Panchamasali Fight | ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿಯಿಂದ ಸುಪಾರಿ: ಜಯ ಮೃತ್ಯುಂಜಯ ಶ್ರೀ ವಿರುದ್ಧ ಆರೋಪ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ʼಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲೆಂದೇ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿಯವರಿಂದ ಸುಪಾರಿ ಪಡೆದಿದ್ದಾರೆʼ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ಆರೋಪಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡಿದರೆ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ಹಿಂದುಳಿದ ವರ್ಗದ ಜಾತಿಗಳ ಒಕ್ಕೂಟ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಕೂಡಲ ಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗಂಭೀರ ಆರೋಪ ಮಾಡಿದೆ.
ʼಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲೆಂದೇ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿಯವರಿಂದ ಸುಪಾರಿ ಪಡೆದಿದ್ದಾರೆʼ ಎಂದು ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಹಿಂದುಳಿದ ವರ್ಗ ಜಾಗೃತ ವೇದಿಕೆ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದಷ್ಟೇ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದ ಸ್ವಾಮೀಜಿ ಈಗ ದ್ವೇಷ ಕಾರುತ್ತಿದ್ದಾರೆ. ಮುಡಾ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣವನ್ನು ಮುಂದಿಟ್ಟುಕೊಂಡು ಅಧಿಕಾರದಿಂದ ಕೆಳಗಿಳಿಸಲು ಕುತಂತ್ರ ನಡೆಸುತ್ತಿರುವ ಬಿಜೆಪಿ ನಾಯಕರು, ಸ್ವಾಮೀಜಿಯನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ. ಸಮಾಜದ ಸಾಮರಸ್ಯ ಹಾಳು ಮಾಡಲು ಕುಮ್ಮಕ್ಕು ಕೊಡುತ್ತಿದ್ದಾರೆ. ರಾಜಕೀಯ ಪುಡಾರಿಯಂತೆ ಹೇಳಿಕೆ ನೀಡುವುದು ಸ್ವಾಮೀಜಿಗೆ ತಕ್ಕುದಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪ್ರವರ್ಗ 2ಎ ಗೆ ಪಂಚಮಸಾಲಿ ಲಿಂಗಾಯತ ಸಮಾಜವನ್ನು ಸೇರಿಸಬಾರದು. ಲಿಂಗಾಯತ ಪಂಚಮಸಾಲಿ ಸಮಾಜ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂದುವರಿದಿದೆ. ಆದರೆ, ಸ್ವಾಮೀಜಿ ಮೀಸಲಾತಿ ವಿಷಯದಲ್ಲಿ ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಕೋಮು ಸಾಮರಸ್ಯ ಕದಡುತಿದ್ದಾರೆ ಎಂದು ಅಹಿಂದ ಮುಖಂಡ ಶಿವಣ್ಣ ಆರೋಪಿಸಿದ್ದಾರೆ.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
- ಬಲಾಢ್ಯ ಸಮುದಾಯಗಳು ಪ್ರವರ್ಗ 2ಬಿಯಲ್ಲಿ ಶೇ 5 ಹಾಗೂ ಸಾಮಾನ್ಯ ವರ್ಗದ ಶೇ 50ರಲ್ಲೂ ಪಾಲು ಪಡೆಯುತ್ತಿದ್ದಾರೆ. 199 ಜಾತಿಗಳಿರುವ ಪ್ರವರ್ಗ 2ಎಗೆ ಪಂಚಮಸಾಲಿಗಳನ್ನು ಸೇರಿಸಬಾರದು
- ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಕಿ-ಅಂಶಗಳನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಹೊಸ ಅಂಕಿ-ಅಂಶಗಳ ಪ್ರಕಾರವೇ ಮೀಸಲಾತಿ ಪ್ರಮಾಣ ಪ್ರಕಟಿಸಬೇಕು.
- ಲಿಂಗಾಯತ ಪಂಚಮಸಾಲಿ ಹಾಗೂ ಇತರ ಮುಂದುವರಿದ ಜಾತಿಗಳನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಸರ್ಕಾರ ಮುಂದಾದರೆ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯಿಂದ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.