ಸರೋದ್‌ ಮಾಂತ್ರಿಕ ರಾಜೀವ್ ʻತಾರಾʼಲೋಕದಲ್ಲಿ ಲೀನ, ಅʻನಾಥʼ ವಾದ ಸಪ್ತಸ್ವರ ಲೋಕ
x

ಸರೋದ್‌ ಮಾಂತ್ರಿಕ ರಾಜೀವ್ ʻತಾರಾʼಲೋಕದಲ್ಲಿ ಲೀನ, ಅʻನಾಥʼ ವಾದ ಸಪ್ತಸ್ವರ ಲೋಕ


ಈ ಆಘಾತವನ್ನು ಅರಗಿಸಿಕೊಳ್ಳುವುದು ಕಷ್ಟ. ನಮ್ಮೆಲ್ಲರ ನೆಚ್ಚಿನ ಸರೋದ್‌ ಮಾಂತ್ರಿಕ ಕನ್ನಡಿಗ ರಾಜೀವ್‌ ತಾರಾನಾಥ್‌, ತಾರೆಗಳ ಲೋಕದಲ್ಲಿ ಲೀನ. ಇನ್ನು ಅವರ ಸರೋದ್‌ ನುಡಿಸಾಣಿಕೆ ನೆನಪು ಮಾತ್ರ. ವಿಶ್ವದ ನಾನಾ ಭಾಗಗಳಲ್ಲಿ ಜೀವಿಸಿ, ತಮ್ಮ ಗೋಳದ ಮೇಲೊಂದು ಸುತ್ತಿನಲ್ಲಿ ಕೊಟ್ಯಾಂತರ ಸಂಗೀತದ ಮನಸ್ಸುಗಳನ್ನು ತಣಿಸಿದ ರಾʻಜೀವʼ, ಈ ಕ್ಷಣದಿಂದ ಕೇವಲ ನೆನಪು ಮಾತ್ರ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದ ಮುಖ್ಯಸ್ಥರಾಗಿದ್ದ ರಾಜೀವ್‌ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮಣ್ಣಿಗೆ ಹಿಂದಿರುಗಿ ಮೈಸೂರಿನಲ್ಲಿ ನೆಲೆ ನಿಂತಿದ್ದರು. ಇಲ್ಲಿಯೇ ನೂರಾರು ಶಿಷ್ಯರಿಗೆ ಸರೋದ್‌ ನುಡಿಸಾಣಿಕೆ ಪಟ್ಟುಗಳನ್ನು ದಾರೆ ಎರೆಯುತ್ತಿದ್ದರು. ನಾನೇರುವೆತ್ತರಕೆ ನೀನೇರಬಲ್ಲೆಯಾ ಎಂಬಂತೆ ಎತ್ತರೆತ್ತರೆತ್ತರಕ್ಕೆ ಏರುತ್ತಾ, ಬಾನಂಗಳದಲ್ಲಿ ಮರೆಯಾದರು. “ಎಂದರೋ ಮಹಾನುಭಾವುಲು ಅಂದಿರಿಕಿ ವಂದನಂ” ಎನ್ನದೆ ಬೇರೆ ಮಾತು ಹೊರಡುತ್ತಿಲ್ಲ.

ಕೆಲದಿನಗಳ ಹಿಂದೆ ತಮ್ಮ ಮನೆಯಲ್ಲಿಯೇ ಬಿದ್ದು ತೊಡೆಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದ ರಾಜೀವ್‌ ತಾರಾನಾಥ್‌ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಂಗೀತದ ಅನಂತ ಲೋಕಲ್ಲಿ ಲೀನವಾದರು.

