ಪೆನ್‌ ಡ್ರೈವ್‌ ಪ್ರಕರಣ | ಸಂತ್ರಸ್ತೆಯರ ಹೇಳಿಕೆ ಪಡೆದ ಎಸ್‌ಐಟಿ
x
ಸಂಸದ ಪ್ರಜ್ವಲ್‌ ರೇವಣ್ಣ

ಪೆನ್‌ ಡ್ರೈವ್‌ ಪ್ರಕರಣ | ಸಂತ್ರಸ್ತೆಯರ ಹೇಳಿಕೆ ಪಡೆದ ಎಸ್‌ಐಟಿ

ಸಿಐಡಿ ಎಡಿಜಿಪಿ ಬಿಜಯ್‌ ಕುಮಾರ್ ಸಿಂಗ್ ನೇತೃತ್ವದಲ್ಲಿ ರಚಿಸಲಾಗಿರುವ ಎಸ್‌ಐಟಿಗೆ ಈಗಾಗಲೇ 20 ಅಧಿಕಾರಿಗಳನ್ನು ನಿಯೋಜಿಸಲಾಗಿದೆ.


Click the Play button to hear this message in audio format

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಎಸ್‌ಐಟಿ(ವಿಶೇಷ ತನಿಖಾ ತಂಡ) ಅಧಿಕಾರಿಗಳು, ಸಂತ್ರಸ್ತೆಯರು ಎನ್ನಲಾದ ಇಬ್ಬರು ಮಹಿಳೆಯರಿಂದ ಸೋಮವಾರ ಮರು ಹೇಳಿಕೆ ಪಡೆದುಕೊಂಡರು.

ಸಿಐಡಿ ಎಡಿಜಿಪಿ ಬಿಜಯ್‌ ಕುಮಾರ್ ಸಿಂಗ್ ನೇತೃತ್ವದಲ್ಲಿ ರಚಿಸಲಾಗಿರುವ ಎಸ್‌ಐಟಿಗೆ ಈಗಾಗಲೇ 20 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ. ಪೆನ್ನೇಕರ್ ಹಾಗೂ ಸೀಮಾ ಲಾಡ್ಕರ್ ಸಹ ತಂಡದಲ್ಲಿದ್ದಾರೆ. ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಕಡತಗಳನ್ನು ಈಗಾಗಲೇ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ. ದೂರು ನೀಡಿದ್ದ ಇಬ್ಬರು ಸಂತ್ರಸ್ತೆಯರನ್ನು ಇಲ್ಲಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಸೋಮವಾರ ಕರೆಸಿಕೊಂಡಿದ್ದ ಎಸ್‌ಐಟಿ ಅಧಿಕಾರಿಗಳು, ಅವರಿಬ್ಬರಿಂದ ಮರು ಹೇಳಿಕೆ ಪಡೆದುಕೊಂಡಿರುವುದಾಗಿ ಮೂಲಗಳು ಹೇಳಿವೆ.

'ಮನೆ ಕೆಲಸದ ಮಹಿಳೆ ನೀಡಿರುವ ಪ್ರಾಥಮಿಕ ಮಾಹಿತಿ ಆಧರಿಸಿ ಪ್ರಕರಣ ದಾಖಲಾಗಿದೆ. ಇದೀಗ, ಎಸ್‌ಐಟಿ ತನಿಖೆ ಶುರುವಾಗಿದೆ. ಮಹಿಳೆ ಮೇಲಾಗಿರುವ ದೌರ್ಜನ್ಯದ ಸಂಪೂರ್ಣ ಮಾಹಿತಿ ತನಿಖೆಗೆ ಅಗತ್ಯವಿದೆ. ಹೀಗಾಗಿ, ಸಂತ್ರಸ್ತೆಯರಿಂದ ಮರು ಹೇಳಿಕೆ ಪಡೆಯಲಾಗಿದೆ. ಹೇಳಿಕೆ ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ' ಎಂದು ಮೂಲಗಳು ತಿಳಿಸಿವೆ.

