
ಸರ್ಕಾರದ ಆದೇಶದ ನಡುವೆಯೂ ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವ ಆ್ಯಪ್ ಆಧಾರಿತ ಟ್ಯಾಕ್ಸಿಗಳು
ಮನಬಂದಂತೆ ಹಣ ವಸೂಲಿ ಮಾಡದಂತೆ ಸರ್ಕಾರದ ಆದೇಶದ ನಡುವೆಯೂ ಒಂದು ಕಿ.ಮೀ ಪ್ರಯಾಣಕ್ಕೆ 100 ರೂಪಾಯಿಯಷ್ಟು ಮತ್ತು ಸಂಜೆ-ಬೆಳಗ್ಗೆ ಹೆಚ್ಚಾಗಿ ಸಂಚಾರ ದಟ್ಟಣೆ ಅವಧಿಯಲ್ಲಿ ಏಕಾಏಕಿ ದುಪ್ಪಟ್ಟು ದರವನ್ನು ಪ್ರಶ್ನಿಸಲಾಗಿದೆ.
ಬೈಕ್ ಟ್ಯಾಕ್ಸಿಗೆ ತಾತ್ಕಾಲಿಕ ಬ್ರೇಕ್ ಬೀಳುತ್ತಿದ್ದಂತೆ ಓಲಾ, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಟ್ಯಾಕ್ಸಿಗಳು ಪ್ರಯಾಣಿಕರಿಗೆ ಬರೆ ಎಳೆಯುತ್ತಿದ್ದು, ಮನಬಂದಂತೆ ಸುಲಿಗೆ ಮಾಡುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರತೊಡಗಿದೆ.
ಮನಬಂದಂತೆ ಹಣ ವಸೂಲಿ ಮಾಡದಂತೆ ಸರ್ಕಾರದ ಆದೇಶದ ನಡುವೆಯೂ ಒಂದು ಕಿ.ಮೀ ಪ್ರಯಾಣಕ್ಕೆ 100 ರೂಪಾಯಿಯಷ್ಟು ಮತ್ತು ಸಂಜೆ-ಬೆಳಗ್ಗೆ ಹೆಚ್ಚಾಗಿ ಸಂಚಾರ ದಟ್ಟಣೆ ಅವಧಿಯಲ್ಲಿ ಏಕಾಏಕಿ ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿರುವ ಸಾಕಾಷ್ಟು ದೂರುಗಳು ಬಂದಿವೆ. ಮನಸೋಇಚ್ಛೆ ದರ ಏರಿಕೆ ಮಾಡಿ ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯಾಯಾಲಯದ ಆದೇಶದ ಬಳಿಕ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲಾಗಿದೆ. ಇದು ಓಲಾ, ಉಬರ್‌ಗಳಿಗೆ ಹಣ ವಸೂಲಿಗೆ ಹಬ್ಬವಾದರೆ, ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಪ್ರತಿ ನಿತ್ಯ ಬೈಕ್ ಟ್ಯಾಕ್ಸಿ ಸೇವೆ ಬಳಸುವವರ ಗೋಳಾಟ ಹೆಚ್ಚಾಗಿದೆ. ಬೈಕ್ ಟ್ಯಾಕ್ಸಿ ಚಾಲಕರ ಹೆಚ್ಚುವರಿ ಗಳಿಕೆಗೂ ಕತ್ತರಿ ಬಿದ್ದಿದ್ದೆ. ಹಲವು ಜನರು ಬೈಕ್ ಟ್ಯಾಕ್ಸಿ ನಿಲ್ಲಿಸಿರುವುದರಿಂದ ಪ್ರತಿ ನಿತ್ಯ ಪ್ರಯಾಣದ ಖರ್ಚು ಅಧಿಕವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆಟೋ, ಓಲಾ, ಉಬರ್‌ದವರು ದುಬಾರಿ ಹಣ ಕೇಳುತ್ತಾರೆ ಎಂಬ ಕಾರಣಕ್ಕಾಗಿ ಅನೇಕರು ಪ್ರತಿನಿತ್ಯವೂ ಬೈಕ್ ಟ್ಯಾಕ್ಸಿ ಸೇವೆಯನ್ನೇ ಅವಲಂಬಿಸಿದ್ದರು. ಟ್ರಾಫಿಕ್ ಜಂಟಾಟದಲ್ಲೂ ಈ ಸೇವೆಯನ್ನು ಹಲವರು ಮೆಚ್ಚಿದ್ದರು. ಪ್ರಯಾಣದ ಖರ್ಚು ಕೂಡ ಕಡಿಮೆ ಎಂಬ ಕಾರಣಕ್ಕೆ ಕಚೇರಿಗೆ ಹೋಗುವವರು ಕೂಡ ಈ ಸೇವೆಯ ಮೊರೆ ಹೋಗಿದ್ದರು. ಈಗ ಬೈಕ್ ಟ್ಯಾಕ್ಸಿ ನಿಷೇಧದಿಂದ ಹಲವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಹೋಲಿಸಿದರೆ ಈಗ ಪ್ರಯಾಣದ ಖರ್ಚು ದುಪ್ಪಟ್ಟಾಗುತ್ತಿದೆ ಎಂದು ಬೇಸರ ಹೊರಹಾಕುತ್ತಿದ್ದಾರೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಐಟಿ ಉದ್ಯೋಗಿ ವೀಣಾ, ದೈನಂದಿನ ದಿನಚರಿ ಮತ್ತು ಹಣಕಾಸಿನ ಮೇಲೆ ಒತ್ತಡ ಬೀರಿದೆ. ಬೈಕ್ ಟ್ಯಾಕ್ಸಿಗಳನ್ನು ನಿರ್ಬಂಧಿಸಲಾಗಿದೆ. ನಗರದಲ್ಲಿ ಸರಿಯಾದ ರಸ್ತೆಗಳಿಲ್ಲದೆ, ಅಗೆದ ಮತ್ತು ಕಿರಿದಾದ ರಸ್ತೆಗಳು, ಕಾಣೆಯಾದ ಯು ಟರ್ನ್‌ಗಳು, ಅನೇಕ ಪ್ರದೇಶಗಳಲ್ಲಿ ಶೂನ್ಯ ಮೆಟ್ರೋ ಪ್ರವೇಶ, ಸೀಮಿತ ಸಾರ್ವಜನಿಕ ಬಸ್‌ಗಳು, ನಡೆಯಲು ಪಾದಚಾರಿ ಮಾರ್ಗಗಳಿಲ್ಲ. ಈಗ ಬೆಳಿಗ್ಗೆ 8 ಗಂಟೆಯೂ ಮುನ್ನವೇ ಬೆಂಗಳೂರು ಉಸಿರುಗಟ್ಟಿದೆ. ಬೈಕ್ ಟ್ಯಾಕ್ಸಿ ನಿಷೇಧದಿಂದಾಗಿ ಆಟೋ ಹಿಡಿಯಬೇಕಾಯಿತು. ಈಗ ಪ್ರಯಾಣಕ್ಕಾಗಿ ಪ್ರತಿದಿನ 500 ರೂಪಾಯಿ ಪಾವತಿಸಬೇಕಾಗಿದೆ. 70ರಿಂದ 80 ರೂಪಾಯಿಗೆ ಬೈಕ್ ಟ್ಯಾಕ್ಸಿಗಳನ್ನು ಬುಕ್ ಮಾಡಿ ಹೋಗಲಾಗುತ್ತಿತ್ತು. ಆದರೆ ನಿಷೇಧದಿಂದಾಗಿ ಯಾವುದೇ ಆಟೋಗಳು ರಾತ್ರಿ ಸಮಯದಲ್ಲಿ ಕರೆದಲ್ಲಿಗೆ ಬರುತ್ತಿಲ್ಲ. ಮೀಟರ್ ಹಾಕಲ್ಲ ಎಂದು ನೇರವಾಗಿ ಹೆಚ್ಚು ಹಣ ಕೇಳ್ತಾರೆ. ಒಟ್ಟಾರೆ ಸರ್ಕಾರದ ನಿಯಮಗಳು ಯಾವಾಗಲೂ ಸಾಮಾನ್ಯ ಜನರ ಜೀವನವನ್ನು ಮತ್ತಷ್ಟು ಕಷ್ಟಕರವಾಗಿಸುತ್ತವೆ ಎಂದು ಹಿಡಿಶಾಪ ಹಾಕಿದ್ದಾರೆ.
ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದ ಚಾಲಕ ಗಣೇಶ್ ಮಾತನಾಡಿ, ಬೈಕ್ ಟ್ಯಾಕ್ಸಿ ಕೆಲವರು ಆಪದ್ಬಾಂಧವ ರೀತಿಯಲ್ಲಿತ್ತು. ಹಣಕಾಸು ಸಮಸ್ಯೆ ಉಂಟಾದಾಗ ಬೈಕ್ ಓಡಿಸಿಕೊಂಡು ಒಂದಷ್ಟು ಸಂಪಾದನೆ ಮಾಡಲಾಗುತ್ತಿತ್ತು. ನಮ್ಮಂತಹ ಕೂಲಿ ಕೆಲಸ ಮಾಡುವವರಿಗೆ ಆ ಕೆಲಸ ಇಲ್ಲದಿದ್ದಾಗ ಬೈಕ್ ಟ್ಯಾಕ್ಸಿ ವರದಾನವಾಗಿತ್ತು. ಆದರೆ, ಇದೀಗ ನಿಷೇಧ ಮಾಡಿರುವುದರಿಂದ ಪರ್ಯಾಯ ಗಳಿಕೆಗೆ ಸಮಸ್ಯೆಯಾಗಿದೆ. ಜೋಮೋಟೋ, ಸ್ವಿಗಿಯಲ್ಲಿ ಅಂತಹ ಲಾಭದಾಯಕ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾರಿಗೆ ಇಲಾಖೆಗೆ ದೂರು:
ಓಲಾ ಮತ್ತು ಉಬರ್ ಎರಡು ಕಿ.ಮೀಗಿಂತ ಕಡಿಮೆ ದೂರವಿದ್ದರೂ ಕನಿಷ್ಠ 100 ಪ್ರಯಾಣ ಶುಲ್ಕ ವಿಧಿಸುತ್ತಿದ್ದವು. 1/1.5 ಕಿಮೀ ದೂರಕ್ಕೆ ಓಲಾ, ಉಬರ್ ಆ್ಯಪ್‌ಗಳಲ್ಲಿ ರೈಡ್ ದರ 60-65 ಮತ್ತು ಪ್ರವೇಶ ಶುಲ್ಕ ೪೦ ರೂಪಾಯಿ ಸೇರಿದಂತೆ ಒಟ್ಟು 100-105 ದರವನ್ನು ತೋರಿಸುತ್ತಿತ್ತು. ಈ ಬಗ್ಗೆ ಹಲವು ಗ್ರಾಹಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು.
ಗ್ರಾಹಕರಿಂದ ೧೦೦ ರೂಪಾಯಿ ಪಡೆದರೆ ನಮಗೆ ೬೦ ರೂಪಾಯಿ ನೀಡಿ ಉಳಿದ ೪೦ ರೂಪಾಯಿ ಕಮಿಷನ್‌ಗೆ ತೆಗೆದುಕೊಳ್ಳುತ್ತಾರೆ. ಪ್ರಯಾಣ ಆರಂಭಕ್ಕೂ ಮುನ್ನ ದರ ತಿಳಿದಿರುವುದಿಲ್ಲ. ಪ್ರಯಾಣ ಕೊನೆಯಾದ ಬಳಿಕ ಹಣ ಪಾವತಿಸುವ ಸಂದರ್ಭದಲ್ಲಿ ಆ್ಯಪ್‌ಗಳು ವಿಧಿಸಿರುವ ದರವನ್ನು ಕಂಡು ನಮಗೆ ಅಚ್ಚರಿಯಾಗುತ್ತದೆ ಎಂಬುದು ಓಲಾ ಜತೆ ಒಪ್ಪಂದ ಮಾಡಿಕೊಂಡ ಹಲವು ಚಾಲಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ:
ಸಾರಿಗೆ ಇಲಾಖೆಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ ಬರೆದು ಮನಸೋಇಚ್ಛೆ ವಸೂಲಿ ಮಾಡುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಆಪ್ ಆಧಾರಿತ ಆಟೋಗಳಾಗಲಿ ಅಥವಾ ಇನ್ನಾವುದೇ ಮಾದರಿಯ ಆಟೋಗಳಾಗಲಿ ಅಂತಹವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಬಾಡಿಗೆಗೆ ನಿರಾಕರಣೆ, ಅಧಿಕ ಬಾಡಿಗೆಗೆ ಒತ್ತಾಯಿಸುವ ಆಟೋ ಚಾಳಕರ ವಿರುದ್ಧ ಪ್ರಕರಣಗಳನ್ನು ಸಾರಿಗೆ ಇಲಾಖೆ ದಾಖಲಿಸುತ್ತಿದೆ. ಆದರೂ, ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೂಡಲೇ ಪರಿಣಾಮಕಾರಿಯಾದ ಕಾರ್ಯ ಯೋಜನೆ ರೂಪಿಸಿ ತಪ್ಪಿತಸ್ಥ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.