ಈಗ ಎಲ್ಲವೂ ಅವಸರದ ಕಾಲವಾಗಿರುವುದು ಅವರ ಅಂತಃಕರಣವನ್ನು ಕಲುಕಿದಂತೆ ತೋರುತ್ತಿತ್ತು. ಅವರು ಹೇಳಿದ ಮಾತುಗಳು ನೆನಪಾಗುತ್ತಿದೆ. “ಅವಸರದ ಬೆನ್ನೇರಿದರೆ, ಅವಸಾನ. ಅಂದರೆ ಪ್ರಚಾರದ ಹುಚ್ಚು ಹತ್ತಬಾರದು. ಸಂಗೀತಕ್ಕೆ ಸಾಹಿತ್ಯವೇ ಪ್ರಧಾನ, ಆದರೆ ಬಹಳಷ್ಟು ಮಂದಿ ಅವಸರದಲ್ಲಿದ್ದಾರೆ. ನಮ್ಮ ನಡುವೆ ಒಂದು ಬೆಚ್ಚಗಿನ ಅನ್ಯೋನ್ಯತೆ ಇರಬೇಕು. ಅದು ಸಂಗೀತವಾದರೂ ಆಗಿರಬಹುದು, ಸಾಹಿತ್ಯವಾದರೂ ಅಗಿರಬಹುದು. ಅವು ನಮಗೆ ನೆಮ್ಮದೆ ನೀಡುತ್ತದೆ” ಎಂದು ಒಮ್ಮೆ ಹೇಳಿದ್ದು, ಈಗ, ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಅವಸರದ ಬೆನ್ನೇರಿದರೆ ಅವಸಾನವೆಂದಿದ್ದ, ರಾಜೀವ್‌ ತಾರಾನಾಥ್‌, ಅವಸರ, ಅವಸರವಾಗಿ ಹೇಳದೇ, ಕೇಳದೇ ನಮ್ಮನ್ನು ತೊರೆದು ಹೋಗಿರುವ ಈ ಸಂದರ್ಭದ ನ್ಯಾಸವನ್ನು ಹೇಗೆಂದು ಹೇಳುವುದು ಅರ್ಥವಾಗುತ್ತಿಲ್ಲ.

ರಾಜೀವ್‌ ತಾರಾನಾಥ್‌ ಅವರನ್ನು ಆಸ್ಪತ್ರೆಯಲ್ಲಿ ಕಂಡವರು ಹೇಳುವ ಸಂಗತಿಗಳನ್ನು ನೆನಪಿಸಿಕೊಂಡರೆ ಕರುಳು ಕಿವುಚಿದಂತಾಗುತ್ತದೆ. ಅವರನ್ನು ಯಾರೇ ಕಾಣಲು ಬಂದರೂ, ಅವರು ಕೇಳುತ್ತಿದ್ದ ಪ್ರಶ್ನೆಯೆಂದರೆ, “ಏನು ಹೊಸದಾಗಿ ಓದಿದ್ರಿ, ಏನು ಬರೆದ್ರಿ” ಎಂದೇ. ಯಾವುದಾದರೂ ಸಂಗೀತಗಾರರು ಬಂದರೆ “ತುಸು ಹಾಡ್ರಿ” ಎನ್ನುತ್ತಿದ್ದರಂತೆ. ಹಾಡಿದರೆ ತಾವು ಧ್ವನಿಗೂಡಿಸುತ್ತಿದ್ದರಂತೆ. ಹಾಡಿದ್ದು ಅವರ ಹೃದಯ ತಟ್ಟಿದರೆ, “ಶಹಭಾಷ್” ‌ ಎನ್ನುತ್ತಿದ್ದರಂತೆ. ಇಷ್ಟವಾಗದಿದ್ದರೆ, “ಇನ್ನಷ್ಟು ಸುಧಾರಿಸಬೇಕ್ರಿ” ಎಂದು ಮುಲಾಜಿಲ್ಲದೆ ಹೇಳುತ್ತಿದ್ದರಂತೆ. ಅಂದರೆ ಕೊನೆಯವರೆಗೂ ಸಂಗೀತ, ಸಾಹಿತ್ಯವನ್ನೇ ಉಸಿರಾಡಿ, ಉಸಿರು ನಿಲ್ಲಿಸಿದ ಮಹಾನ್‌ ಚೇತನ ರಾಜೀವ್‌ ತಾರಾನಾಥ್. ‌