ವಿಡಿಯೊ ಪರಿಶೀಲನೆಗೆ ಪ್ರತ್ಯೇಕ ತಂಡ

'ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತ್ರ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳ ಬಗ್ಗೆ ಪರಿಶೀಲನೆ ನಡೆಸಲು ಪ್ರತ್ಯೇಕ ತಂಡ ರಚಿಸಲಾಗಿದ್ದು, ಮಾಹಿತಿ ಕಲೆಹಾಕುವ ಕೆಲಸ ಪ್ರಗತಿಯಲ್ಲಿದೆ' ಎಂದು ಮೂಲಗಳು ತಿಳಿಸಿವೆ.

'ಮಹಿಳೆಯರ ಮೇಲೆ ದೌರ್ಜನ್ಯವಾಗಿರುವುದು ಕೆಲ ವಿಡಿಯೋಗಳಿಂದ ಗೊತ್ತಾಗುತ್ತಿದೆ. ಆದರೆ, ಅಸಲಿ ವಿಡಿಯೋ ಅಗತ್ಯವಿದೆ. ಅವು ಎಲ್ಲಿವೆ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ವಿಡಿಯೋದಲ್ಲಿರುವ ಮಹಿಳೆಯರ ಹೇಳಿಕೆಯೂ ಅತ್ಯಗತ್ಯ. ಮಹಿಳೆಯರ ವಿವರಗಳು ಲಭ್ಯವಾಗುತ್ತಿದ್ದಂತೆ, ಅವರಿಂದ ಹೇಳಿಕೆ ಪಡೆಯಲು ಪ್ರಯತ್ನಿಸಲಾಗುವುದು. ನಂತರ, ವಿಡಿಯೋ ಆಧರಿಸಿ ಪ್ರತ್ಯೇಕ ಪ್ರಕರಣಗಳು ದಾಖಲಾಗಲಿವೆ. ಬಳಿಕವೇ ಪ್ರಕರಣಗಳ ತನಿಖೆ ಎಸ್‌ಐಟಿಗೆ ವರ್ಗಾವಣೆ ಆಗಲಿದೆ' ಎಂದು ಹೇಳಿವೆ.

ಏನಿದು ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌?

ಹಾಸನ ಸಂಸದ ಹಾಗೂ ಸದ್ಯ ಲೋಕಸಭಾ ಚುನಾವಣೆಯ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿಡಿಯೋಗಳು ಪೆನ್‌ಡ್ರೈವ್‌ನಲ್ಲಿ ಇದೆ ಎನ್ನಲಾಗಿದೆ. ಇದರ ಬೆನ್ನಲ್ಲಿಯೇ ರಾಜ್ಯ ಮಹಿಳಾ ಆಯೋಗ ಸರ್ಕಾರಕ್ಕೆ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಈ ಹಿನ್ನೆಲೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ತನಿಖೆ ನಡೆಯುತ್ತಿದೆ. ಅದಲ್ಲದೇ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌ಡಿ ರೇವಣ್ಣ ಮೇಲೆ ಪ್ರತ್ಯೇಕ ಲೈಂಗಿಕ ದೌರ್ಜನ್ಯ ಕೇಸ್‌ ಕೂಡ ದಾಖಲಾಗಿದೆ.

ಪಕ್ಷದಿಂದ ಉಚ್ಚಾಟನೆ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು ಎಂಬ ಆರೋಪ ಮಾಡಿದ್ದ ಸಾವಿರಾರು ಅಶ್ಲೀಲ ವಿಡಿಯೋ ವೈರಲ್ ಆಗಿದ್ದವು. ಈ ಹಿನ್ನೆಲೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಮ್ಮ ಮೊಮ್ಮಗನನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಆದೇಶಿಸಿದ್ದಾರೆ.

Read More
Next Story