ಪ್ರಜ್ವಲ್‌ ಪೆನ್‌ ಡ್ರೈವ್ ಪ್ರಕರಣ | ವಿದೇಶದಿಂದಲೇ ಫಸ್ಟ್ ರಿಯಾಕ್ಷನ್‌: ಎಸ್‌ಐಟಿಗೆ ವಾರ ಸಮಯ ಕೇಳಿದ ಪ್ರಜ್ವಲ್‌
x
ವಿದೇಶದಿಂದಲೇ ಪ್ರಜ್ವಲ್ ರೇವಣ್ಣ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

ಪ್ರಜ್ವಲ್‌ ಪೆನ್‌ ಡ್ರೈವ್ ಪ್ರಕರಣ | ವಿದೇಶದಿಂದಲೇ ಫಸ್ಟ್ ರಿಯಾಕ್ಷನ್‌: ಎಸ್‌ಐಟಿಗೆ ವಾರ ಸಮಯ ಕೇಳಿದ ಪ್ರಜ್ವಲ್‌

ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ ಎಂದು ಪ್ರಜ್ವಲ್‌ ಟ್ವೀಟ್‌ ಮಾಡಿದ್ದಾರೆ


ಇಡೀ ದೇಶದಲ್ಲಿ ಸುದ್ದಿಯಾಗಿರುವ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೇ ಮೊದಲ ಬಾರಿಗೆ ಪ್ರಜ್ವಲ್‌ ರೇವಣ್ಣ ಪ್ರತಿಕ್ರಿಯಿಸಿದ್ದು, ಸದ್ಯದಲ್ಲೇ ಸತ್ಯ ಹೊರಬರಲಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಆರೋಪಿ ಹಾಗೂ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದು ಹೇಳಿದ್ದಾರೆ.

ಅಲ್ಲದೆ ತಮ್ಮ ವಕೀಲರ ಹೇಳಿಕೆಯನ್ನೂ ಟ್ವೀಟ್‌ ಜೊತೆ ಬಿಡುಗಡೆ ಮಾಡಿದ್ದು, ಆ ಪತ್ರದಲ್ಲಿ ಎಸ್‌ಐಟಿ ಎದುರು ಹಾಜರಾಗಲು ಏಳು ದಿನಗಳ ಸಮಯವನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ.

ವಕೀಲರ ಪತ್ರ ಈ ಕೆಳಗಿನಂತಿದೆ;

“ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಮನೆಯ ಮೇಲೆ ತಮ್ಮ ಕಚೇರಿಯಿಂದ ಕಳುಹಿಸಿರುವ ನೋಟಿಸನ್ನು ಅಂಟಿಸಿರುವ ಬಗ್ಗೆ ನನಗೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಕುಟುಂಬದವರಿಂದ ಬಂದ ಮಾಹಿತಿ ಪ್ರಕಾರ ಕಲಂ 41 (ಎ) ಸಿ.ಆರ್.ಪಿ.ಸಿ ದಿನಾಂಕ: 30-04-2024ರ ತಮ್ಮ ನೋಟಿಸ್ ನಲ್ಲಿ ತಾವು ದಿನಾಂಕ: 01-05-2024 ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿರುತ್ತೀರಿ. ಆದರೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರೇವಣ್ಣ ರವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು ಅವರಿಗೆ ನೋಟಿಸ್‌ನ ಬಗ್ಗೆ ವಿಷಯ ತಿಳಿಸಿದ್ದು, ನನ್ನ ಕಕ್ಷಿದಾರರು ಬೆಂಗಳೂರಿಗೆ ಬಂದು ತಮ್ಮ ಮುಂದೆ ನೋಟಿಸ್‌ನ ಸೂಚನೆಯಂತೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ತಿಳಿಸಿದ್ದು, ನನ್ನ ಕಕ್ಷಿದಾರರಿಗೆ ಸುಮಾರು 7 ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗಾಗಿ ಹಾಜರಾಗಲು ಅವಕಾಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನನ್ನ ಕಕ್ಷಿದಾರರ ಪರವಾಗಿ ಕೋರುತ್ತೇನೆ.”

ತಾನು ಮಾಡಿರುವ ಟ್ವೀಟ್‌ ಪೋಸ್ಟಿಗೆ ಯಾರೂ ಪ್ರತಿಕ್ರಿಯೆ ನೀಡದಂತೆ ಪ್ರಜ್ವಲ್‌ ನಿರ್ಬಂಧಿಸಿದ್ದು, ಪಕ್ಷ ಈಗಾಗಲೇ ಅವರನ್ನು ಅಮಾನತು ಮಾಡಿದೆ.

ಪ್ರಜ್ವಲ್‌ ರೇವಣ್ಣ ಜರ್ಮನಿಯಿಂದ ಮೇ 3ಕ್ಕೆ ರಿಟರ್ನ್‌

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರಜ್ವಲ್‌ ರೇವಣ್ಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಪ್ರಜ್ವಲ್ ರೇವಣ್ಣ ಫ್ರಾಂಕ್‌ಫರ್ಟ್ (ಜರ್ಮನಿ) ನಿಂದ ಬೆಂಗಳೂರಿಗೆ ಹಿಂತಿರುಗಲು ಟಿಕೆಟ್ ಕಾಯ್ದಿರಿಸಿದ್ದು ಮೇ 3ರಂದು ತಡರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಜ್ವಲ್ ಮೇ 4ರಂದು ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾಗಲು ಯೋಜಿಸುತ್ತಿರುವುದಾಗಿ ತಿಳಿದುಬಂದಿದೆ. ಆರೋಪಿಯನ್ನು ವಿಮಾನ ನಿಲ್ದಾಣದಿಂದಲೇ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಿಆರ್‌ಪಿಸಿಎಸ್ ಸೆಕ್ಷನ್ 41 ಎ ಅಡಿಯಲ್ಲಿ ಎಸ್‌ಐಟಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಮತ್ತು ವ್ಯಕ್ತಿಯು 24 ಗಂಟೆಗಳ ಒಳಗೆ ಅಧಿಕಾರಿಗಳ ಮುಂದೆ ಹಾಜರಾಗಬೇಕಾಗುತ್ತದೆ ಎಂದು ಎಸ್‌ ಐಟಿ ನೋಟಿಸ್‌ನಲ್ಲಿ ತಿಳಿಸಿತ್ತು.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮಂಗಳವಾರ ಆರೋಪಿಗೆ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಗಳ ಒಳಗೆ ತನಿಖೆಗೆ ಹಾಜರಾಗುವಂತೆ ಸೂಚಿಸಿತ್ತು. ಆರೋಪಿಯ ತಂದೆ, ಜೆಡಿಎಸ್ ಶಾಸಕ ಎಚ್.ಡಿ . ರೇವಣ್ಣಗೂ ನೋಟಿಸ್ ನೀಡಲಾಗಿದೆ. ಅವರ ಕೆಲಸದಾಕೆ ಸಲ್ಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಎರಡನೇ ಆರೋಪಿಯಾಗಿದ್ದಾರೆ.

Read More
Next Story