ಇತ್ತೀಚೆಗೆ ಮೈಸೂರಿಗೆ ಸಂಗೀತ ಕಚೇರಿ ನೀಡಲು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕರಾದ ಪಂಡಿತ್‌ ವೆಂಕಟೇಶ ಕುಮಾರ್‌ ಅವರು ರಾಜೀವ್‌ ತಾರಾನಾಥರನ್ನು ಭೇಟಿಯಾಗಿದ್ದರಂತೆ. ಅವರೊಂದಿಗೆ ಸಂಗೀತದ ಬಗ್ಗೆಯೇ ಮಾತನಾಡಿದ ಸಂದರ್ಭದಲ್ಲಿ ಸಂಗೀತಗಾರರಿಬ್ಬರೂ, ದರ್ಬಾರಿ ಕಾನಡ, ಮುಲ್ತಾನಿ ರಾಗಗಳನ್ನು ಹಾಡಿ ಅಪೂರ್ವ ಸನ್ನಿವೇಶವೊಂದು ನಿರ್ಮಾಣವಾದಾಗ, ವೆಂಕಟೇಶ ಕುಮಾರ್‌ ಅವರು “ನೀವು ನಮ್ಮಂಥವರ ಸಲುವಾಗಿ ನೂರಾಒಂದು ವರ್ಷ ಇರಬೇಕು ಎಂದರಂತೆ. ಆದರೆ. ವೆಂಕಟೇಶ ಕುಮಾರ್‌ ಅವರ ಆಸೆ, ಭರವಸೆ ಈಡೇರಲಿಲ್ಲ. ಅದಕ್ಕಿಂತ ಹತ್ತು ವರ್ಷದ ಮುನ್ನವೇ ರಾಜೀವ್‌ ಸಂಗೀತಲೋಕವನ್ನು ಅನಾಥವಾಗಿಸಿ, ಅನಂತದಲ್ಲಿ ಲೀನರಾಗಿದ್ದಾರೆ.

ರಾಜೀವ್‌ ತಾರಾನಾಥರ ಬದುಕು, ನಡೆದುಬಂದ ದಾರಿ, ಅವರ ಬದುಕಿನ ಮೌಲ್ಯಗಳು, ಸಂಗೀತದ ಆರಾಧನೆ, ಅವರ ರಿಯಾಜ್‌ ಧ್ಯಾನ, ಅವರು ಉಸಿರಾಡಿದ ಸಂಗೀತ ಎಲ್ಲವೂ ಇಂದು ದಂತ ಕಥೆಯಂತೆ ಭಾಸವಾಗುತ್ತಿದೆ.

ಮೈಸೂರು ಅವರ ಜಗತ್ತಾದರೂ, ಜಗತ್ತೆಲ್ಲ ಮೈಸೂರಿಗೆ ಬಂದು ಅವರೊಂದಿಗೆ ಜುಗಲ್‌ ಬಂಧಿ ನಡೆಸುತ್ತಿತ್ತು. ರಾಜೀವ್‌ ತಾರಾನಾಥ್‌ ಅವರ ಬಳಿ ಮೂವತ್ತು ವರ್ಷಗಳಿಂದ ಸಂಗೀತ ಕಲಿಯುತ್ತಿರುವ ಅಹ್ಮದಾಬಾದಿನ ಸೋಹನ್‌ ನೀಲಕಂಠ ಅವರನ್ನು ನೋಡಲು ಬಂದು ಗುಜರಾತಿನ ಶ್ರೀಕಂಡ ತಯಾರಿಸಿ ಗುರುಗಳಿಗೆ ತಿನ್ನಿಸಿದ್ದರೆಂದು ಲೇಖಕ ಪತ್ರಕರ್ತ ಗಣೇಶ ಅಮೀನಗಢ ಇತ್ತೀಚೆಗೆ ತಮ್ಮ ಬರಹವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ಹಾಗೆಯೇ ಪುಣೆಯಿಂದ ಅನುಪಮ್‌ ಜೋಶಿ ಬಂದಿದ್ದರಂತೆ.

