕರರ ವೇತನದ ಶೇ 50 ರಷ್ಟು ಹಣವನ್ನು ಸರ್ಕಾರವೇ ಪಿಂಚಣಿ ರೂಪದಲ್ಲಿ ನೀಡಲಿದೆ. ಜೊತೆಗೆ ಕಾಲಕಾಲಕ್ಕೆ ನಡೆಯುವ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಏರಿಕೆಯ ಲಾಭವೂ ಇವರಿಗೆ ಸಿಗಲಿದೆ.

ಒಪಿಎಸ್ ಯಥಾವತ್ ಜಾರಿಗೆ ಆಗ್ರಹ

ಹಳೆಯ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಮರುಜಾರಿಗೆ ತರಬೇಕು ಎಂದು ಎನ್‌ಪಿಎಸ್‌ ನೌಕರರ ಸಂಘ ಆಗ್ರಹಿಸಿದೆ.

ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಎನ್‌ಪಿಎಸ್‌ ರದ್ದು ಮಾಡಿ, ಒಪಿಎಸ್ ಮರುಜಾರಿ ಮಾಡುವ ಭರವಸೆ ನೀಡಿದೆ. 2018 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಒಪಿಎಸ್ ಪರಿಶೀಲನಾ ಸಮಿತಿ ರಚಿಸಲಾಗಿದೆ. ಆದರೆ, ನಾವು ಮೊದಲಿನಿಂದಲೂ ಸಮಿತಿಯನ್ನು ವಿರೋಧಿಸುತ್ತಾ ಬಂದಿದ್ದೇವೆ. ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿರುವಾಗ ಸಮಿತಿ ಅನವಶ್ಯಕ ಎಂಬುದು ನಮ್ಮ ನಿಲುವು. ಸಮಿತಿಯು ಒಪಿಎಸ್ ವಿಚಾರವನ್ನು ವಿಷಯಾಂತರ ಮಾಡಲಿದೆ. ಈಗಾಗಲೇ ಕೇರಳ, ತಮಿಳುನಾಡಿನಲ್ಲಿ ನೇಮಿಸಿದ್ದ ಒಪಿಎಸ್ ಸಮಿತಿಗಳು ಎನ್‌ಪಿಎಸ್‌ ಯೋಜನೆಯನ್ನು ಪರಿಷ್ಕರಿಸಿವೆಯೇ ಹೊರತು ಒಪಿಎಸ್‌ ಮರು ಜಾರಿ ಮಾಡಿಲ್ಲ. ಹಾಗಾಗಿ ಸಮಿತಿ ನೇಮಕವನ್ನು ನಾವು ವಿರೋಧಿಸುತ್ತಾ ಬಂದಿದ್ದೇವೆ ಎಂದು ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜಾ ಹೇಳಿದ್ದರು.

ಆದರೆ, ಸಮಿತಿಗೆ ಸರ್ಕಾರಿ‌ ನೌಕರರ ಸಂಘ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಬದಲಿಗೆ ತ್ವರಿತವಾಗಿ ಜಾರಿ‌ ಮಾಡುವಂತೆ ಒತ್ತಾಯಿಸಿತ್ತು. ಸಿಎಂ ಹಾಗೂ ಡಿಸಿಎಂ ಕೂಡ ಸರ್ಕಾರಿ ನೌಕರರ‌ ಮನವಿಗೆ ಸ್ಪಂದಿಸಿದ್ದರು.

ಎಲ್ಲೆಲ್ಲಿ ಒಪಿಎಸ್ ಮರು ಜಾರಿ

ಒಪಿಎಸ್ ಅಥವಾ ಎನ್‌ಪಿಎಸ್‌ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜಸ್ಥಾನ, ಪಂಜಾಬ್, ಛತ್ತೀಸಗಢ ಹಾಗೂ ಹಿಮಾಚಲ ಪ್ರದೇಶ ಎನ್‌ಪಿಎಸ್‌ ವ್ಯವಸ್ಥೆಯಿಂದ ಒಪಿಎಸ್‌ಗೆ ಮರಳಿವೆ.