“ನಮ್ಮ ನಡುವಿನ ಹಿರಿಯ ಜೀವ, ರಾಜೀವ್ ತಾರಾನಾಥ್ ಅವರಿಗೆ ಈಗ ಒಂಬತ್ತು ದಶಮಾನ. ಪ್ರತಿಭಾವಂತ ಕಲಾವಿದರ ನಿಡಿದಾದ ಬಾಳು, ದೀರ್ಘಾಯುವಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಪರಂಪರೆಯ ಯಾನಕ್ಕೆ, ಅದರೊಳಗಿನ ಸೃಜನಶೀಲ ಪ್ರಯೋಗ ಮತ್ತು ಸಾಹಸಗಳಿಗೆ ಲಗತ್ತಾಗಿರುತ್ತದೆ. ಅಮೀರಖುಸ್ರೂ, ಎರಡನೇ ಇಬ್ರಾಹಿಂ ಆದಿಲಶಾಹಿ, ಅಬ್ದುಲ್ ಕರೀಂಖಾನ್, ಅಲ್ಲಾದಿಯಾ ಖಾನ್, ಕುಮಾರ ಗಂಧರ್ವ, ಪಂ. ತಾರಾನಾಥ, ಪಂ. ರವಿಶಂಕರ್, ಲತಾ ಮಂಗೇಶ್ಕರ್, ಮಹಮದ್‍ರಫಿ, ನೌಷಾದ್, ಅಮೀರಬಾಯಿ ಕರ್ನಾಟಕಿ, ಗುಬ್ಬಿಯ ವೀರಣ್ಣ-ಈ ಯಾರ ಬಾಳನ್ನು ಕಂಡರೂ ಈ ದಿಟ ಗೋಚರವಾಗುವುದು. ಸಾಹಿತ್ಯದಲ್ಲಿ ಮಲೆಯಾಳದ ವೈಕಂ, ಉರ್ದುವಿನ ಗಾಲಿಬ್, ಕನ್ನಡದ ಕಾರಂತ ಲಂಕೇಶ್ ತೇಜಸ್ವಿ ಮುಂತಾದವರ ಮಟ್ಟಿಗೂ ಇದು ನಿಜ. ಇವರೆಲ್ಲ ತಾವು ಆರಿಸಿಕೊಂಡ ಮಾಧ್ಯಮದಲ್ಲಿ ಕೇವಲ ಕಲಾವಿದರಾಗಿ ದುಡಿದವರಲ್ಲ. ಆ ಮಾಧ್ಯಮದ ಚೌಕಟ್ಟನ್ನೆ ಬದಲಿಸಿದವರು. ಒಂದು ಮಾಧ್ಯಮಕ್ಕೆ ಸೀಮಿತರಲ್ಲ. ಹಲವು ಮಾಧ್ಯಮಗಳಿಗೆ ಹರಿದಾಡಿದವರು. ಇವರಿಗೆ ನಿಯಮ ಅಥವಾ ಸೀಮೆಗಳಿರುವುದು ಕೇವಲ ಪಾಲಿಸುವುದಕ್ಕಲ್ಲ, ಸೀಮೋಲ್ಲಂಘನಕ್ಕೆ. ಹದ್ದುಗಳಿರುವುದು ಅನಹದ್ ಆಗುವುದಕ್ಕೆ. ‘ಅನಹದ್’-ಫಾರಸಿ ಶಬ್ದ. ಸಾಧಕರು ತಮ್ಮ ಆನುಭಾವಿಕ ಸಾಧನೆಯಲ್ಲಿ ಮಾಡುವ ಏರುಯಾನವನ್ನು ವಿವರಿಸಲು ಕಬೀರನು ಈ ಪದವನ್ನು ಬಳಸಿದನು. ಅವನ ಬಾಳೇ ಹಲವು ಬಗೆಯ ಸೀಮೋಲ್ಲಂಘನೆಗಳ ಮೊತ್ತ. ಆತ ತನ್ನ ಧರ್ಮದ ಸಾಂಸ್ಥಿಕ ಚೌಕಟ್ಟು ಬಿಟ್ಟು ಗುರುಪಂಥೀಯ ಅನುಭಾವಕ್ಕೆ ಚಲಿಸಿದವನು. ಹುಟ್ಟಿಬೆಳೆದ ಬನಾರಸ್ಸನ್ನು ತೊರೆದು ಗೋರಖಪುರಕ್ಕೆ ಪ್ರಸ್ಥಾನ ಮಾಡಿದವನು. ಅವನ ಗುರುವಾಗಲಿ ಶಿಷ್ಯರಾಗಲಿ ಅವನ ಧರ್ಮದವರಲ್ಲ. ಗಾಯನ ಕಾವ್ಯ ಅನುಭಾವ ನೇಕಾರಿಕೆಗಳಲ್ಲಿ ಆತ ಮಗ್ಗದಲ್ಲಿ ನೂಲೆಳೆಗಳು ಹಾಸುಹೊಕ್ಕಾಡುವಂತೆ ಸಮದರ್ಶನದಲ್ಲಿ ಅಲೆದಾಡಿದವನು. ಹಿಂದೂಸ್ತಾನಿ ಸಂಗೀತ ಪ್ರವರ್ತಕನಾದ ಅಮೀರ ಖುಸ್ರೂನಲ್ಲೂ ಇಂತಹವೇ ಚಹರೆಗಳಿವೆ. ಟರ್ಕಿಮೂಲದ ತಂದೆ-ಬ್ರಾಹ್ಮಣ ತಾಯಿಯ ಮಗನಾದ ಈತ, ದೆಹಲಿಯ ನಿಜಾಮುದ್ದೀನರ ಮುರೀದನಾದವನು. ರಾಗಗಳನ್ನು ಅರಸುತ್ತ ಹಿಂದೂಸ್ತಾನವನ್ನು ಅಲೆದವನು. ಮರಾಠಾ ರಾಜಕುಮಾರಿಯನ್ನು ವರಿಸಿದ ಕಿರಾಣ ಘರಾಣೆಯ ಅಬ್ದುಲ್ ಕರೀಂಖಾನರ ಬದುಕಿನಲ್ಲೂ ಇಂಥವೇ ಜೈವಿಕ ಕಲಾತ್ಮಕ ಸೀಮೋಲ್ಲಂಘನೆಗಳಿವೆ. ಇಂತಹವೇ ಜೈವಿಕ ಮತ್ತು ಕಲಾತ್ಮಕ ಸಂಕರ ಪರಂಪರೆಯ ಉಳಿ ಸುತ್ತಿಗೆಗಳಿಂದ ರಾಜೀವ ತಾರಾನಾಥರ ವ್ಯಕ್ತಿತ್ವ ಕಟೆಯಲ್ಪಟ್ಟಿತು. ಎಂತಲೇ ಅದು ಭಾರತದ ನಡಾವಳಿಯ ಭಾಗವಾಗಿರುವ ಬಹುತ್ವದ ಪರಂಪರೆಯ ಪವಿತ್ರ ಪ್ರತೀಕವಾಗಿದೆ.” ಎಂದು ತಮ್ಮ ಲೇಖನವೊಂದರಲ್ಲಿ ರಾಜೀವ್‌ ತಾರಾನಾಥರ ಕುರಿತು ಹೇಳಿರುವ ಖ್ಯಾತ ಲೇಖಕ, ಚಿಂತಕ ರಹಮತ್‌ ತರೀಕೆರೆ ಅವರ ಮಾತುಗಳು ಅರ್ಥಪೂರ್ಣವಾಗಿದೆ.