2004 ಜನವರಿ 1 ರಂದು ಕೇಂದ್ರ ಸರ್ಕಾರ ಒಪಿಎಸ್ ವ್ಯವಸ್ಥೆ ರದ್ದುಪಡಿಸಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್‌ ) ಜಾರಿಗೆ ತಂದಿತ್ತು. ಇದರನ್ವಯ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್‌ಪಿಎಸ್‌ಗೆ ಒಳಪಟ್ಟಿದ್ದರು. ಎನ್‌ಪಿಎಸ್‌ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಯನ್ನು(ಯುಪಿಎಸ್‌) ಕೇಂದ್ರ ಸರ್ಕಾರ ಘೋಷಿಸಿತ್ತು. 2025 ಏಪ್ರಿಲ್ 1 ರಿಂದ ನೌಕರರು ಎನ್‌ಪಿಎಸ್‌ ಅಥವಾ ಯುಪಿಎಸ್ ನಲ್ಲಿ ಮುಂದುವರಿಯುವ ಕುರಿತು ಆಯ್ಕೆ ಮಾಡುವ ಅವಕಾಶ ನೀಡಿತ್ತು.

ಎನ್‌ಪಿಎಸ್‌ ಅಂದರೇನು?

ಹಳೆಯ ಪಿಂಚಣಿ ಪರಿಷ್ಕರಿಸಿ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಯನ್ನು ಕೇಂದ್ರ ಸರ್ಕಾರ 2004 ರಲ್ಲಿ ಜಾರಿಗೊಳಿಸಿದೆ. ಸದ್ಯ ಇದರಡಿ ರಾಜ್ಯದ ಸುಮಾರು ಅಂದಾಜು 4ಲಕ್ಷ ಉದ್ಯೋಗಿಗಳು ಇದ್ದಾರೆ.

ಎನ್‌ಪಿಎಸ್‌ ಯೋಜನೆಯಡಿ ನೌಕರರ ಮೂಲ ವೇತನ ಹಾಗೂ ತುಟ್ಟಿಭತ್ಯೆಯಲ್ಲಿ ಶೇ.10ರಷ್ಟು ವೇತನ ಕಡಿತವಾಗಲಿದೆ. ಇದಕ್ಕೆ ಸರ್ಕಾರ ಶೇ.14 ರಷ್ಟು ಕೊಡುಗೆ ನೀಡುತ್ತದೆ. ಒಟ್ಟು ಕ್ರೂಢೀಕರಣವಾದ ಶೇ.24 ರಷ್ಟು ವಂತಿಕೆಯನ್ನು ಕೇಂದ್ರ ಸರ್ಕಾರ ಸ್ವಾಮ್ಯದ ಎಲ್‌ಐಸಿ, ಎಸ್‌ಬಿಐ ಹಾಗೂ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ ಯಲ್ಲಿ ಹೂಡಿಕೆ ಮಾಡಲಿದೆ. ಷೇರು ಮಾರುಕಟ್ಟೆಯ ಬೆಳವಣಿಗೆ ಆಧಾರದ ಮೇಲೆ ನಿವೃತ್ತಿಯ ನಂತರ ನೌಕರರಿಗೆ ಪಿಂಚಣಿ ನಿಗದಿಯಾಗಲಿದೆ. ಹಾಗಾಗಿ ಎನ್‌ಪಿಎಸ್‌ ನಿವೃತ್ತ ನೌಕರರ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ.

ಹೀಗೆ ನಿವೃತ್ತ ನೌಕರರಿಂದ ಸಂಗ್ರಹಿಸಿದ ಒಟ್ಟು ವಂತಿಗೆಯ ಶೇ.60ರಷ್ಟು ಹಣವನ್ನು ನಿವೃತ್ತಿಯ ಬಳಿಕ ಒಂದೇ ಕಂತಿನಲ್ಲಿ ನೀಡಲಾಗುತ್ತದೆ. ಉಳಿದ ಶೇ.40ರಷ್ಟು ಹಣವನ್ನು ಮತ್ತೆ ಹೂಡಿಕೆ ಮಾಡಿ, ಮಾರುಕಟ್ಟೆ ಬೆಳವಣಿಗೆ ಆಧಾರದ ಮೇಲೆ ಪಿಂಚಣಿ ರೂಪದಲ್ಲಿ ನೀಡುತ್ತದೆ. ಉದಾಹರಣೆಗೆ 1.20 ಲಕ್ಷ ರೂ. ವೇತನ ಪಡೆಯುವ ಸರ್ಕಾರಿ ನೌಕರರೊಬ್ಬರು ಎನ್‌ಪಿಎಸ್‌ ಯೋಜನೆಯಡಿ ನಿವೃತ್ತಿ ಬಳಿಕ ಕೇವಲ 5 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ. ಒಮ್ಮೆ ನಿಗದಿಯಾದ ಪಿಂಚಣಿ ದರ ಜೀವಿತಾವಧಿವರೆಗೆ ಮುಂದುವರಿಯಲಿದೆ.

Read More
Next Story