ರಾಜೀವ್‌ ತಾರಾನಾಥ್‌ ಹುಟ್ಟಿದ್ದು, ಬೆಂಗಳೂರಿನಲ್ಲಿ, ತಂದೆ ವೈದ್ಯ, ಸಾಹಿತಿ ಸಂಗೀತಾರಾಧಾಕರಾದ ಪಂಡಿತ್‌ ತಾರಾನಾಥ್. ‌ ತಾಯಿ ಸುಮತಿ. ತಾಯಿ ಸುಮತಿ ಬಾಯಿ ಆಗಿನ ದಿನಗಳಲ್ಲೇ ಬರಹಗಾರ್ತಿಯಾಗಿದ್ದರು. ಮನೆಯೇ ರಾಜೀವ್‌ ಸಂಗೀತದ ಮೊದಲ ಪಾಠಶಾಲೆ. ಸೆಂಟ್ರಲ್‌ ಕಾಲೇಜಿನಲ್ಲಿ ಬಿ ಎ (ಆನರ್ಸ್)‌, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ. ಎ ನಲ್ಲಿ ಮೊದಲ ಸ್ಥಾನ. Poetry of Eliot ಮಹಾ ಪ್ರಬಂಧಕ್ಕೆ ಡಾಕ್ಟೋರೇಟ್‌ ಪದವಿ. ಸವಣೂರು ಕೃಷ್ಣಾಚಾರ್ಯ ಅವರಲ್ಲಿ ಪ್ರಾರಂಭಿಕ ಸಂಗೀತದ ಶಿಕ್ಷಣ, ಒಂಭತ್ತನೇ ವಯಸ್ಸಿನಲ್ಲಿಯೇ ಬಾಗೇಶ್ರೀ ರಾಗ ಹಾಡಿ ಸಂಗೀತ ಪ್ರಿಯರನ್ನು ಮೆಚ್ಚಿಸಿದವರು ನಮ್ಮ ರಾಜೀವ್‌ ತಾರಾನಾಥ್. ‌ ಇವರು ಪುಣೆಯ Film and Television Institute of India ದಲ್ಲಿ ಚಿತ್ರ ಸಂಗೀತದ ಪಾಠ ಹೇಳಿದ್ದರೆಂಬ ನೆನಪು.

“ತಮ್ಮ ಸರೋದ್ ವಾದನದಿಂದ ಕೋಟ್ಯಂತರ ಸಂಗೀತಾ ರಸಿಕರ ಮನದಲ್ಲಿ ನೆಲೆಸಿರುವ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಕಲಾವಿದರಾಗಿರುವ ‘ಪಂಡಿತ್’ ಎನಿಸಿಕೊಂಡಷ್ಟೇ ಆಪ್ತವಾಗಿ ‘ಪ್ರೊಫೆಸರ್’ ಎಂದು ಕೂಡ ಕರೆಸಿಕೊಂಡವರು ದ ಶ್ರೀ ರಾಜೀವ್‌ ತಾರಾನಾಥ್‌. ರಾಜೀವರು ಮೈಸೂರನ್ನು ತಮ್ಮ ಜೀವನದ ಕಡೆಯ ಒಂದೂವರೆ ದಶಕವನ್ನು ಕಳೆಯಲು ಆಯ್ಕೆ ಮಾಡಿಕೊಂಡಿದ್ದು ಮೈಸೂರಿಗರ ಪುಣ್ಯವೇನೋ. ಸರೋದ್ ವಾದನದಲ್ಲಿ ಅಪ್ರತಿಮ ವಿದ್ವತ್ ಹೊಂದಿದ್ದ ತಾರಾನಾಥರು ಸರೋದ್ ವಾದನವನ್ನು ಉಸ್ತಾದ್ ಅಕ್ಬರ್ ಅಲಿ ಖಾನರ ಬಳಿ ಸರೋದ್ ಕಲಿಕೆಯ ಅಗಾಧ ಹಸಿವೆಯನ್ನು ಇಂಗಿಸಿಕೊಂಡು ಸಂಗೀತ ಜಗತ್ತಿಗೆ ಹೊಸ ಶಕ್ತಿಯೊಂದಿಗೆ ಪ್ರವೇಶ ಮಾಡಿದರು. ಮನೆಯ ಪರಿಸರದಿಂದಾಗಿ ಸಹಜವಾಗಿಯೇ ಸಂಗೀತದಲ್ಲಿ ರುಚಿ ಬೆಳೆಯಿತು. ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕ ಸಭೆಯಲ್ಲಿ ಹಾಡಿ ಸೈ ಎನ್ನಿಸಿಕೊಂಡ ರಾಜೀವ್ ಅವರಿಗೆ ಶೈಕ್ಷಣಿಕ ಪ್ರಭೃತಿತ್ವ ಸೆಳೆಯಿತು. ಇಂಗ್ಲೀಶ್ ಸಾಹಿತ್ಯದ ವಿದ್ವತ್ತಿನ ಜಗತ್ತು ಕೈ ಬೀಸಿ ಕರೆಯುತ್ತಿತ್ತು. ಅಗಾಧ ಓದಿನ ಅಭ್ಯಾಸವಿದ್ದ ಅವರಿಗೆ ಸಾಹಿತ್ಯದಲ್ಲಿ ಪಿಎಚ್‌ಡಿ ದೊರೆಯಿತು. ಮುಂದೆ ರಾಜೀವ್ ತಿರುಚಿರಾಪಳ್ಳಿಯ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿ ಸೇವೆ. ಸಲ್ಲಿಸಿ ನಂತರ ಮುಖ್ಯಸ್ಥರಾಗಿಯೂ ನೇಮಕವಾಗಿದ್ದರು. 1955ರಲ್ಲಿ ಒಮ್ಮೆ ಪಂಡಿತ್ ರವಿಶಂಕರ್ ಅವರೊಂದಿಗೆ ಉಸ್ತಾದ್ ಅಕ್ಬರ್ ಅಲಿ ಖಾನ್ ಅವರ ಕಚೇರಿ ಆಲಿಸಿದ ತಾರಾನಾಥರು ಕೆಲಸಕ್ಕೆ ರಾಜೀನಾಮೆ ಕೊಟ್ಟು ಕಲ್ಕತ್ತಾದಲ್ಲಿ ಅಕ್ಬರ್ ಖಾನ್ ಅವರ ಶಿಷ್ಯತ್ವದಲ್ಲಿ ಸರೋದ್ ವಾದನದಲ್ಲಿ ಮುಳುಗಿ ಬಿಟ್ಟರು. ಅಲ್ಲಿಗೆ ಭಾರತಕ್ಕೆ ಸಂಗೀತ ಕ್ಷೇತ್ರದ ಧ್ರುವ ತಾರೆಯೊಂದು ದೊರಕಿತ್ತು. ಪಂಡಿತ್ ರಾಜೀವರು ಸರೋದ್ ಹಿಡಿದರೆ ಮಾಂತ್ರಿಕರಾಗುತ್ತಿದ್ದರು. ಮಾತಿಗಿಳಿದರೆ ನೇರ ನುಡಿಯ ಕರಾರುವಾಕ್ಕಾದ ಮಾತುಗಳು. ಅವರು ಯಾರನ್ನೂ ಮೆಚ್ಚಿಸಲು ಮಾತನಾಡಿದ ಸಂದರ್ಭಗಳೇ ಇಲ್ಲವೆನ್ನಬಹುದು. ಅವರ ಸಂಗೀತ ಸೇವೆಗಾಗಿ ಪಂಡಿತ್ ತಾರಾನಾಥರಿಗೆ ಪದ್ಮಶ್ರೀ, ನಾಡೋಜ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಬಂದಿವೆ. ಇತ್ತೀಚಿನವರೆಗೂ ರಿಯಾಜ್ ಮಾಡುತ್ತಾ, ತಮಗೆ ಹುಕಿ ಇದ್ದವರಿಗೆ ಸಂಗೀತ ಕಲಿಸುತ್ತಾ ಸದಾ ಕಾಲ ಸ್ವರಗಳಲ್ಲಿ ಮುಳುಗಿರುತ್ತಿದ್ದ ರಾಜೀವರು ಅಸ್ತಂಗತರಾಗಿದ್ದಾರೆ. ಅವರ ಕೈಯಲ್ಲಿ ಅರಳುತ್ತಿದ್ದ ಸ್ವರಗಳ ಗುಚ್ಛಗಳು ಕಾಲದ ಪಯಣದಲ್ಲಿ ಅಮರವಾಗಿವೆ” ಎಂದು ಅವರನ್ನು ಹತ್ತಿರದಿಂದ ನೋಡಿದ್ದ ಲೇಖಕಿ, ಸಂಗೀತದ ವಿದ್ಯಾರ್ಥಿ, ಮೈಸೂರಿನ ಪ್ರೀತಿ ನಾಗರಾಜ್‌ ತಮ್ಮ ಅಶೃ ತರ್ಪಣ ನೀಡಿದ್ದಾರೆ.

ಕನ್ನಡ ನ್ನಡ ಸಾಹಿತ್ಯದ ಉಚ್ಛ್ರಾಯ ಸ್ಥಿತಿಯಲ್ಲಿ, ನವ್ಯ ಸಾಹಿತ್ಯದೊಂದಿಗೆ ತಮ್ಮನ್ನು ಬೆರೆಸಿಕೊಂಡು ಅನನ್ಯವಾಗಿ ಕೃಷಿ ಮಾಡಿದವರು ರಾಜೀವ್‌ ತಾರಾನಾಥ್‌ ಅವರು. ಮನೋಹರ ಗ್ರಂಥಮಾಲ ಪ್ರಕಟಿಸಿದ ʻಪುಟ ಬಂಗಾರʼ ಸಂಚಿಕೆಗಳಲ್ಲಿ ಅವರ ಬರಹಗಳನ್ನು ಓದಿದವರಿಗೆ ಕನ್ನಡವನ್ನು ಇಷ್ಟು ಅಂತಃಕರಣಪೂರ್ವಕವಾಗಿ, ಅಂತರಂಗದ ಎಲ್ಲ ತಳಮಳಗಳನ್ನು ತಲಸ್ಪರ್ಷಿಯಾಗಿ ಕಂಡರಿಸಲು ಸಾಧ್ಯವೇ ಎಂಬ ಭಾವ ಮೂಡದಿರುವುದಿಲ್ಲ. ಇಲ್ಲೊಂದು ಮಾತು ಹೇಳಲೇ ಬೇಕು. ರಾಜೀವ್‌ ತಾರಾನಾಥರು ಸಾಹಿತ್ಯದಲ್ಲಿ ಪಿಎಚ್ ಡಿ ಪದವಿ ಪಡೆದವರು. ಸ್ವಲ್ಪ ಕಾಲ ಬೋಧಕರಾಗಿದ್ದವರು, ವಿದ್ಯಾರ್ಥಿಗಳ ಅಂತರಂಗ ತಟ್ಟುವಂತೆ ಸಾಹಿತ್ಯ ಕಲಿಸಿದವರು. ಇದ್ದಕ್ಕಿದ್ದಂತೆ. ನಡೆದ ದಾರಿಯ ಹಿಂದಿರುಗಿ ನೋಡಬಾರದು ಎಂಬಂತೆ, ಇಂಗ್ಲಿಷ್‌ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತ ಅಭ್ಯಾಸಿಸಲು, ಕೊಲ್ಕೋತಾಗೆ ತೆರಳಿ, ಅಲ್ಲಿ, ಉಸ್ತಾದ ಅಲಿ ಅಕ್ಬರ್‌ ಖಾನ್‌ ಅವರ ಶಿಷ್ಯರಾಗಿ ಅವರಿಂದ ಸಂಗೀತದ ವಿನಯವನ್ನು ಮೈಗೂಡಿಸಿಕೊಂಡವರು ಎಂದಷ್ಟೇ ಹೇಳಬಹುದು.

ಕನ್ನಡ ಚಿತ್ರರಂಗ ಹೊಸ ಅಲೆಯ ಮೇಲೆ ತೇಲುತ್ತಿರುವಾಗ, ತಮ್ಮ ಕಾಣಿಕೆಯೀ ಇರಲಿ ಎಂದು, ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ, ಮಲೆಯಾಳಂ ಭಾಷೆಯ ಜಿ. ಅರವಿಂದನ್‌ ಅವರ ಕಾಂಚನ್‌ ಸೀತಾ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿ, ಚಿತ್ರದ ಧ್ವನಿಯನ್ನು ಹೆಚ್ಚಿಸಿದವರು ರಾಜೀವ್‌ ತಾರಾನಾಥ್. ‌ ಇಂತಿಪ್ಪ ತಾರಾನಾಥ್‌ ಇನ್ನಿಲ್ಲ. ಅವರ ಕುರಿತು ಬರೆಯಲು ಅಕ್ಷರಗಳ ಶಕ್ತಿ ಸಾಲದು. “ತೊರೆದು ಜೀವಿಸಬಹುದೇ, ರಾಜೀವ್‌ ನಿಮ್ಮ ಚರಣಗಳ ಎಂದಷ್ಟೇ ಹೇಳಬಹುದು”.

Read More
Next Story